Monday, 24 August 2015

ಹೀಗೂ ಬದುಕ ಕಟ್ಟಿಕೊಳ್ಳೋಣ

ಗಾಳಿ ಎತ್ತ ಬೀಸುತ್ತದೆಯೋ
ಅತ್ತಲೇ ವಾಲಿಬಿಡೋಣ
ಜೋಡಿ ಗರಿಕೆಯ ರೀತಿ


"ಇಬ್ಬನಿ ಹಿಂಗುವುದರ ಹಿಂದೆ
ಯಾವುದೋ ಸಂಕಲ್ಪವಿರಬಹುದು"
ಹೀಗಂದುಕೊಂಡೇ ಬೆವೆತುಬಿಡೋಣ


ಯಾರೋ ಇಟ್ಟ ಪಾದದಡಿಯ
ಗಂಧವೋ, ಕೆಸರೋ, ಧೂಳೋ
ನಮ್ಮ ಸೋಕುವುದು ಖಚಿತ,
ಮತ್ತೆ, ಮತ್ತೆ ಮಳೆಯನ್ನ ನೆನೆಯೋಣ
ಮತ್ತೇರುವಂತೆ ನೆನೆಯೋಣ


ಸೂರ್ಯೋದಯಕೆ ಗರಿ ಬಿಚ್ಚಿ
ಸೂರ್ಯಾಸ್ಥಮಕೆ ಬಿಗಿದಪ್ಪಿ
ಮಿಕ್ಕಂತೆ ತುಂಬೊಲವಲ್ಲಿ ತಲ್ಲೀನರಾಗಿ
ತಂಗಾಳಿಗೆ ಪರಿಚಿತರಾಗೋಣ


ಇದ್ದೂ ಇರದಂತೆ ನೊಂದು
ಇರದೆಯೂ ಇದ್ದಂತೆ ಬಿರಿದು
ಒಮ್ಮೆ ಮೊಗ್ಗು, ಒಮ್ಮೆ ಹಿಗ್ಗಿ
ಹೂವಾಗುವಾಸೆಯಲೇ ಸವೆಯೋಣ


ಹಸಿರಾಗಿ, ಕೆಂಪಾಗಿ
ಕಂದಾಗಿ, ಕಪ್ಪಾಗಿ
ಮುಪ್ಪಲ್ಲಿಯೂ ಒಪ್ಪುವಂತಾಗೋಣ
ಸಾವಲ್ಲಿಯೂ ಜೊತೆಯಲೊಂದಾಗೋಣ!!


                                            -- ರತ್ನಸುತ

ಒಮ್ಮೊಮ್ಮೆ ನಾನು

ಅರ್ಥವಿಲ್ಲದ ಮಾತಿಗೆ
ಒಳಾರ್ಥಗಳು ಸಾಕಷ್ಟಿದ್ದವು
ಆದರೂ ಅನರ್ಥಕ್ಕೇ ಮಣೆ ಹಾಕಿದೆ


ಒತ್ತಿ, ಒತ್ತಿ ಹೇಳಿಕೊಟ್ಟದ್ದ ಬದಿಗೊತ್ತಿ
ಗೊತ್ತಿದ್ದೂ ಹುಂಬನಾಗುವುದರಲ್ಲಿ
ನನಗೆ ಎಲ್ಲಿಲ್ಲದ ವಿಕೃತ ಖುಷಿ


ದ್ರಾಕ್ಷಾರಸದ ಮತ್ತಿಗಿಂತ ಮಿಗಿಲಾದ
ಅಮಲಿನ ದ್ರವ್ಯದ ಹುಡುಕಾಟದಲಿ
ನಿಶೆಯೇರಿಸಬಲ್ಲ ಎಷ್ಟೋ ಲಾಯಕ್ಕಾದವುಗಳ
ಕಡೆಗಣಿಸಿ ಅಪರಾಧವನ್ನೆಸಗಿದ್ದೇನೆ!!


