Wednesday, 12 May 2021

ಶುಭಮಂಗಳ ಬೆಳದಿಂಗಳ ಸುರಿ

 ಪಲ್ಲವಿ

ಶುಭಮಂಗಳ ಬೆಳದಿಂಗಳ ಸುರಿ 
ಬೆಳಗಲಿ ಮನದಂಗಳ 
ಕರಿ ಉಬ್ಬಿನ ಅಲೆಯೆಬ್ಬಿಸಿ 
ಬಲೆಯಾಗಿಸಿದೆ ಆ ಕಂಗಳ 
ಮುಂಗುರುಳಿನ ಮುಂಗೋಪವ 
ಕಿವಿ ಮರೆಗೆ ಸರಿಸುವೆ ವಾಹ್ ರೇ ವಾಹ್ 
ತುಟಿ ಹಿಗ್ಗಿಸಿ, ನಗೆ ಉಕ್ಕಿಸಿ 
ಹಂಚುತ್ತಲಿರುವೆ ಸಿಹಿ ಪೊಂಗಲ 

ಚರಣ
ಎಪ್ಪತ್ತರ ಆ ಆರತಿ 
ಅವರ ಥರ ನಿನ್ನ ಕೀರುತಿ 
ಹಳೆ ಕಾಲದ ಹೆಸರಾದರೂ 
ಹೊಸತೊಂದು ಸೆಳೆವ ಜಾದು 
ಹತ್ತತ್ತಿರ ನಾ ವಾಲುವೆ 
ಪ್ರಣಯ ರಾಜ ಪ್ರಭಾಕರ 
ಶ್ರೀನಾಥರ ಅವತಾರವ 
ಪಡೆದು ಬರಲೇ ಇಂದು 

ಮಿನುಗೋ ತಾರೆ 
ರಮಿಸೋ ನೀರೆ
ನಿನ್ನ ಜೋಡಿ ನಾನು
ಕರಗಿ ಹೋದ 
ಹೃದಯ ನಿನದೇ 
ದೋಚಿ ಹೋಗು ನೀನು.. 

ಎದುರಾಗುವೆ ನಾ ನಿನಗೆ

ಎದುರಾಗುವೆ ನಾ ನಿನಗೆ 

ಹೆದರದಿರು ಕನಸಿನಲೂ 
ಉಸಿರಾಗುವೆನು ಜೊತೆಗೆ 
ಪ್ರೀತಿಸುತ ಬದುಕಿಸಲು 
ಹೇಗಾದರೂ ನಗಿಸಿ 
ನಾ ನಗುವೆನು 
ಹೂ ಮೂಡಿಸೋ ನೆಪದಲ್ಲಿ 
ಬಳಿ ಬರುವೆನು 
ಈ ಬದುಕ ನಿನಗಾಗಿ ಬರೆದಿಡುವೆನು 

ಮಳೆ ಬರುವ ಮುನ್ನ 
ಕವಿದಂತೆ ಮೋಡ 
ಹನಿ ಹನಿ ಅಕ್ಷರದ ಕವಿತೆ ಹೊಸೆಯುತಿದೆ 
ಮನ ತಣಿಸುವಾಗ 
ಈ ನಿನ್ನ ಹಾಡು 
ಇನಿ ದನಿಗೆ ಶರಣಾಗಿ ಹೃದಯ ಸೋಲುತಿದೆ
ಮಿತಿ ಮೀರಿ ಬಂದಾಗ ಪ್ರೇಮ 
ನನ್ನಂತೆ ಮರುಳಾಗುತಾರೆ 
ನಿನ್ನ ಹೊರತು ಈಗ ನನಗೆ 
ಪರಿಹಾರ ಯಾರು ಕೊಡುತಾರೆ? 

