Thursday, 31 October 2013

ತೊಟ್ಟು ಹನಿಗಳು !!

ರಕ್ಕಸ
*******
ಸೆರಗಿಗೆ ಕೈ ಹಾಕಿದವನು 
ತೇಪೆಯ ಲೆಕ್ಕಿಸದೆ ಹೋದ
ಕಾಮದ ಹಸಿವಿಗೆ ಕಿವುಡಾದವ 
ಕೇಳಿಯಾನೆ "ಹರಿ"ವ ನಾದ ??

ಜೀವನ 
********
ನಾಳೆಯ ಬೆಳಕಿದೆ ಮುಂದೆ 
ಇಂದಿಗೆ ನಮ್ಮ ಪಯಣ 
ಹಿಂದೆ ನೆನಪಿನ (ನೆರಳಿನ) ಕವನ 

ರಾಜಕಾರಣ 
***********
"ಕೈ ಕೆಸರಾದರೆ 
ಬಾಯ್ಮೊಸರು" 
ಕಮಲವ ಕಿತ್ತ 
ಕೈ ಪಾಳಯದವರೇ 
ಇಂದಿನ ಶಾಸಕರು 

ಹಸಿವು 
*******
ನಕ್ಕಾಗ ಮುತ್ತು 
ಉದುರಿದಂತೆ 
ಅತ್ತಾಗ ತುತ್ತು 
ಸಿಕ್ಕಿದ್ದರೆ??

ಗುಂಡೇಟು 
**********
ಗಾಂಧಿ 
ದೇವದಾಸ್ 
ಇಬ್ಬರೂ ಸತ್ತದ್ದು 
ಗುಂಡೇಟಿಗೇ !!

ಗಾಂಧಿ ಜೇಬಲ್ಲಿ ನೋಟಾದ 
ದೇವದಾಸ್ ಪ್ರೀತೀಲಿ ಗ್ರೇಟಾದ 

                        -- ರತ್ನಸುತ 

Wednesday, 30 October 2013

ರಾಜ, ರಾಣಿ, ಅರಮನೆ !!

ರಾಜಿಯಾಗುವುದು ಬೇಡ
"ಅರಮನೆ" ಅಂದರೆ 
ಅರಮನೆಯನ್ನೇ ಕಟ್ಟೋಣ 
ಮನಸಿನಿಟ್ಟಿಗೆ ಜೋಡಿಸಿ 
ಒಲುಮೆಯ ಸಿಮೆಂಟು ಸುರಿದು 
ಬೆವರ್ಹರಿಸಿ ದೃಢವಾಗಿಸಿ  
ಕನಸುಗಳ ಬಣ್ಣ ಹಚ್ಚಿ 
ಆಸೆಗಳ ಬಾಗಿಲನ್ನಿರಿಸಿ 

ಕಟ್ಟೋಣ ಒಂದನು 
ನಮ್ಮೊಲವಿನ ವ್ಯಾಪ್ತಿಗೂ ಮೀರಿ 
ಉಂಡ ಕಹಿಗಳ ಆಳಕೆ ಕೊರೆದು 
ಅಡಿಪಾಯವಾಗಿಸೋಣ 
ಉಂಡಷ್ಟೂ ಅನುಕೂಲ ನಮಗೆ 
ನಮ್ಮರಮನೆ ಶಾಶ್ವತಗೊಳಲು 
ರಾರಾಜಿಸುವುದು ಬೇಡ ಬೆಳಕಲ್ಲಿ 
ನಂಬಿಕೆಯ ಹಚ್ಚಿಟ್ಟರೆ, ನಿತ್ಯ ಹೊನಲು 

ನನ್ನೆದೆ ಸಿಂಗಾರಗೊಂಡ ಅಂತಃಪುರ 
ಅಲ್ಲಿ ವಿಹರಿಸಲು, ವಿರಮಿಸಲು ಅನುಮತಿ ಇಲ್ಲ 
ಬೇರಾರಿಗೂ ನಿನ್ನ ಹೊರತು 
ನಿನ್ನ ಸಖಿಯರಿಗೂ ನಿಷೇಧ  
ಇನ್ನು ನಿನ್ನದೋ !!
"ಛೀ ತುಂಟ"ನಲ್ಲ"...." ಅನ್ನದಿರು 
ಮಥಿಸದೇ ಸುಧೆಯೀವ ಸಾಗರ 
ಅಲ್ಲಿ ಪ್ರೇಮ ಪಗಡೆ ಆಟ ನನ್ನದು 

