Saturday, 25 December 2021

ಗಾಜಿನಂಥ ಕೆನ್ನೆ ಮೇಲೆ

ಗಾಜಿನಂಥ ಕೆನ್ನೆ ಮೇಲೆ

ಈಜಿ ಹೊರಟ ಕಂಬನಿ
ಮೋಜಿನಲ್ಲಿ ಗೀಚಿಕೊಂಡು 
ಚುಚ್ಚಿ ಹೋದ ಲೇಖನಿ 
ಬಾಳ ಕಥನದಲ್ಲಿ 
ತಿರುವು ಮುರುವು ನೂರು 
ನೆನಪ ಬುಟ್ಟಿಯಲ್ಲಿ 
ಮುಳ್ಳು ಸಹಿತ ಹೂವು 
ಯಾವ ದಿಕ್ಕಿನಲ್ಲಿ 
ನಗುವ ಕಾಣಲಿ 
ಯಾರ ಗುಂಗಿನಲ್ಲಿ 
ಅವಳ ಮರೆಯಲಿ 

ನೋವೂ ಕೂಡ ಮಾತನಾಡಬಹುದು 
ನಗುವು ಹಾಗೇ ಮೌನವಹಿಸಬಹುದು 
ಕಲ್ಲು ತಾನೇ ಕರಗಿ ಹೋಗಬಹುದು 
ನೀರು ಪ್ರಾಣವನ್ನೇ ಕಸಿಯಬಹುದು 
ಇಷ್ಟೆಲ್ಲಾ ಅರ್ಥವಾಗಲು 
ಬರಬೇಕಾಯಿತು ನೀ ನನ್ನ ಬಾಳಿಗೆ 
ಇನ್ನಷ್ಟು ಬೇಕು ಅಂದರೂ 
ಮಾಯವಾಗಿ ಹೋದೆ ನೀ ಮುಗುಳಾಚೆಗೆ 

ಹಿಮ ಸುರಿದು

ಹಿಮ ಸುರಿದು

ಎಲ್ಲವೂ ಸಮವೇ
ಎಲ್ಲವೂ ಸುಮವೇ

ನೆಲಕೆ ನಭದ 
ಬೇಶರತ್ತು ಶರಣಾಗತಿ
ಬೆಟ್ಟಕೂ, ಇರುವೆ ಗೂಡಿಗೂ
ಒಂದೇ ಸುಣ್ಣದ ಬಣ್ಣ
ದಿಬ್ಬಣಕೆ ಊರಿಗೂರೇ ಸಜ್ಜು

ಬಿಡಿ ಮಲ್ಲಿಗೆ ಕಿಟಕಿಯಲ್ಲಿ
ದಿಂಡು ಕಟ್ಟಿಕೊಂಡಂತೆ
ಬೆರಳ ನೇವರಿಸಿ ಬರಲು
ಕೊಂಡಿ ಕಳಚಿ ಉದುರಿತು

ಮಹಾರಾಜರ ಪಾದುಕೆಯಡಿ
ಖಾಲಿ ಉಳಿದ ಸ್ಥಾನಕ್ಕೆ
ಚಾವಣಿ ಸವಿದು ಬಿಟ್ಟ
ಬೆಣ್ಣೆ ಮುದ್ದೆಯ ಪರಿಹಾರ

ಸವೆದ ಜಾಡಿನ ಜಾಗದಲ್ಲಿ
ಹೊಸ ಹೆಜ್ಜೆ ಗುರುತು
ರಹಸ್ಯವೆಲ್ಲ ಬಟಾ ಬಯಲು
ಹಿಮ ಕರಗದ ಹೊರತು

ಮಧುಮಂಚದ ಸಿಂಗಾರ
ತುಂಬು ಚಂದಿರನ ಕಾವಲು
ರಸಮಯ ಹೊನಲಲ್ಲಿ
ಉನ್ಮಾದ ಉಮ್ಮಳಿಸಲು
ನೆಲದ ನೀಲಿ‌‌ ನಭಕೆ
ನಭದ ಹೊದಿಕೆ ನೆಲಕೆ
ಒಲವು ಅದಲು ಬದಲು 
ಖುಷಿಯ ಮೊಳಕೆ!