ಗರಿಗೆದರಿದಂತೆ 
ಬಲಹೀನ ಬಯಕೆ 
ನಿನ್ನೆಸರ ಪಿಸುಗುಡುತ ಜಪ ಮಾಡಿದಂತೆ 
ಅಲೆ ಹೊತ್ತು ಹರಕೆ 
ದಡ ತಲುಪಿದಾಗ 
ನೀ ಬರೆದ ಮರಳ ಬರಹವ ದೋಚಿದಂತೆ 
ಅನುರಾಗ ಎರೆದಂತೆ ರಾಗ 
ನಾ ನಿನ್ನ ವಶವಾಗುವಾಗ 
ನೆರವಾಗು ನೀ ಆಗಿ ಬೇಗ 
ಬಹುಪಾಲು ಜೀವನದ ಭಾಗ 

ಸ್ವೀಕರಿಸು ಮನದ ಕರೆಯನು

ಸ್ವೀಕರಿಸು ಮನದ ಕರೆಯನು 

ನೀ ಪರಿಗಣಿಸು ಒಲವ ಈ ಪರಿಯನು
.... 
ಅಂದವಾದ ಗೊಂಬೆಯೊಂತೆ ಮಂದಹಾಸ ಬೀರುವಾಗ 
ಮತ್ತೆ ಮತ್ತೆ ನಾ ಸೋಲುವೆ 
ನೀ ಚಿಟ್ಟೆಯಂತೆ ಹಾರುವಾಗ ಹೂವಲ್ಲಿ ಜೇನಾಗಿ  
ಹೀರಲೆಂದು ನಾ ಕಾಯುವೆ 
ಓ ಸೋನಾ 
ಮತ್ತು ಏರಿದಂತಾಗಿದೆ 
ಓ ಸೋನಾ 
ಕಾಲ ನಿಂತಂತಾಗಿದೆ 
ಎಲ್ಲೆಲ್ಲೂ ನಿನ್ನನೇ, ಕಾಣೋದೇ ಅಚ್ಚರಿ 
ಬೇರೇನೂ ಬೇಡ ಇನ್ನು ಪ್ರೀತಿಯೊಂದೇ ಮಾತನಾಡಲಿ 
ಓ ಸೋನಾ
ನಿಂತಲ್ಲೇ ನೀರಾಗುವೆ 
ಓ ಸೋನಾ
ನಿನ್ನಲ್ಲಿ ಒಂದಾಗುವೆ 
ಓ ಸೋನಾ
ಬೇಕೆಂದೇ ಒದ್ದಾಡುವೆ... 
ಓ ಸೋನಾssss

ಕಣ್ಣು ಕಣ್ಣಿನಲ್ಲೇ ಮೋಡಿ ಮಾಡುತ್ತಾ ಹೋದಾಗ 
ಪತ್ತೆ ಇಲ್ಲದಂತಾದೆನೆ 
ಈ ದಾರಿಯಲ್ಲಿ ನಿನ್ನದೊಂದು ಹೆಜ್ಜೆಯನ್ನು ಬಿಟ್ಟು ಹೋಗು 
ಗುಟ್ಟಾಗಿ ನೀ ಸುಮ್ಮನೆ 
ಓ ಸೋನಾ 
ಹೊತ್ತು ಮೀರಿ ಬಂದಾಗ 
ಓ ಸೋನಾ 
ಕೋಪ ಉಕ್ಕಿಕೊಂಡಾಗ 
ಸಮೀಪವಾದರೂ ಈ ದೂರವೇತಕೆ 
ಅದಾಗೇ ಮೂಡಿ ಬಂದ ಪ್ರೇಮವು ಸರಾಗವಾಗಿದೆ 
ಓ ಸೋನಾ
ಕಾರಂಜಿ ನೀ ಬಾಳಿಗೆ 
ಓ ಸೋನಾ
ರೋಮಾಂಚನ ಕಣ್ಣಿಗೆ 
ಓ ಸೋನಾ
ಈ ಜೀವ ನಿನ್ನೊಂದಿಗೇ 
ಓ ಸೋನಾssss