ತುಟಿಗೆ ಬಂದ ಮಾತು
ಮನಸನು ಹಗುರಾಗಿಸದೆ ಹೋದಾಗ
ನುಂಗಿಕೊಂಡಾಗಿನ ಸಂಕಟಕೆ
ಆಡಿದ ಮಾತುಗಳ ಅಭಾವವೇ ಸಾಕ್ಷಿ


"ಬೆರಳ ತುದಿಯಲ್ಲಿ ತೋರುವುದಷ್ಟೇ ಹೊರತು
ಹಿಡಿಯಲು ಮುಷ್ಟಿ ಬಿಗಿಯಲೇ ಬೇಕು"
ಸತ್ಯವ ಮರೆತು ಅತೃಪ್ತ ಬೇತಾಳನಾಗಿದ್ದೇನೆ
ನನ್ನದೇ ಸಂತೆಯಲಿ ನಾನೊಬ್ಬನೇ ಅಲೆದಾಡಿ


ಎಲ್ಲವನ್ನೂ ಅಪೂರ್ಣದಲ್ಲೇ ಕೊನೆಗೊಳಿಸುತ್ತೇನೆ
ಎಲ್ಲವನ್ನೂ......


                                                   -- ರತ್ನಸುತ

ಎಲ್ಲವೂ ಹೊಸತು

ಮದುವೆ ಹೊಸತರಲ್ಲಿಯ ಎದುರುನೋಟಗಳು
ಒಂಥರ ಚಿವುಟಿ ಕಚಗುಳಿಯಿಟ್ಟಂತೆ
ನೋವಲ್ಲೂ ಹಿತ, ಹಿತದಲ್ಲೂ ನೋವು


ಆಫೀಸಿನ ಕೆಲಸದ ನಡುವೆ ಫೋನು
ಮಾತು...ಮಾತು... ಮತ್ತಷ್ಟು ಮಾತು
ಯಾರು ಮೊದಲು ಫೋನಿಡುವೆನೆಂದರೂ
ಆಚೆ ಬದಿಯಿಂದ ಜೋರು ಸಪ್ಪೆ ಸದ್ದು


ಕಾಡಿಸಿಯಾದನಂತರ ಮುದ್ದಿಸಿ
ಮುದ್ದಿಸುತ್ತಲೇ ಕಾಡಿಸುವ ಪರಿ
ಅದು ಎಲ್ಲೂ ಕಲಿತ ವಿದ್ವತ್ತಲ್ಲ
ಸ್ವಾಭಾವಿಕ ಪ್ರಕ್ರಿಯೆಯಷ್ಟೇ ಪಕ್ವ


ಎಲ್ಲರ ಕಣ್ತಪ್ಪಿಸಿದ ತುಂಟಾಟ
ಎಲ್ಲರೆದುರು ಬಯಲಾದಾಗ ನಾಚಿ
"ಆದರೇನಂತೆ?" ಎಂದು ಲೈಟಾಗಿ ತಗೆದುಕೊಳ್ಳುವುದರಲ್ಲೂ
ವಿಚಿತ್ರವಾದ ಮಜ ಸಿಗುತ್ತೆ


ಕಾಫಿಯ ಸಕ್ಕರೆ
ಸಾರಿನ ಖಾರ
ಸ್ನಾನದ ನೀರು
ಬಟ್ಟೆಯ ಇಸ್ತ್ರಿ
ಶೂವಿನ ಪಾಲಿಶ್
ರಾತ್ರಿಯ ಗೊರಕೆ
ಗುಡ್ ಮಾರ್ನಿಂಗ್
ಗುಡ್ ನೈಟ್ ವಿಶ್ಗಳು
ಲವ್ ಯೂಗಳು
ಯಾವತ್ತೂ ಇಷ್ಟೋಂದು ಮಹತ್ವ ಪಡೆದುಕೊಂಡಿರಲಿಲ್ಲ


ಸೀರಿಯಸ್ಸಾಗಿ ಸುಳ್ಳಾಡುವ
ತಾಲೀಮು ನಡೆದಿದೆ
ಚೂರು ಕಷ್ಟವಾದರೂ
ಆಗಾಗ ಕೆಲಸಕ್ಕೆ ಬಂದಾಗ
Its worthwhile!!
But, ಆಕೆ ಎಲ್ಲವನ್ನೂ ಗಮನಿಸುತ್ತಾಳೆ
She's intelligent than me!!


