Thursday, 8 October 2015

ಇಷ್ಟದ ಕವಿತೆ


ನಿನ್ನ ಕವಿತೆಯಾಗಿಸುವ ಬರದಲ್ಲಿ
ಕವಿಯಾಗಲೊಪ್ಪದ ಮನ
ಒಂದೊಂದೇ ಅಕ್ಷರವ ಪೋಣಿಸುವಾಗ
ಬೆರಳ ಕಚ್ಚಿಕೊಳ್ಳುತ್ತೇನೆ


ನೆತ್ತರ ಘಮಲಿನ ಸೋಂಕಿಗೆ ಬೆಚ್ಚಿ
ಎದೆ ಭಾಗದ ಅಂಗಿಗೆ ಒರೆಸಿಕೊಂಡಾಗ
ಅಲ್ಲೂ ಮೂಡಿತು ಕವಿತೆ
ನೀ ಅಲ್ಲೂ ಅರಳುತ ಕುಳಿತೆ!!


ಇಷ್ಟೇ ಸಾಕೆಂದು ಬಿಟ್ಟಾಗ
ಮತ್ತಷ್ಟು ಭಾವ ತಂತಿಯ ಬಿಗಿದು
ನೀ ಏಕಮುಖವಾಗಿ ಮೀಟುವಾಗ
ನಾ ವಿಮುಖನಾಗಲು ಹೊರಟೂ
ಪ್ರಮುಖನಾದದ್ದೇ ಸೋಜಿಗ


ಗಾಜಿನ ಮೇಲೆ ಗಾಜನು ಜೋಡಿಸಿಯೂ
ಸ್ಪಷ್ಟತೆ ವಿರಾಜಮಾನವಾಗಿರುವಾಗ
ಯಾವ ಸಂಶಯಕ್ಕೆ ಬಲಿಯಾಗಬೇಕು?
ಬಹುಶಃ ನಾವು ನಿಜವಾಗಿ ಕಣ್ದೆರೆಯಬೇಕು!!


ಕಿರುಬೆರಳ ಕೊನೆ ಆಸೆ
ನಿನ್ನ ಕಿರುಬೆರಳ ಸಹವಾಸ
ಜೀವದ ಬೇಡಿಕೆ ನಿನ್ನ ಶ್ವಾಸ
ಅದರಾಚೆ ಬರೆದ ಕವಿತೆಗಳೆಲ್ಲ
ತೀರಾ ಮೋಸಕ್ಕೆ ಮೋಸ!!


ಕವಿತೆ ಸಿದ್ಧವಾಗುವುದಿಲ್ಲ
ಒಪ್ಪೊತ್ತಿನ ಅಡುಯಂತೆ
ಅದ ಕಟ್ಟುತ್ತಲೇ ಇರಬೇಕು
ಗಿಟ್ಟಿಸಿಕೊಂಡಂತೆ ಕಷ್ಟಕ್ಕೆ
ಹುಟ್ಟಿಸಿ ಬಿಟ್ಟಂತೆ ಇಷ್ಟಕ್ಕೆ!!


                       -- ರತ್ನಸುತ

Monday, 5 October 2015

ಕಣ್ಣ ಹನಿಯೊಂದಿಗೆ


ಕಣ್ಣಲ್ಲಿ ಹನಿಯೊಂದು ಗೀಚಿಟ್ಟ ಕವನಕ್ಕೆ
ನೀ ಬಂದು ಹೊರಳಿ ಓದುವ ಕಾತರ
ನಿನ್ನ ಹೊರತು ಬೇರೆ ಯಾರಿಗೇ ಕಂಡರೂ
ಉರುಳಿ ಬಿಟ್ಟ ಜಾಡಿಗೂ ಬೇಸರ