ಹೊರಾಂಗಣ ಸಾರಿಸಿದ ಗಂಧ ಲೇಪ 
ಆಧಾರ ಸ್ತಂಬಗಳು ಬೆಳ್ಳಿ ಸಾಲು 
ಕಿಟಕಿಯ ಕೋಲಿಗೆ ಚಿನ್ನದ ಸ್ಪರ್ಶ 
ಪರದೆಯೋ ಮುಟ್ಟಲು ರೇಷ್ಮೆ ನೂಲು 
ಸಿಂಹಾಸನದ ಮೇಲೆ ಉಕ್ಕು ನೋಟ 
ನೀ ನನ್ನ ಪಕ್ಕದಲಿ ಪಟ್ಟದರಸಿ 
ಸಭೀಕರೆಲ್ಲರೂ ಶೃಂಗಾರ ಕವಿಗಳೇ 
ಬಣ್ಣಿಪರು ನವ್ಯ ಪದಗಳ ಶೋಧಿಸಿ 

ನಮ್ಮ ಸಾಮ್ರಾಜ್ಯದಲಿ ನಮ್ಮದೇ ನೇಮ 
ನಿನಗೆ ನನ್ನದು, ನನಗೆ ನಿನ್ನ ಪ್ರೇಮ 
ಸಂಭೋಗ ಕೇವಲ ಕ್ಷಣಿಕ ಅಭಿವ್ಯಕ್ತಿ 
ಅದಕೂ ಮೀರಿದ ಸುಖಕೆ ಇಲ್ಲ ಕ್ಷಾಮ 
ಮಾತಲ್ಲೇ ಮುಳುಗಿಸಿ ಗಿಂಜಿದೆ ಮುತ್ತಿಟ್ಟು
ಇಂದಿಗೆ ಈ ಗಂಜಿ ಕುಡಿಯೇ ನಂಜಿ 
ಇಂದಿನರಮನೆಯುರುಳಿಸಿ ಕಟ್ಟುವ ನಾಳೆ -
- ಮತ್ತೊಂದನು, ಕಟ್ಟಿ ನೋಡು ಬಾಜಿ !!

                                        -- ರತ್ನಸುತ 

Tuesday, 29 October 2013

ಸರ್ವಾಂತರ್ಯಾಮಿ !!

ಹಸಿವನ್ನ ಬದಿಗೊತ್ತಿ 
ಕಾವಿ ತೊಟ್ಟಾಗ 
ನಮ್ಮೊಳಗಿನ್ಹಸಿವು 
ಬಡವಾಯಿತಲ್ಲ ಪ್ರಭು 
ನೀ ಸೃಷ್ಟಿಸಿದ್ದೇ ತಾನೇ 
ಆಸೆ, ಮೋಹ, ಮತ್ಸರ  
ಒಂದು ದುಃಖಕೆ ಮೂಲ
ಮತ್ತೊಂದು ಬದುಕೇ?

ನೀ ಕೊಟ್ಟ ಸುಳುವ್ಹಿಡಿದು 
ಬ್ರಹ್ಮ ಗುಟ್ಟನು ಅರಿತೆ 
ಇಟ್ಟೆ ನಾಲ್ಕು ತಲೆ 
ಕೊಟ್ಟೆ ಒಳ್ಳೆ ರೂಪ 
ಕಮಲವೇರಿಸಿ ಅವನ 
ಹಣೆಬರಹ ಬರೆದೆ 
ಹಣೆಬರಹವ ಬರೆವ 
ಕೆಲಸವನು ಕೊಟ್ಟು 

ಪರಶಿವನ ಮಸಣವ 
ಮನ್ಮಥನ ಬಾಣವ 
ಒಗ್ಗೂಡಿಸುವ ಕಲೆ 
ನನಗಿತ್ತೆ ಗುರುವೇ 
ಕಾಲ ಕಾಲಕೆ ತಿದ್ದಿ 
ರೂಪಿಸಿದೆ ಹೊಸಬರನು 
ಪಾಪ ಕಾರ್ಯಕೆ ಪ್ರತಿ 
ಪುಣ್ಯ ದೇವರ ಹೆಸರು 