ಹಿಮವ ಮೆಟ್ಟಿದವರೆಲ್ಲ
ಜಾರಿ ಬಿದ್ದವರೇ
ಎಲ್ಲೋ ಕೆಲವರಷ್ಟೇ ದಾಟಿ
ಸುಖ ಉಂಡವರು
ತಳ ಹೊಕ್ಕವರು
ತುದಿಗಂಡವರು...

ಶರತ್ಕಾಲದ ಎಲೆಗಳು ಮಾಗಿ

ಶರತ್ಕಾಲದ ಎಲೆಗಳು ಮಾಗಿ 

ಉದುರಿ ಹಾದಿಯೆಲ್ಲ ಹಾಸಿಕೊಂಡಿವೆ 
ಕಾಲಿಟ್ಟಲ್ಲಿ ಕರುಕು ಮುರುಕು ಸದ್ದು 
ನಮ್ಮೊಡನೆ ಮಾತಿಗಿಳಿದಂತೆ

ಬಿಟ್ಟ ಮನೆ ಬೋಳು 
ತಲುಪಿದ್ದು ತಿಪ್ಪೆ 
ಅಡಿಯಲ್ಲಿ ಉಳಿದ ತೇವ 
ಮೇಲೆ ಮತ್ತೂ ಕಮರಿದ ಜೀವ 

ಹೂವು, ಎಲೆ, ಕಾಯಿ 
ಎಲ್ಲಕ್ಕೂ ಕ್ರಮೇಣ ನಿಶ್ಯಕ್ತಿ 
ಟೊಂಗೆ ಟೊಂಗೆಗೂ ಋಣ ಮುಕ್ತಿ
ಬಯಲೊಳು ಬೆತ್ತಲಾದಂತೆ 
ಸಮವಾದವು ಬಣ್ಣ ಭೇದವಿಲ್ಲದೆ 

ಗಾಳಿಗೆ ಹಾರಿದ ಮುಪ್ಪು 
ಕೂತರೆ ಕೊಳೆಯುವುದಷ್ಟೇ
ವಿರೂಪಗೊಂಡರೂ ಸರಿ  
ರೂಪಾಂತರಗೊಳ್ಳುತ್ತಲೇ ಸಾಗಿ 
ಜಾತ್ಯಾತೀತವಾಗುವುದು
ಮತ್ತಾವುದೋ ಬೇರಿಗೆ ಗುಟುಕಾಗಿ 

ಇಬ್ಬನಿ ಕಾಯಬೇಕು ಸಾಧ್ಯವಾದರೆ 
ತೊಟ್ಟು ಕಳಚಿದ ಹುಣ್ಣಿಗೆ 
ಸಿಕ್ಕಿ ತೂಗಬೇಕು, ಇಂಗಬೇಕು
ಅಷ್ಟಲ್ಲದೆ ಚಿಗುರಿಗೆ ಹಂಬಲಿಸುವ 
ತಾತ್ವಿಕತೆ ಒಲಿಯುವುದಿಲ್ಲ 

ಎಲ್ಲವೂ ಒಪ್ಪಿ 
ಮೈಯ್ಯ ಅಪ್ಪಿದವು
ಗಾಳಿ, ಮಳೆ, ಬಿಸಿಲು 
ಸಂಭೋಗ ಕ್ರಿಯೆ!