ಇಷ್ಟು ಸಾಲದು ಎಂದು ಇನ್ನಷ್ಟು ನೋಯುವೆನು
ನಿನ್ನ ಓಲೈಕೆಯನು ಎದುರು ನೋಡಿ
ಕಷ್ಟ ನಷ್ಟಗಳೆಲ್ಲ ಲೆಕ್ಕವೆನಿಸೋದಿಲ್ಲ
ಎಣಿಸಿ ಕೂರುವ ವೇಳೆ ನಿನ್ನ ಕೂಡಿ



ಒಮ್ಮೆ ವಾಲುವೆ ಭುಜಕೆ ಕಣ್ಣೀರ ನೆಪವೊಡ್ಡಿ
ಕೆನ್ನೆ ಪೂರಾ ಸುಕ್ಕುಗಟ್ಟುವಂತೆ
ಅಲ್ಲೇ ಒಂದು ಸಣ್ಣ ನಿದ್ದೆಗೆ ಜಾರುವೆನು
ಚಂದ ಕನಸೊಂದು ಬಿಗಿದಪ್ಪುವಂತೆ



ಭಾಷೆಯಾಚೆಗೆ ಒಂದು ಸಂಭಾಷಣೆ ಇರಲಿ
ನವರಸಗಳ ಪರಿಚಯ ಆಗಲಿ
ಸರಸಗಳಿಗೊಂದು ಹಣೆಪಟ್ಟಿ ಬಿಗಿದಿರಿಸುವ
ವಿರಸಗಳಿಗಾವ ಗುರುತಿಲ್ಲದಿರಲಿ



ಒರೆಸು ಬಾ ಕಣ್ಣೀರ ಮಗುವಂತೆ ಪ್ರಶ್ನಿಸುತ
ಕೊಟ್ಟ ಉತ್ತರವನ್ನು ಒಪ್ಪದಂತೆ
ಜಾರಿದ ಪ್ರತಿಯೊಂದು ಹನಿಯ ಲೆಕ್ಕಕೆ ನೀಡು
ಸಿಹಿ ಮುತ್ತಿನ ಕೊಡುಗೆ ತಪ್ಪದಂತೆ

                                             
                                          -- ರತ್ನಸುತ

Thursday, 1 October 2015

ಗೋಣಿಚೀಲ


ಅಟ್ಟದ ಮೇಲೆತ್ತಿಟ್ಟ
ಪತ್ತೆ ಹಚ್ಚದ
ಅದೆಷ್ಟೋ ಗೋಣಿಚೀಲಗಳು
ತಾತ ಮುತ್ತಾತಂದರು ಕೂಡಿಟ್ಟ ಆಸ್ತಿಯೇ?


ಒಂದೊಂದನ್ನೇ ಕಳಚುತ್ತ ಕೂತೆ,
ಒಂದಷ್ಟು ನಾರುವ ಜಮೀನು ಪತ್ರಗಳಲ್ಲಿ
ಹೆಬ್ಬೆಟ್ಟಿನ ಅಚ್ಚುಗಳು
ಖರೀದಿಯ ಪುರಾವೆಗಳಾಗಿದ್ದವು


ಅಲ್ಲಿಯವರೆಗೆ ಮುಚ್ಚಿಟ್ಟ ಮೂಗು
ಕಣ್ಣು, ಬಾಯಿ ಬಿಟ್ಟು ನೋಡತೊಡಗಿತು,
ನಾನು ಆಗರ್ಭ ಶ್ರೀಮಂತ!!


ಅಲ್ಲೇ ಪಕ್ಕದಲ್ಲಿ ದಬ್ಬಳದಲ್ಲಿ ಹೊಲಿದ
ಗಾಣಿಗೆ ಚೀಲದ ಒಳಗೆ
ಕೊಳೆತು ನಾರುತ್ತಿದ್ದ
ಬೆವರಲ್ಲಿ ಓರಣವಾಗಿದ್ದ ಮಾಂಸದಂತಿದ್ದ
ಪಾಪದ ಸರಕು ಭಯ ಹುಟ್ಟಿಸಿತು


ಧಡ ಧಡನೆ ನಾಲ್ಕು ಹೆಜ್ಜೆ ಹಿಂದಿಟ್ಟು
ಕೈಲಿದ್ದ ಜಮೀನು ಪತ್ರಗಳನ್ನ ಎದೆಗೊತ್ತಿ
ಅಸಡ್ಡೆಯಿಂದ ಮುಖ ಕಿವುಚಿಕೊಂಡೆ,
ಪಾಪಗಳೆಲ್ಲ ನಕ್ಕವು!!