ಏರಿಸಿದೆ ಒಬ್ಬನ ಶಿಲುಬೆಗೆ 
ಮತ್ತೊಬ್ಬನಿರುವಿಕೆಯ 
ಸಾಬೀತು ಪಡಿಸಲು 
ಹುಟ್ಟು ಹಾಕಿದೆ ಪ್ರೊಫೆಟ್ಟನ 
ಮನೆ ಬಿಟ್ಟು ಹೊರ ನಡೆಸಿ 
ಜ್ಞಾನಿಗಳ ಮಾಡಿದೆ 
ಅವರವರ ತತ್ವಾಧರ್ಷಗಳ 
ಹೊಸ ಧರ್ಮಗಳಾಗಿಸಿ 

ಮುಗಿಸಿದೆ, ಬಾಗಿಸಿದೆ 
ಮಂಡಿ ಊರಿಸಿ ನಿಲ್ಲಿಸಿ 
ಏಕ ಮತದ ಬಾಳಿಗೆ 
ಸೌಹಾರ್ದತೆಯ ಪ್ರೀತಿಗೆ 
ಅದೇ ಮುಳುವಾಯಿತೇ 
ತಿದ್ದಬೇಕೆ ಮತ್ತೆ ಈಗ ?
ಎಲ್ಲವನ್ನೂ ಅಳಿಸಿ ಹಾಕಿ 
ಮತ್ತೊಮ್ಮೆ ಗೀಚಿ ಕೂತು

ಅಜ್ಞಾನಿ ನಾನು 
ಕೈ ಹಿಡಿದು ಬರೆಸೈಯ್ಯ  
ಧರ್ಮ ಯಾವೊದೋ 
ಅಧರ್ಮ ಯಾವುದೋ ತಿಳಿಸಿ 
ಬೆತ್ತಲಾಗಿರುವೆ ತಂದೆ 
ಇನ್ಯಾರ ಮಾನ ಕಾಯಲಿ 
ದೀಕ್ಷೆ ನೀಡು ಬಾರ 
ಸಮಾನತೆಯ ಉಡುಪು ತೊಡಿಸಿ!!

                            -- ರತ್ನಸುತ 

ಮಧುರ ಮೊದಲಿನ ಮಾಯೆ !!

ಆಕೆಯನ್ನ ಮಾತನಾಡಿಸಲೇಬೇಕು!! ಎಂಬ
ಕಲ್ಪನೆಯೇ ವಿಶೇಷವಾಗಿತ್ತು 
ಮಾತನಾಡಿಸಿ ಆದ ಪರಿಣಾಮ
ಕಲ್ಪನೆಗೂ ಎತ್ತರ, ಆಳ, ವಿಸ್ತಾರ

ಅದ್ಯಾವುದೋ ದಟ್ಟ ಅಲೆಯೊಂದು
ದಿಢೀರನೆ ಹಾರಿ, ಮೈ ಹೊದ್ದು
ನಿಮಿಷವಾದರೂ ಉಸಿರಾಡಗೊಡದೆ
ಆನಂತರ ಜೀವದಾನ ಕೊಟ್ಟಂತೆ ಭಾಸ

ಕಣ್ಣುಗಳು ಥೇಟು ನಾ ಅನಿಸಿದಂತೆಯೇ
ಈ ತುದಿಯಿಂದಾತುದಿ, ದಿಗಂತಗಳ ವ್ಯಾಪ್ತಿ
ಅಲ್ಲಲ್ಲಿ ವಿಶ್ರಮಿಸಿ ಪಯಣಿಸಬೇಕಾಗಿತ್ತು
ಮುಟ್ಟಲು ಕೊನೆಯನ್ನ ಮೊದಲಿಂದ ಬೆಳೆಸಿ

ಮಂದಹಾಸವ ಬೀರಿ ಜಗ್ಗಿದಳು ತುಟಿಯ
ಕೆನ್ನೆ ಹಾದು ಬರಲು ಮೂಗನ್ನು ಬಣ್ಣಿಸಿ
ಗುಳಿಯೊಳಗೆ ಸಿಲುಕಿಸಿ ಒದ್ದಾಡಿಸಿದಳೆನ್ನ
ಪದಗಳಿಗೆ ಮತ್ತಷ್ಟು ದಣಿವನ್ನು ಉಣಿಸಿ

ಮುಖ ಮುದ್ರೆಯೊಂದು ಕೆತ್ತಿಟ್ಟ ಕಲಾಕೃತಿ
ನಾನೊಬ್ಬ ಮಾಮೂಲಿ ಹೊಗಳು ಬಂಟ
ಕೆಲವನ್ನು ಮಾತ್ರವೇ ಬಣ್ಣಿಸಿದೆ, ಮಿಕ್ಕವ
ಮನದೊಳಗೆ ಬೆಚ್ಚಗೆ ಆಸ್ವಾದಿಸುವ ತುಂಟ