ಸ್ವೀಕರಿಸು ಮನದ ಕರೆಯನು 
ನೀ ಪರಿಗಣಿಸು ಒಲವ ಈ ಪರಿಯನು

ಕಲ್ಲಿಗೆ ಕರಗುವ ಮನಸನು ಕೊಡುವ

 ಕಲ್ಲಿಗೆ ಕರಗುವ ಮನಸನು ಕೊಡುವ 

ನಲುಮೆ ನಿನ್ನೊಳಗೆ, ಇದೋ ಕರಗುವೆ ಒಳಗೇ 
ಕಾಮನ ಬಿಲ್ಲ ಹೊತ್ತ ಕಣ್ಣುಗಳೇ ನಿನ್ನವು 
ಸೆಳೆದಿವೆ ಬಳಿಗೆ, ಇದೋ ಸೋಲುವೆ ನಿನಗೆ 
ನೀಳಗವನ ಬರೆಯುವ ಗಳಿಗೆ 
ನೇರ ಗಮನ ನಿನ್ನದೇ ಕಡೆಗೆ 
ವಾಲಿದೆ ಸಖಿಯೇ, ಜೊತೆ ನೀಡೆ ನಾ ಸುಖಿಯೆ 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 
ಇದೇ ಹೊಸತು ಹರುಷ 
ಮುದ ಕೊಡುವ ನಿಮಿಷ 
ಬಾಳ ಆವರಿಸಿ ಹೋಗೋ ವೇಳೆ 
ಯಾತಕಾಗಿ ನಿನಗೀ ಅವಸರ 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 

ಕನ್ನಡಿಯ ಬಿಂಬದಲ್ಲೂ ನಗುವೆ 
ಈ ಕಾಲಿನ ಗೆಜ್ಜೆಯಲ್ಲೂ ಸುಳಿವೆ 
ಚಂದವಾದ ಬಂಧುವೇ 
ಸಂಜೆ ತಂಪು ಗಾಳಿಯಂತೆ ಬರುವೆ 
ಆ ಮೆಚ್ಚುಗೆಯ ಸಾಲಿನಲ್ಲಿ ಬೆರೆವೆ 
ಒಲವಿನ ಗುರುವೇ 
ತಕ ಧಿಮಿ ಎನುತ ಕುಣಿಯುವೆ ಲಯಕೆ 
ಎದುರಲಿ ನೀನಿರಲು 
ಬದುಕಿನ ಗತಿಯ ಬದಲಿಸೋ ಬಯಕೆ 
ಉಸಿರಲಿ ನೀನಿರಲು 

ಆಸೆಗಳ ಮಾಲಿಕೆಯ 
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 

ಕಲ್ಲಿಗೆ ಕರಗುವ ಮನಸನು ಕೊಡುವ 
ನಲುಮೆ ನಿನ್ನೊಳಗೆ, ಇದೋ ಕರಗುವೆ ಒಳಗೇ 
ಕಾಮನ ಬಿಲ್ಲ ಹೊತ್ತ ಕಣ್ಣುಗಳೇ ನಿನ್ನವು 
ಸೆಳೆದಿವೆ ಬಳಿಗೆ, ಇದೋ ಸೋಲುವೆ ನಿನಗೆ 
ನೀಳಗವನ ಬರೆಯುವ ಗಳಿಗೆ 
ನೇರ ಗಮನ ನಿನ್ನದೇ ಕಡೆಗೆ 
ವಾಲಿದೆ ಸಖಿಯೇ, ಜೊತೆ ನೀಡೆ ನಾ ಸುಖಿಯೆ 

ಹೊಂಗೆ ಮರ ನೀಡುವಂಥ ನೆರಳೇ 
ನೀ ತಾಪವನ್ನು ನೀಗುವಂಥ ಮುಗಿಲೆ 
ಜೀವವಿನ್ನೂ ನಿನ್ನಲೇ
ಪ್ರೇಮದಲ್ಲಿ ಆಳವಾದ ಕಡಲೇ 
ನೀ ಸೋಲಲೆಂದೇ ಮೂಡಿಬಂದ ಇರುಳೆ?
ದೀಪವಾಗಿ ಬಿಡಲೇ?
ಕನಸಿನ ಮನೆಯ ಅಂಗಳದಲ್ಲಿ ಚಂದಿರನಾಗುವೆಯಾ?
ಕಲಿಯುವ ತನಕ ಬೆರಳನು ಹಿಡಿದು ಪ್ರೀತಿಯ ಕಲಿಸುವೆಯಾ?