ಮುಂಬರುವ ಋತುವಿಗೆ  
ಎಲ್ಲವೂ ಮೈನೆರೆಯುತ್ತಾವೆ
ಎಲ್ಲವೂ ಹಿಂದಿನಂತೆ ಹೊಸತು
ಎಲ್ಲಕ್ಕೂ ಎಲ್ಲವೂ ಕಾರಣ 
ಸಾಕ್ಷಾತ್ಕಾರ ಅಂತಃಕರಣ 

ಸೌಂದರ್ಯ ಉಳಿಸಿಕೊಳ್ಳುವುದಲ್ಲ
ಸತ್ತು ಹುಟ್ಟುವುದು
ಕೊಟ್ಟು ಪಡೆಯುವುದು
ಬಿಟ್ಟು ಹಿಡಿಯುವುದು
ಮುಂದೆ ಸಾಗುವುದು...

ನಾ ನಿನ್ನನು ನೋಡಿದ ಕ್ಷಣದಲಿ

ನಾ ನಿನ್ನನು ನೋಡಿದ ಕ್ಷಣದಲಿ 

ಮರೆಯುವೆ ನನ್ನನೇ  
ನಿನ್ನಯ ನಗುವಲಿ 
ನಾ ಏನನೋ ಹೇಳುವ ಭರದಲ್ಲಿ 
ಸೋಲುವೆ ಹಾಗೆಯೇ 
ಹೇಳದೆ ಕೊನೆಯಲಿ 
ನೀಡಬೇಕಿದೆ ಹೃದಯವ ಬೇಗ 
ಎದುರಾಗಿ ಮೋಹಕ ಮಳೆಗರೆವಾಗ 
ನಿನಗೆಂದೇ ಈ ಸಾಲು 
ಬರೆದಿಡುವೆ ತುಸು ತಾಳು 
ಎದೆಯ ಗೂಡಿನ ಕಾಜಾಣವೇ 

ಹೆಚ್ಚು ಕಮ್ಮಿ ನಾನು ನೀನು
ಒಂದೇ ಎಂಬ ಭಾವನೆ
ಮೂಡುವುದು ಪ್ರೀತಿಯಲಿ
ಬೇಕು ಬೇಡ ಎಲ್ಲವನ್ನೂ 
ಹೇಳದೆಯೇ ಹಾಗೆಯೇ 
ಅರಿಯುವೆವು ಕಣ್ಣಿನಲೆ  
ಹಲವಾರು ತಿರುವುಗಳ 
ದಾಟುವುದೇ ಜೀವನ 
ಇಳಿಜಾರು ನಲಿವಿಗೆ 
ಏರು ಪೇರಿನ ದಾರಿಯೇ ಪ್ರೇರಣಾ 

ಅವ್ಳು ಪಳ್ಳಂತ ನಕ್ಳು

 ಅವ್ಳು ಪಳ್ಳಂತ ನಕ್ಳು

ಒಂದು ಭಾರಿ ಲುಕ್ಕು ಕೊಟ್ಳು
ಅವ್ಳು ಗುಲ್ಕನ್ನು ಬೆಣ್ಣೆ
ನಾನು ಹೇಳಿ ಕೇಳಿ ತಿಕ್ಲು
ಅವ್ಳು ಕಾಟನ್ ಕ್ಯಂಡಿ
ನಾನು ಲೋಕಲ್ ಬ್ರಾಂದಿ
ಜೋಡಿ ಆಗೋದು ಡೌಟಾಗಿದೆ

ಸಮಾಚಾರ ಮಾಮೂಲಿನೇ
ನಮ್ದು ದಿನ ಇದ್ದಿದ್ದೇನೇ
ನಮ್ ಹುಡುಗಿದು ಹಾಗೇನಲ್ಲ
ಹೊಗೋ ಕಡೆಯೆಲ್ಲನೂ ಸುರಿಯೋ ಸೋನೆ