ನಗು ನನ್ನ ಬೆವರಿಳಿಸಿ
ತಲೆಮಾರಿನ ಆಸ್ತಿ ಪತ್ರಕ್ಕೆ ಅಂಟಿಕೊಂಡಾಗ
ನಾ ಅದರ ವಾರಸುದಾನೆಂಬ ನಂಬಿಕೆ ಹುಟ್ಟಿತು,
ಪಾಪಗಳೆಲ್ಲ ಅಲ್ಲೇ ಕಳೆತವು


ಅಪ್ಪ ಬೇಡವಾಗಿಸಿಕೊಂಡ
ನಾನೂ ಬಿಟ್ಟು ಬಂದ
ಇನ್ನೂ ತುಂಬಿಲ್ಲದ್ದು
ತುಂಬಿಸಿಕೊಳ್ಳುತ್ತಲೇ ಇದೆ
ನನ್ನ ಮುಂದಿನ ಪೀಳಿಗೆಯ ನಿರ್ಲಕ್ಷ್ಯಕ್ಕಾಗಿ!!


                                               -- ರತ್ನಸುತ

Tuesday, 29 September 2015

ಮುಗಿಯಲಾರದೆ


ಎಂದೆಂದೂ ನಿನ್ನ ಕೊಂಡಾಡುವಂಥ
ಕಲೆಯೊಂದ ಕಲಿಸು ಬಾರೆ
ಪಳ ಪಳನೆ ಹೊಳೆವೆ ಒಂದೇ ಸಮನೆ
ಕೋಲಾರ ನಿನ್ನ ಊರೇ?!!


ಹೃದಯದಲಿ ನಿನ್ನ ಹೊರತಾಗಿ ಯಾರೂ
ಬಿಟ್ಟಿಲ್ಲ ಹೆಜ್ಜೆ ಗುರುತು
ಅನುಮಾನವನ್ನು ಬಗೆಹರಿಸಿಕೊಳಲು
ದುರ್ಬೀನು ಹಾಕಿ ಹುಡುಕು


ಮರೆತಂತೆ ನಿನ್ನ ಹೆಸರನ್ನು ನೆನೆದು
ನಟಿಸುತ್ತ ಕಾಡಬೇಕು
ನಿನಗೊಂದು ಮುದ್ದು ಹೆಸರಿಟ್ಟು ಕರೆವೆ
ದಯಮಾಡಿ ತಿರುಗಬೇಕು


ಅಲ್ಲಲ್ಲಿ ನನ್ನ ಕೊಲ್ಲುತ್ತೆ ನಿನ್ನ
ನಗುವೊಂದೇ ರಾಮ ಬಾಣ
ನೀ ಕೊಟ್ಟು ಬಿಟ್ಟ ನೆನಪಿನ ಬುಟ್ಟಿ
ಮನಸಿಗೆ ಪಂಚಪ್ರಾಣ


ಎಲ್ಲಿದ್ದರೇನು ಹೇಗಿದ್ದರೇನು
ನಿನ್ನಲ್ಲಿ ಬಂಧಿ ನಾನು
ಕನಸಲ್ಲೂ ನಿನ್ನ ಎದೆ ಬಾಗಿಲಲ್ಲಿ
ಕಾಯುತ್ತ ಕೂರಲೇನು?


ಇಷ್ಟಕ್ಕೆ ಎಲ್ಲ ಮುಗಿದಿಲ್ಲ ಕೇಳು
ಉಳಿಸಿಟ್ಟೆ ಚೂರು ಬಾಕಿ
ನನ್ನರ್ಧ ಜೀವ ಕೈ ಜಾರಿ ಹೋಯ್ತು
ಹೊರಟಾಗ ನೀನು ಸೋಕಿ!!