ಆಸೆಗಳ  ಮಾಲಿಕೆಯ   
ಹೊಸೆಯುತ ಕೂತಿರುವೆ 
ಗಂಧವನು ದೋಚುತಲಿ 
ಎಲ್ಲಿಗೆ ಹೊರಟಿರುವೆ 
ಇದೇ ಹೊಸತು ಹರುಷ 
ಮುದ ಕೊಡುವ ನಿಮಿಷ
ಬಾಳ ಆವರಿಸಿ ಹೋಗೋ ವೇಳೆ 
ಯಾತಕಾಗಿ ನಿನಗೀ ಅವಸರ 

ಸಾವಿರ ಕಣ್ಣಿನ ನವಿಲುಗಳ

 ಸಾವಿರ ಕಣ್ಣಿನ ನವಿಲುಗಳ

ಸಾಲಲಿ‌ ನಿಲ್ಲಿಸಿ‌ ನಾನು
ಒಂದೇ ಕಣ್ಣನು ಮುಚ್ಚುತಲಿ
ನಿನ್ನನು ಮೋಹಿಸಲೇನು?
ಸುಡೋ‌ ಸೂರ್ಯನೆದುರಲ್ಲಿ
ನಗೋ‌ ಹುಣ್ಣಿಮೆ
ಕೊಡೆಯನ್ನು ನಾ ತೆರೆದಾಗಿದೆ
ಬಂದು ಸೇರಿಕೋ

ಸಂಜೆಯ ವೇಳೆಗೆ ಎಲ್ಲ ತಣ್ಣಗೆ ಆಯಿತು
ಗಾಳಿಗೆ ಪತ್ರವು ಹಾರಿ ಹೋದರೆ ಹೋಯಿತು
ತಂಪು ಪಾನಕ‌ ಹೀರುವಾಗ ನೀ
ಹಾಗೆ ನೋಡಲೇಕೆ?
ಮಳೆ ಬೀಳುವ ವೇಳೆ, ನೆಲ ನಾಚುತ
ಬಿರುಕೆಲ್ಲವ ಹೊಲಿದಂತಿದೆ
ನಿಜ ಅಂದುಕೋ

ಹಾಡನು ಹೇಳುವೆ ಕೇಳು ಕಂಚಿನ ಕಂಠದಿ
ತಾಳವ ಹಾಕುತ ಹೋಗು ಗೆಚ್ಚೆಯ ಪಾದದಿ
ಈಚೆ ಬಂದರೆ ಬೆಂದು ಹೋಗುವೆ
ಮಲ್ಲೆಯಂತೆ ನೀನು
ಗರಿ ಚಪ್ಪರ ಹಾಕಿ ತಯಾರಾಗಿದೆ
ಇದೇ ಮಂಟಪ, ನಮಗೆನ್ನುವೆ
ಜೊತೆ ಮಾಡಿಕೋ...

ಮಾವಿರದ ಊರಲ್ಲಿ

ಊರಿನ ಒಂಟಿ ಮಾವಿನ ಮರದೆಡೆ

ನೂರಾಯೆಂಟು ಕಣ್ಣುಗಳು
ಬಂಜೆ ಮರದ ನೆತ್ತಿಯ ಮೇಲೆ
ಹೂವಿನ ತಳಿರು ತಾಳಿರಲು

ರುಚಿಯೇ ಕಾಣದ ನಾಲಗೆಯಲ್ಲಿ
ಎಂಜಲ ಚಪ್ಪರಿಕೆಯ ಸ್ವಾದ
ಮಾತಿಗೆ ಮಾತು‌ ಬೆಳೆದು ನಿತ್ಯವೂ
ಒಬ್ಬರಿಗೊಬ್ಬರ ಪ್ರತಿರೋಧ

ಹೂ ಮಾಗಿ, ಕಾಯಾಗಿ ತೂಗಿತ್ತು
ಮಳೆಯೇಟ, ಕಲ್ಲೇಟ ಗೆದ್ದಿತ್ತು
ಹುಳಿಯೇ ಸಾಕೆನ್ನುವ ಮಹನಿಯರು
ಹುಲಿಯ ಮೇಲೆ ಸವಾರಿ ಹೊರಟರು

ಮುತ್ತಿಗೆ ಹಾಕಲು ಹೋದಂತೆ ನೊಣ
ಬಿದ್ದವು‌ ಅಲ್ಲಿ ಹತ್ತಾರು ಹೆಣ
ಸಾರಿಸಿದರೂ ಊರೂರಿಗೆ ಡಂಗೂರ
"ವಾರಸುದಾರರು ಯಾರಿಹರು?"