ಕನ್ನಡಿ ಹಿಡಿದರೆ

ಕನ್ನಡಿ ಹಿಡಿದರೆ 

ನನ್ನ ಬಿಂಬವದು ಕನ್ನಡ 
ಮುನ್ನುಡಿ ಕೊಡುತಲೇ  
ಬಾಳ ಮುನ್ನಡೆಸೋ ಕನ್ನಡ 
ಕಂದನ ಅಳುವಿಗೆ 
ತಾಯಿ ಹಾಡುವ ಲಾಲಿ ಕನ್ನಡ
ತೀರದ ದಣಿವನು 
ನೀಗುವ ಸುಧೆ ಸವಿಗನ್ನಡ
ಹಸಿದ ಮನಸಿಗೆ
ಕೈ ತುತ್ತ ನೀಡಿ ಸಲಹುವ ನುಡಿಯಿದು ಕನ್ನಡ.. ಕನ್ನಡ.. ಕನ್ನಡ 

ಬಿದಿರನು ಕೊಳಲಾಗಿಸಿ
ರಾಗ ವರ್ಧಿಸುವ ಕನ್ನಡ 
ಉಸಿರನು ಒಳಗೊಂಡಿದೆ 
ಜೀವಕೆ ನವಿರು ಕನ್ನಡ 
ಅಧರಕೆ ಕೊಡುತಲೇ 
ವಿವಿಧ ಆಕಾರ

ಆರಂಭವೀಗಲೇ

ಆರಂಭವೀಗಲೇ  

ಈ ಪ್ರೀತಿಯೆಂಬ ಮಧುಶಾಲೆ 
ತೇಲಾಡುವಂತಿದೆ 
ನೀ ಕಣ್ಣಿನಲ್ಲಿ ನಗುವಾಗಲೇ 
ಓ ಪ್ರೇಮ ದೇವತೆ
ನಿನ್ನನ್ನು ಕುರಿತೇ 
ಹಾಡೋದು ಜೀವಕೆ ವಾಡಿಕೆ 
ನನ್ನಂತೆ ನಿನ್ನಲೂ 
ವ್ಯತ್ಯಾಸ ಕಂಡರೆ 
ಸಹಜ ಅದು ಬೇಡ ಅಂಜಿಕೆ .. 

ನಿನ್ನಷ್ಟು ಮುದ್ದಾಗಿ 
ಇನ್ನಾರೂ ಕಾಣದೇ 
ನಿನ್ನನ್ನೇ ಹೊಗಳೋ ದಾಸನಾಗುವೆ 
ಕಳ್ಳಾಟವಾಡುತ 
ಸುಳ್ಳನ್ನು ಹೇಳುವೆ 
ನೀ ನಂಬದಿರಲು ಸೋತು ನಗುವೆ 
ಎಲ್ಲಿಂದ ಬಂದೆ ನೀನು 
ಏನಾಗ ಬೇಕು ನೀನು 
ಎಲ್ಲಕ್ಕೂ ಉತ್ತರ ಪ್ರೀತಿ ನೀಡಿದೆ 
ಜೋರಾಗಿ ಕೂಗೋ ಆಸೆ 
ಒಂದಾಗಿ ಬಾಳೋ ಆಸೆ 
ನೀ ಬಂದು ಕನಸೂ ಪೂರ್ಣವಾಗಿದೆ.. ಚೆಲುವೆ.. 

ಆರಂಭವೀಗಲೇ  
ಈ ಪ್ರೀತಿಯೆಂಬ ಮಧುಶಾಲೆ 
ತೇಲಾಡುವಂತಿದೆ 
ನೀ ಕಣ್ಣಿನಲ್ಲಿ ನಗುವಾಗಲೇ 
ಓ ಪ್ರೇಮ ದೇವತೆ
ನಿನ್ನನ್ನು ಕುರಿತೇ 
ಹಾಡೋದು ಜೀವಕೆ ವಾಡಿಕೆ 
ನನ್ನಂತೆ ನಿನ್ನಲೂ 
ವ್ಯತ್ಯಾಸ ಕಂಡರೆ 
ಸಹಜ ಅದು ಬೇಡ ಹೆದರಿಕೆ .. 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...