                                      -- ರತ್ನಸುತ

ಸ್ಥಿತಿ-ಗತಿ

ಕಂಪಿಸುತಲೇ ಅರಳತೊಡಗಿದೆ ಮನ
ಮೈದುಂಬಿ ಬಣ್ಣ
ತನು, ಮನ ನಂದನ ವನ


ಕೆನ್ನೆ ಕೆಮ್ಮಣ್ಣ ಬಣ್ಣ
ಅಂಗೈ ಚಂಡೂವ ಬಣ್ಣ
ಕಣ್ಣು ಮುಚ್ಚಿದೊಡೆ ಕನಸುಗಳ
ಬಣ್ಣ ಬಣ್ಣಗಳ ಜಾತ್ರೆ
ಮುಂಬಾಗಿಲಿಗೆ ಪಚ್ಚೆ ಪತ್ರೆ
ಎದೆಯಾಂಮೃತದ ಹೊನ್ನ ಪಾತ್ರೆ


ನೆರಳಾಕೃತಿಗಿಂತ ಕೃತಿಯಿಲ್ಲ
ಏಕಾಂತಕೂ ಮಿಗಿಲು ಸ್ಥಿತಿಯಿಲ್ಲ
ಪದಗಳ ಪರಿಶೆಯಲಿ
ಪಾವು ಗುಟುಕಿನ ಪದ್ಯ
ಬರೆಯಲು ಬರವಿಲ್ಲ
ಬರೆಯದಿರಲು ಬಲವಿಲ್ಲ


ಮೊಗ್ಗು ಹಿಗ್ಗುವಲ್ಲೂ ಪಟಾಕಿ ಸದ್ದು,
ಸೋಜಿಗದ ಸಂಗತಿಗಳ ಸಾಲು
ಹುಚ್ಚಾಟ ಹೇಳದುಳಿವುದೇ ಮೇಲು


ಅಪೂರ್ಣತೆಯೇ ಪೂರ್ಣವಾಗಿರಲು
ಪೂರ್ಣಗೊಳಿಸುವ ಯತ್ನವೂ ಅಪೂರ್ಣ!!


                                            -- ರತ್ನಸುತ

ನಾ ನಾನಲ್ಲದೆ

ಅದೆಲ್ಲಿಂದಲೋ ಅನಾಮಿಕ ಹಕ್ಕಿಯೊಂದು ಹಾರಿ ಬಂದು
ಅಮ್ಮ, ಅಪ್ಪನ ರಕ್ಷೆಯಲ್ಲಿ ಬೆಚ್ಚಗೆ ಆಟವಾಡಿಕೊಂಡಿದ್ದ ಮರಿಯನ್ನ
ಹೇಳ ಹೆಸರಿಲ್ಲದಂತೆ ಹೊತ್ತು ಹೊರಟು ನಿಂತಾಗ
ಗಾಂಭೀರ್ಯಕ್ಕೆ ಹೆಸರುವಾಸಿ ಅಪ್ಪ ಹಕ್ಕಿ
ಬಿಕ್ಕಿ-ಬಿಕ್ಕಿ ಅಮ್ಮನ ಕಣ್ಣೀರಿಗೆ ಕಣ್ಣೀರ ಬೆಸೆಯುತ್ತದೆ


ಉಂಡು ಹೋದ, ಕೊಂಡು ಹೋದ ಹಕ್ಕಿ
ದೂರದ ಗೂಡಿಂದ ಗರ್ವದ ನಗೆ ಬೀರುತ್ತ
ಕನಿಕರ ತೋರಿದ್ದೇ ತೋರಿದ್ದು
ಮರಿ ಹಕ್ಕಿಗೆ ದ್ವಂದ್ವ
"ಎಲ್ಲಿ ಸಲ್ಲಲಿ ನಾನು?"