"ತನ್ನ ಮುತ್ತಾತನ ತಾತನಿಗೆ
ಜೋಡಿ ಹುಡುಕುವ ವೇಳೆ
ಸಾಗರದಾಚೆಯ ರಾಜನು ತಾನು
ಗೆದ್ದ ಒಂದು ಯುದ್ಧದ ಬದಲಿಗೆ
ಉಡುಗೊರೆಯಾಗಿ‌ ಮಾವು ಪಡೆದು
ಕುದುರೆಯೇರಿ ರಾಜ್ಯಕೆ ಮರಳಲು
ಸಂಚಿಯಿಂದ ಉದುರಿ ಬಿದ್ದು
ಮುತ್ತಾತನ ತಾತನ ಅಪ್ಪನಿಗೆ
ಸಿಕ್ಕಿದ ಪಾಲು ಅದು" ಎಂದು

"ಸಿಕ್ಕ ಮಾವನು ಒಬ್ಬನೇ ತಿಂದು
ವಾಟೆಯ ಯಾರಿಗೂ‌ ಕಾಣದೆ ತನ್ನ
ಮನೆಯ ಹಿತ್ತಲ ಆಚೆಗೆ‌ ಎಸೆಯಲು
ಹೆಂಡತಿ ಕಣ್ಣಿಗೆ ಬಿದ್ದು
ಉಸಿರು ಬಿಟ್ಟ ಮುತ್ತಾತನ ತಾತನ ಅಪ್ಪ"
ಹೀಗಾಗಿರಲು, ತನಗೇ ಸೇರಿದ ಮರವೆಂದು
ಬಿಟ್ಟ ಮಾವು ತನದೆಂದು
ಕತೆಯ ಕಟ್ಟಿದವರ ಸಾಲಲ್ಲಿ
ಮೆಚ್ಚುಗೆ ಮಡೆಯಿತು ಒಂದು ಕತೆ

ಯಾರೂ ನಂಬದೇ ಹೋದರೂ
ನಿಜವಿರಲೂ ಬಹುದೆಂದರು
ಸೋತ ಊರಿನವರೆಲ್ಲ
ಕತೆಗಾರನೇ ವಾರಸು ಎಂದರು

ಕಾವಲು ಕಾದ ರಾತ್ರಿ ಹಗಲು
ಬಾಗಿದ ಕಾಯಿ‌ ಘಂ ಎನಲು
ಪಟ್ಟ ಖುಷಿಗೆ ಸಾಯುತ ಹೋದ
ವಂಶಕೆ‌ ಕೆನೆ ಅವನ ನೆರಳು

ನಂತರ ಮರ ಹತ್ತಲು ಯತ್ನಿಸಿದ
ತರುಣರು ಬಿದ್ದು ಮುರಿಯಿತು ಬೆನ್ನು
ಅಮಾವಾಸ್ಯೆಯ ರಾತ್ರಿಯಲಿ
ಮೋಹಿಣಿಯರ ಬೆನ್ನಗೂ ಸಾವಿರ ಕಣ್ಣು

ಕಾಯಿ ಹಣ್ಣಾಗುತ್ತಲೇ ಕದ್ದು
ಹೊತ್ತು ಹೋಯಿತು ಕೋಗಿಲೆ
ಹಾಡಲು ಬಾರದ ಊರಿನ ಒಳಗೆ
ಹಾಡು ನಿಂತದ್ದು‌ ಆಗಲೇ

ಆಸೆ‌ ತೋರಿ‌ಸಿ ನೀಗಿಸದಿರಲು
ಊರಿನ ಶಾಪಗೆ ಗುರಿಯಾಯ್ತು
ಮತ್ತಿನ್ನಿಂದೂ ಹೂ ಬಿಡದ ಮರ
ಮುಪ್ಪಾಗಿ ನೆಲಕಪ್ಪಳಿಸಿತು...