ಅವಸರದ ಅವಲೋಕನದಲಿ ಮೆತ್ತಿತ್ತು
ಅವಳ ಕಣ್ಣಂಚಿನ ಕಾಡಿಗೆಯ ಕಪ್ಪು
ಗುರುತಾಗಿಸಿದೆ ದಿನಚರಿಯ ಆ ದಿನಕೆ
ಪುಟದ ಪಾಲಿಗೂ ಸಿಕ್ಕಿದಂತಾಯ್ತು ಹುರುಪು !!

                                           -- ರತ್ನಸುತ 

Monday, 28 October 2013

ನೋಟೀಸು, ನೋಟೀರ್ಸು !!

ಹಿಡಿದಿಟ್ಟ ಕಂಬನಿ ಪದವಾಗೋ ಮುನ್ನ 
ಮೆಲ್ಲಗೆ ತುಟಿ ಅರಳಿ ಮಾತಾಡಲೆನ್ನ 
ಅಪ್ಪಿ ಸಾಂತ್ವನಕೆ ಮುಂದಾಗದಿರು ಗೆಳತಿ 
ಇದ್ದಂತೆ ಇರಲು ಬಿಡು ಹೀಗೆಯೇ ಚನ್ನ 

ಬಿಗಿದಿಟ್ಟ ಮುಷ್ಟಿಯಲಿ ತಗೆದಿಟ್ಟ ಹೃದಯವಿದೆ 
ಬೆರಳ ಸಂದಿಗಳಿಂದ ರಕ್ತ ಚಿಮ್ಮಿ 
ಇನ್ನೂ ಬಡಿದಾಡುತಿದೆ ನೋವಿನಲ್ಲೇ 
ನೋಡಿ ಬೆಚ್ಚದಿರು ಈ ಕೃತ್ಯವನ್ನ 

ಬೆನ್ನ ಮೇಲೆ ಬಾಸುಂಡೆ ಏಟಿನ ಗುರುತು 
ಕಾಣದಂತೆ ಅಡಗಿಸಿಟ್ಟಿರುವೆ ನಾನು 
ಏನೆಂದು ಕೇಳಿದರೆ, ನನ್ನ ಉತ್ತರ ಮೌನ 
ಎದುರಿಸಲಾರೆ ನಿನ್ನ ಪ್ರಶ್ನೆಗಳ ಬಾಣ 

ಬರುವ ಮುನ್ನವೇ ಮನವ ಗುಡಿಸಿಡುವೆ ಸ್ವಚ್ಛ 
ಎಲ್ಲವೂ ಮೊದಲಿನಂತೆಯೇ ಇರುವ ಹಾಗೆ 
ನೀ ಅಲ್ಲಿ ಲೋಪಗಳ ಹುಡುಕಿ ಕೂರದಿರು 
ಮತ್ತೆ ಹಳೆ ನೆನಪುಗಳ ಬಯಸುವುದು ಪ್ರಾಣ 

ನಿನಗೆ ನಾ ಕೊಟ್ಟ ಆ ಮೊದಲ ಹೂ ಗುಚ್ಛದಲಿ  
ಹಿಡಿ ಭಾಗದಲ್ಲಿ ಮುಳ್ಳುಗಳ ಸೆರೆಯಾಗಿದೆ 
ದಳಗಳೆಲ್ಲವೂ ಉದುರಿ ಹೋದವು ದಿನಗಳೆದು //ಒಲವಂತೆ//
ಮುಳ್ಳಿನ ಅಸ್ತಿತ್ವವದರ ಅಸಲೀತನ 

"ಮರೆತು ಬಿಡು" ಅನ್ನುವುದು ತುಸು ಕಷ್ಟವೇ ಸರಿ 
ಹೇಳುಗರಿಗೂ, ಕೇಳುಗರಿಗೂ, ಓದುಗರಿಗೂ, ನೋಡುಗರಿಗೂ 
ಅದಕಾಗಿಯೇ ದೂರವಾದೆ ನುಡಿಯದೆ ಏನೂ 
ಓಹ್ ಜೀವವೇ ಒಮ್ಮೆ ಕ್ಷಮಿಸಿ ಬಿಡು ನನ್ನ !!