ಅಮ್ಮ ಹಕ್ಕಿ ಕನವರಿಸಿ, ಕನವರಿಸಿ
ಗೂಡಿಂದ ಕುಸಿದು ಬೀಳುವಷ್ಟು ನಿಸ್ಸಹಾಯಕಳಾಗುತ್ತದೆ
ಅಪ್ಪ ಹಕ್ಕಿ ಅನಾಮಿಕ ಹಕ್ಕಿಯ ಹುಡುಕಿ
ಅಷ್ಟೇ ಗಾಂಭೀರ್ಯದಿಂದ ನೋವಾಗದಂತೆ ಚಾಟಿ ಬೀಸುತ್ತದೆ


ಮರಿ ಹಕ್ಕಿ ಅಲ್ಲಿಯೂ ಕ್ಷೇಮ
ಆದರೆ ತುಸು ಬಿನ್ನ ಪ್ರೇಮ,
ಇತ್ತ ತವರ ನೆನಪಾಗಿ ಅಳುತ್ತದೆ
ಅತ್ತ ತವರಲ್ಲಿ ಜೋರು ಮಳೆ
ಗೂಡನ್ನಷ್ಟೇ ತೋಯಿಸುವಂತೆ!!


ಸ್ವಂತಿಕೆಯ ಪುನರ್ಸ್ಥಾಪನೆಯ ಹಾದಿಯಲಿ ಸವಾಲುಗಳ ಸಾಲು
ಮರಿ ಹಕ್ಕಿ ಎಲ್ಲವನ್ನೂ ದಾಟಲು ಸಜ್ಜಾಗುತ್ತದೆ
ಅನಾಮಿಕ ಹಕ್ಕಿಯೂ ಈಗ ಹೆಸರಿಟ್ಟುಕೊಳ್ಳುತ್ತದೆ
ಮರಿ ಹಕ್ಕಿಯ ಹೆಸರಿಗೆ ಕೊಕ್ಕು ಸಿಕ್ಕಿಸಿ


ಇಷ್ಟು ಸಲೀಸಾಗಿ ಬಿಟ್ಟುಗೊಡಬಾರದಿತ್ತು,
ಅಪ್ಪ, ಅಮ್ಮ ಹಕ್ಕಿಗಳು ಒಪ್ಪಿಕೊಳ್ಳುವ ಮುನ್ನ
ಒಮ್ಮೆ ಕುತ್ತಿಗೆ ಹಿಡಿದು ದರ್ಪ ತೋರದಿದ್ದರೆ ಹೇಗೆ?!!
ಏನೇ ಇರಲಿ
ಹೆಸರಾದದ್ದು ಈಗ ಹೆಸರು ಹಂಚಿಕೊಂಡದ್ದರ ಜೊತೆಗೆ ಖುಷಿ ಪಡುವುದು
ಅಂತರಾತ್ಮಕ್ಕೆ ಕಿಚ್ಚಿಷ್ಟು ಒಪ್ಪುತ್ತಿಲ್ಲ,
ಇಷ್ಟಾಗಿಯೂ ಬಾಳ್ಮೆಗೇನೂ ಕುಂದಿಲ್ಲ!!


ಎಲ್ಲಕ್ಕೂ ಕ್ಷೇಮ ಬಯಸುವ ಬರದಲ್ಲಿ
ಒಮ್ಮೊಮ್ಮೆ ಜೀವನ ತಕ್ಕಡಿ ಒಂದೆಡೆಗೇ ಹೆಚ್ಚು ವಾಲಿದಾಗ
ಈಚೆಗಿನ ಕೈ ಸೋಲೊಪಿಕೊಳ್ಳುತ್ತದೆ
ತನ್ನ ಪ್ರಾಬಲ್ಯದ ಸರದಿಗೆ ಕಾದು ಕೂತು!!


All is well that ends well!!

                                             -- ರತ್ನಸುತ

ನಾನೇನೆಂಬುದು!!