ಏಕಾಂಗಿಯೇ ಏನಿದೆ ನಿನ್ನಲಿ?

 ಏಕಾಂಗಿಯೇ ಏನಿದೆ ನಿನ್ನಲಿ?

ಯಾರೊಂದಿಗೆ ಸೋಲುವೆ ಮಾತಲಿ?
ನಿನ್ನಲ್ಲೇ ನೀ ಇಲ್ಲವಾದಂತಿಹೆ  
ಏನಾಗುವೆ ನಾಳೆ ಈ ಬಾಳಲಿ?
ನೀ ಸರಿದು ಸರಿದು ಹರಿದು ಬರಲು ಸಾಧನೆ ಅದುವೇ 
ಈ ಕ್ಷಣವ ಹಿಡಿದು ನಡೆಯೋ ಮುಂದೆ ನಿಶ್ಚಯ ಗೆಲುವೇ 

ನೀ ಹಾಡುವ ಹಾಡಿದು ಯಾವುದು?
ಯಾರಿಂದ ನೀ ಪಡೆದಿರೋ ಸಾಲಿದು?
ಆಕಾಶಕೆ ಚಾಚುತ ಕಣ್ಣನು 
ಬಾ ಎಂದರೆ ಸೋನೆಯು ಬಾರದು 
ನೀ ಗಳಿಸಿ ಉಳಿಸಿ ಕಳೆಯದಿರಲು ನಿನ್ನದೇ ಸಕಲ 
ಈ ನಿಜವ ಅರಿತ ಮನುಜನೆಂದೂ ಆಗನು ಮರುಳ 

ನೀ ಏರುವ ಎತ್ತರ ಎಂದಿಗೂ 
ಆ ನಾಳೆಯ ದಾರಿಯ ದೀಪವು 
ಹೋರಾಟವೇ ಇಲ್ಲದೆ ಹೋದರೆ 
ನೀ ಗೆದ್ದರೂ ಇಲ್ಲ ಸಂತೋಷವು 
ಈ ಬದುಕು ಎನುವ ಸಮರದಲ್ಲಿ ಪಡೆಯುವೆ ಪದಕ 
ನೀ ಹಠವ ಬಿಡದೆ ಪುಟಿದು ನಿಲ್ಲು ಗೆಲ್ಲುವ ತನಕ  

ಈಜಾಡಲು ಏತಕೆ‌ ಸುಳಿಯಲಿ
ಆ ಸೆಳೆತದ ಮಾಪನ ಅರೆಯದೆ?
ಬೇಡೆಂದರೂ ದಕ್ಕುವ ಪ್ರೇಮವು
ನೀ ತೋರುವ ಬಿಂಬವೇ ಆಗಿದೆ
ಬಾ ಮುಗಿದ ಕತೆಗೆ ಬದಲಿ ಕೊನೆಯ ಗೀಚುವ ಜೊತೆಗೆ
ಬಾ ಕದವ ತೆರೆವ ಬೆಳಕು ಬರಲಿ ನಮ್ಮಯ ಒಳಗೆ

ಹೇ ಮೂಢನೆ ಎಚ್ಚರ ತಪ್ಪುತ  
ನೀ ಇಟ್ಟಿರೋ ಹೆಜ್ಜೆಯೇ ತಪ್ಪಿದೆ 
ನೀ ಬಿಟ್ಟಿರೂ ಬಿಡದಿದೆ ನಿನ್ನನು 
ಈ ನೆರಳಿಗೂ ಆಸರೆ ಬೇಕಿದೆ 
ಹೂ ಬಿಡುವ ಸಮಯಕಾಗಿ ಕಾಯಬೇಕಿದೆ ಗೆಳೆಯ 
ನೀ ಕೇಳಿ ನೋಡು ಒಮ್ಮೆ ಇದನೇ ಮಿಡಿದಿದೆ ಹೃದಯ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...