                                                -- ರತ್ನಸುತ 

Thursday, 24 October 2013

ಒಂದ್ಚೂರ್ ಇತ್ಲಾಗ್ಕೇಳಮ್ಮಿ

ಕಾದಿದ್ದೆ ದಾರೀಲಿ
ನಿಂಗೋಸ್ಕ್ರ ಅಂತ
ಗಡಿಯಾರ ಹಿಂದಿತ್ತಾ ?
ತಡ್ವಾಗ್ ಬಂದೆ !!
ಹೂ ಕೊಟ್ಟು ಕಾಲೂರಿ
ನಾ ನಾಚಿದ್ದೆ
ನೀ ಕಾಲು ಬೆರ್ಳಲ್ಲಿ
ಏನೋ ಬರಿತಿದ್ದೆ !!

ಮನ್ಸಲ್ಲಿ ಏನೋ
ಇದ್ದಂಗಿತ್ತು
ಆದ್ರೂ ಓಡೋದೆ
ಏನೂ ಹೇಳ್ದೀರ
ನಂಗೂ ಏನೂ
ತೋಚ್ದೆ ಹೋಯ್ತು
ನನ್ಪಾಡಿಗ್ ಹಿಂದಿರ್ಗ್ದೆ
ಸುಮ್ಕೆ ಕಲ್ದೀರ

ಆವತ್ತು ಏನಾರ
ಮಾತಾಡ್ಬೇಕಿತ್ತು
ಇತ್ಯರ್ಥ ಆಗೋದು
ಎರ್ಡ್ರಲ್ಲೊಂದು
ಏಟಾದ್ರೂ ಕೊಟ್ಟಿದ್ರೆ
ನೆಮ್ದಿ ಇರ್ತಿತ್ತು
ನಾನಂದ್ರೆ ನಿಂಗಿಷ್ಟ
ಇಲ್ಲ ಅನ್ಕೊಂಡು

ಬದ್ಕೇ ಪ್ರಶ್ನೆ
ಆಗ್ಬಿಟೈತಮ್ಮಿ
ಬ್ಯಾಸ್ರ ಉಸ್ರಾಟುಕ್ಕೂ
ಈಗೀಗ
ನೀನೆ ನೋಡೇಳು
ಬಾ ಇತ್ಲಾಗ್ಚೂರು
ವಾಸಿ ಆಯ್ತಿಲ್ಲ
ಯಾವ್ದೀ ದೊಡ್ರೋಗ ?!!

              -- ರತ್ನಸುತ

ಹವಾಮಾನಕೆ ಅವಮಾನ/ ಗುಣಗಾನ

ಬಣ್ಣ ಹಚ್ಚಿದೆ ಬಾನು
ನೂತನ ದಿನದಾಟಕೆ
ಹೊತ್ತೊತ್ತಿಗೊಂದೊಂದು ಪ್ರಕಾರದಲ್ಲಿ

ಇಂದೇಕೋ
ಶೋಕ ನಾಟಕವಿರಬೇಕು
ಜಾರಿಸದೆ ಕಣ್ಣಂಚಿನಲಿ
ಹಿಡಿದಿಟ್ಟಿದೆ ಕಂಬನಿಯ

ಆಸಕ್ತರೋ ನಿರಾಸಕ್ತರೋ
ಒಮ್ಮೆ ತಲೆಯೆತ್ತಿ
ಗಮನಿಸುವರು ಚೂರು

ಅಲ್ಲಿ ಶೋಕ ವಿಪರೀತಗೊಂಡರೆ
ಇಲ್ಲಿಯ ನಾಟಕಕ್ಕೆ ತೆರೆ
"ಅನಾವರಣ/ಅಂತ್ಯ "

ಆದರೊಬ್ಬಳಿದ್ದಾಳೆ,
ರೆಪ್ಪೆ ಅಲುಗಿಸದೆ ನೋಡುತ
ಅವಳೇ ಈ "ಧರೆ"

ನಾಟಕ ಸುಳ್ಳಾದರೆ
ಕೋಪ ಶಮನಕ್ಕೆ
ಉರುಳುವುದೊಂದೆರದು ಪ್ರಾಣ  //ಅವಮಾನ //

ನಿಜವಾದರೆ
ನಿಲ್ಲದ ಗುಣಗಾನ
ಪಾತ್ರಧಾರಿಗಳಿಗೆ ಸನ್ಮಾನ

                   -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...