                                  -- ರತ್ನಸುತ

Monday, 28 September 2015

ಅತೀತ


ಅತಿ ಸಣ್ಣ ಸುಳ್ಳು
ನಮ್ಮೊಲವಿಗೊಂದು
ಹುಳಿ ತೊಟ್ಟು ಹಿಂಡುವಾಗ
ಮಂಜು ಹನಿಯೇ
ಅಂಜಿಕೆಯೇ ಬೇಡ
ಒಡೆವಂತದಲ್ಲ ಪ್ರೇಮ


ಅತಿ ಘೋರ ಕನಸು
ಮಿತಿ ಮೀರುವಾಗ
ಗತಿಗೆಡುವ ಶಂಕೆಯೇಕೆ?
ಕಣ್ತೆರೆದು ನೋಡು
ನಿಜವುಂಟು ಎದುರು
ಉಲ್ಲಾಸದಲ್ಲಿ ನಲಿದು


ಅತಿ ಮೌಲ್ಯವಾದ
ಉಡುಗೊರೆಯ ಕೇಳು
ಕೊಡಬಲ್ಲೆ ನಿಮಿಷದಲ್ಲೇ
ಒಂದೊಮ್ಮೆ ಕಿರಿದು
ಅನಿಸಿದರೆ ಹೇಳು
ಹೃದಯವನೇ ಸೀಳಿ ಕೊಡುವೆ


ಅತಿ ಮದುರ ವಾಣಿ
ಶೃತಿಗೊಪ್ಪೋ ವೀಣೆ
ನಿನ್ನ ಕಣ್ಣ ಚಲನ
ಎದೆಯಲ್ಲಿ ಬಿಡದೆ
ಗುನುಗುಟ್ಟುವಂಥದಾ-
ನಿನ್ನ ತುಂಟ ಮಾತು


ಅತಿರೇಖವಲ್ಲ
ಅತಿ ಸರಳವಾದ
ಬಣ್ಣನೆಗೂ ಸಿಗುವ ನೀನು
ಚಿರಪರಿಚಯಕ್ಕೂ
ಮರು ಪರಿಚಯಿಸುವ
ಅಪರೂಪವಾದ ಚೆಲುವೆ!!


                     -- ರತ್ನಸುತ

Wednesday, 23 September 2015

ಬಣ್ಣದ ಗುರುತು


ಚಿಟ್ಟೆ ಹಾರಿ ಬಂತು
ಏನೊ ಅಂತು
ಭುಜದ ಮೇಲೆ ಕುಂತು


ಅರ್ಥವಾಗಲಿಲ್ಲ ನನಗೆ
ಎಳ್ಳಿನಷ್ಟೂ
ಅದರ ಮಾತು


ಚಿಟ್ಟೆ ಹಾರಿ ಹೋಯ್ತು
ಚೂರು ಬಣ್ಣ
ಅಲ್ಲೆ ಮೆತ್ತಿ ಬಿಟ್ಟು


ನೆತ್ತರೋ, ನೆಕ್ಟರೋ
ಯಾವ ಹೂವ ಕಣ್ಣೀರೋ
ಬಿಡಿಸಲಾಗದೊಗಟು


ಗೊಂದಲದಲೇ ಹೊರಟು ನಿಂತೆ
ಬೂಟಿನಡಿ ಅಳುವ ಸದ್ದು
ಹೊಸಕಿ ಬಿಟ್ಟ ಚಿಗುರು
ದುಃಖಿಸಿತು ಪೊಗರು


ಚಿಟ್ಟೆ ಮತ್ತೆ ಕಾಣಲಿಲ್ಲ
ಭುಜದ ಬಣ್ಣ ಮಾಸಲಿಲ್ಲ!!


                           -- ರತ್ನಸುತ

Monday, 21 September 2015

ನಾನು ಯಾರು?