ಹಿತ್ತಲ ಇರುವೆ ಗೂಡಿನ ಸುತ್ತ
ಸಕ್ಕರೆ ಚಿಲ್ಲಿ ಬಂದೆ
ಮನೆಯೊಳು ಗೆಜ್ಜೆ ಕಟ್ಟಿಬಂದವುಗಳ
ವಿಷವಿತ್ತು ಕೊಂದೆ


ಬೆಳಕಿಗೆ ದಾರಿ ಮಾಡಿ ಕೊಟ್ಟು
ಕಿಟಕಿ ಪರದೆಯನು ತೆರೆದೆ
ಗಾಳಿ, ಬೆಳಕು ನುಸುಳದಂತೆ
ಹಣತೆಗೆ ಬೀಗ ಜಡಿದೆ


ಮೇಲೆ ಚಿಗುರ ಕಂಡು
ಹಬ್ಬದಂತೆ ಮಗ್ನಗೊಂಡೆ
ಕೆಳಗೆ ಕೊರೆದು ಕೊರೆದು
ಬೇರ ಸಹಿತ ದೋಚಿಕೊಂಡೆ


ಮುಗಿಲು ಸುರಿಸಿಕೊಂಡ ಹನಿಗೆ
ಖುಷಿಯ ಅರ್ಥ ಕೊಟ್ಟೆ
ಕೆನ್ನೆ ಮೇಲೆ ಮೂಡಿ ಬಂದವಕೆ
ನೋವನಿಟ್ಟೆ


ಹೊರಗೆ ಹರಕಲಂಗಿ ತೊಟ್ಟು
ಮೈಯ್ಯ ಮುಚ್ಚಿಕೊಂಡೆ
ಒಳಗೆ ಬಣ್ಣ ಕಳಚಿಕೊಳದೆ
ಗೌಪ್ಯವಾಗೇ ಉಳಿದೆ


ಬಾಗಿಲಲ್ಲಿ ತಳಿರು ಕಟ್ಟಿ
ಬಾಡಿದವನು ತೂರಿ ಬಿಟ್ಟೆ
ಕ್ರೌರ್ಯ ಕಾರ್ಯದಲ್ಲೂ ಮಾನವೀಯತೆ
ಮುಖವಾಡ ತೊಟ್ಟೆ!!


                                         -- ರತ್ನಸುತ

ಬೂದಿ ಮತ್ತು ಕವಿತೆ

ಒಲೆಯ ಮೇಲೆ ಹಾಲಿರಿಸಿ
ಕವಿತೆ ಬರೆಯುತ್ತಾ ಕೂತೆ
ಅತ್ತ ಹಾಲೂ ಉಕ್ಕಲಿಲ್ಲ
ಇತ್ತ ಕವಿತೆಯೂ!!


ಒಲೆ ಹಚ್ಚಿದ್ದರೆ ತಾನೆ
ಹಾಲು ಕುದಿಯಲು ಅವಕಾಶ?!!
ಒಳಗೆ ಕಿಚ್ಚಿದ್ದರೆ ತಾನೆ
ಕವಿತೆ ತೆರೆದ ಆಕಾಶ?!!


ಹಾಲ ಬಟ್ಟಲ ಒಳಗೆ
ಬೆರಳೊಂದ ಅದ್ದಿದೆ, ಹಾಲು ಒಡೆಯಿತು
ಬೆರಳೊಲ್ಲದೆ ಲೇಖನಿಯ ಬಿಗಿ ಹಿಡಿದೆ
ಕವಿತೆ ಉಸಿರುಗಟ್ಟಿ ಸತ್ತಿತು!!


ಒಲೆ ಹಚ್ಚಲು ಬಾರದವನು
ಕಾದು ಅಲ್ಲೇ ಸತ್ತೆ
ಕವಿತೆ ಬರೆಯಲಾಗದೆ
ಬಿಕ್ಕಳಿಸುತ ಅತ್ತೆ!!


ಬೂದಿ ಕೆದಕಿದಾಗ ಬಯಲು
ಸಣ್ಣ ಉರಿ ಕೆಂಡ
ಬರೆಯಲಾಗದವನೂ
ಸ್ವಂತ ದಾರಿ ಕಂಡುಕೊಂಡ


ಒಲೆ ಉರಿದಂತೆಲ್ಲ ಹಾಲು
ಉಕ್ಕಿ ಹೊರ ಹರಿಯಿತು
ಮೊದಲಾಗದ ಕವಿತೆಯೊಂದು
ಅಲ್ಲಿಗೆ ಕೊನೆ ಮುಟ್ಟಿತು!!


                          -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...