ಒಂದು ಕುಂಚವಿದ್ದರೆ ಕೊಡಿ
ಬಣ್ಣದಲಿ ಅದ್ದದೆಲೆ
ನನ್ನ ನಾನೇ ರೂಪಿಸಿಕೊಳ್ಳಬೇಕು


ಒಂದು ರೀತಿ ಮಾಯಾ ಕುಂಚವಂದುಕೊಳ್ಳಿ,
ನನ್ನ ಯಾರೂ
ಬಣ್ಣ ಹಚ್ಚಿಕೊಂಡವ ಅನ್ನಕೂಡದು ಅಷ್ಟೆ


ಇದು ನನ್ನ ಕೊನೆ ಆಸೆ,
ಕೊನೆಗಳನ್ನೆಲ್ಲ ಅಲ್ಲೇ ಕೊನೆಗೊಳಿಸಿ
ಕೊನೆಗೆ ಕೊನೆ ತಲುಪಿದ್ದೇನೆ


ಬಣ್ಣ ಹಚ್ಚಲೇ ಬೇಕಾದರೆ
ಕುಂಚದ ತುತ್ತ ತುದಿಗೆ
ನನ್ನ ಅಹಮ್ಮಿನ ಪರಿಚಯವಾಗಿಸಿ
ನಂತರ ಬಂಡಾರದಲಿ ಅದ್ದುತ್ತೇನೆ
ಬಣ್ಣ ಅಷ್ಟಕ್ಕೂ ಹತ್ತಿದರೆ ನಂತರದ ಮಾತು


ಇಲ್ಲಿ ನೋಡಿ
ಹೇಗನಿಸುತ್ತಿದ್ದೇನೆ ಈಗ?
ಗೊಂದಲವಿಲ್ಲದೆ ನಿಜ ಹೇಳಿ
ನಾನು ಬದುಕುತ್ತಿರುವುದೇ ನಿಮಗೋಸ್ಕರ,
ಅಷ್ಟಲ್ಲದೆ ಕಸರತ್ತು ನಡೆಸುವ ದರ್ದೇನಿತ್ತು?!!


ಸರಿ, ನಿಮಗೊಪ್ಪಿಗೆಯಾಗುವವರೆಗೂ
ನನ್ನ ಮರು ರೂಪಿಸಿಕೊಳ್ಳುತ್ತಲೇ ಇರುತ್ತೇನೆ
ಸರಿಯೆನಿಸಿದಲ್ಲಿ ನಿಲ್ಲಿಸಿ, ಅಲ್ಲೇ ನಿಲ್ಲುತ್ತೇನೆ..
ಮತ್ತಿನ್ನಾರೋ ರಾಗ ತೆಗೆಯದ ವಿನಹ!!


ಒಂದೆಡೆ ನಿಲ್ಲದ ನನಗೆ
ನೀವೇ ಒಂದು ಹೆಸರಿಟ್ಟುಬಿಡಿ
ಸ್ವಂತಿಕೆಯೇ ಇರದ ನನಗೆ 
ಇಟ್ಟ ಹೆಸರಲ್ಲೇ ಕರೆಯಬೇಕೆಂಬ ಆಸೆಯಿಲ್ಲ
ಇದ್ದರೂ, ಅದು ಎಂದೋ ಸತ್ತು ಹೋಗಿದೆ


ನಾನು ನಾನಲ್ಲ ಎಂದು ನಂಬಿಸುವುದಕ್ಕೆ
ಯಾವುದೇ ಪುರಾವೆಗಳು ಬೇಕಿಲ್ಲ
ನಾನು ನಿಮ್ಮ ಮಾತನ್ನು ನಂಬುತ್ತೇನೆ
ನಂಬಿಕೆಯೇ ನನ್ನ ಇಷ್ಟು ದೂರ ಕರೆ ತಂದದ್ದು!!
ಈಗ ಹೇಳಿ ನಾನು ಯಾರು?!!
                                         -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...