Friday, 29 March 2024

ಓಡುವ ಸಮಯವೇ

ಓಡುವ ಸಮಯವೇ

ಏಕೆ ಅವಸರ ನಿಂತುಕೋ
ಆಡದ ಮಾತಿಗೂ
ಅರ್ಥ ಹೇಳುವೆ ತಿಳಿದುಕೋ
ಹೋದರೆ ಹೋಗಲಿ
ಯಾರೇ ಆದರೂ ಬಾಳಲಿ
ಉಳಿಯುವ ನೆನಪನು
ನಿನ್ನ ಕಿಸೆಯಲಿ ತುಂಬಿಕೋ...

ನೀ ಮುಳ್ಳನು ನಡೆಸುವ ಚತುರನು
ಅ ಮುಳ್ಳಿಗೆ ಸಿಲುಕಿದ ಪಯಣಿಗ ನಾನು...


ತಿರುವುಗಳು ಕಿರು ಕತೆಯ ಹೇಳಿವೆ ಆಲಿಸು
ನೀ ನೆರಳ ನೀಡದ ಮರದ ಮರುಕವ ದಾಟಿಸು 
ಎರವಲಾಗಿವೆ ಪಡೆಯಲಾಗದ ಸುಖಗಳು 
ನೀ ಪಡೆದ ಕಡೆಯಲೇ  ಎಲ್ಲ ಋಣವನು ತೀರಿಸು 
 

ನಿನ್ನ ಕಂಡ ಮೇಲೆ

ನಿನ್ನ ಕಂಡ ಮೇಲೆ  

ಮಾತು ನಿಂತ ವೇಳೆ 
ಕಣ್ಣಲಿ ನೂರಾರು 
ಕಾಮನೆ ಚಿಮ್ಮುತ್ತಿದೆ 
ಸಲ್ಲದ ಮುಂಗೋಪ 
ತಾಳುವೆ ಹೀಗೇಕೆ 
ನಿಲ್ಲದ ಪರದಾಟ 
ಜೀವಕೆ ಸಾಕಾಗಿದೆ 
ಕಾಗದ ನಾನಾಗುವೆ 
ಗೀಚಿಕೋ ಏನಾದರೂ
ಒಂದೊಂದು ಸಾಲನ್ನೂ ಹಾಡಾಗಿಸು 
ಈ ನನ್ನ ಏಕಾಂತ ದೂರಾಗಿಸು 

ಅದೇ ಹೂವ ಮತ್ತೆ ಮತ್ತೆ 
ನಿಧಾನಕ್ಕೆ ಸೋಕಿ ಹೋದೆ 
ನೆಪ ಹೊತ್ತು ಬರಲೇಕೆ ನನ್ನ ಬಳಿ 
ಕದ ಹಾಕ ಬೇಡ ನೀನು 
ಮುದ ನೀಡೋ ರಾಗ ತಂದು
ಮನಸಾರೆ ಸುರಿವಾಗ ಕನಸಿನಲಿ 
ಓ .. ದಿನ ಪೂರಾ ನಿಂದೇನೇ ಧ್ಯಾನ ಸರಿಹೋಗಿದೆ 
ಪ್ರತಿಯೊಂದು ಪದ ನಿಘಂಟು ಹುಡುಕಾಡಿದೆ  
ಕರೆ ನೀಡು  ಸಮೀಪದಲ್ಲೇ ಎದುರಾಗುವೆ 

ನೀ ಹೆತ್ತಿಲ್ಲವಾದರೂ

ನೀ ಹೆತ್ತಿಲ್ಲವಾದರೂ 

ತಾಯಿಗೂ ಮಿಗಿಲಾದೆ ಅವ್ವ 
ನೀ ತುತ್ತಿಟ್ಟು ಸಲಹಿದೆ 
ಹಸಿವಲ್ಲೂ ತಂಪಾಯ್ತು ಜೀವ 

ನಾ ಹೊರಗಿನವ ಎನ್ನದೆ 
ಸೆರಗಲ್ಲಿ ಜೋಪಾನ ಮಾಡಿ 
ಕಾಣದಿರುವಾಗ
ಕಣ್ಣುಗಳು ತಂತಾನೇ ತೇವ 

ರೆಕ್ಕೆಯಡಿ ಸೆಳೆದು 
ಮಳೆ-ಬಿಸಿಲ ತಡೆದು 
ಹೊತ್ತು ಹೊತ್ತಿಗೆ ಮಿಡಿದೆ 
ಪ್ರೀತಿಯ ತಂತಿ 
ಒಂದೇ ಉಸಿರಲ್ಲಿ 
ಕಳೆದಂತೆ ದಿನ ಪೂರ್ತಿ 
ನೂರು ಕೈಗಳು ನಿನಗೆ
ಎಲ್ಲಿ ವಿಶ್ರಾಂತಿ!

ಕಲ್ಲಿನಂತೆ ನಿಂತೆ 
ಕಷ್ಟಗಳ ಎದುರಿಸಿ 
ಹೂವಂತೆ ಎರಗಿದೆ 
ವಾತ್ಸಲ್ಯ ಪಸರಿಸಿ 
ಎದೆಯೊಳಗಿನ ಚಿಲುಮೆ 
ಕಾವು ಮನೆ ತುಂಬ 
ಸಂಸಾರದರಮನೆಗೆ 
ಆಧಾರ ಸ್ತಂಭ

ದೇವರೆದುರಾದರೆ ಏನ ಬೇಡಲಿ ಹೇಳು 
ಎಲ್ಲವನೂ ಕೊಡುವ ನೀನಿರಲು ಎಂದೆ 
ಎಲ್ಲ ನಗಣ್ಯವೆಂಬತೆ ನೀ ನಗುತಲೇ 
ಬೇಕಾದುದ ಕೊಟ್ಟು ಹೊರಟೆ ಮುಂದೆ 

ಹೇಳಲಾಗದ ನೂರು ನವಿರಾದ ಭಾವ 
ಹೇಳಿ ಬಿಟ್ಟರೆ ಎಲ್ಲ ಹೇಳಿ ಬಿಟ್ಟಂತೆ 
ಅದಕಾಗೇ ಆ ಎಲ್ಲ ಭಾವನೆಗಳ ನನ್ನೊಳಗೆ 
ಯಾರಿಗೂ ಸಿಗದಂತೆ ಮಡಿಸಿ ಬಚ್ಚಿಟ್ಟೆ 

Tuesday, 7 March 2023

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ 

ನಿನ್ನೊಲವ ಮಳೆ ಹನಿಗೆ 
ಮಿಂದಿರಲು ಮನಸಿದು  
 
ನಿಂತು ನಿಂತು ಬೀಸಿದಂತೆ 
ಸಂಜೆ ತಂಪು ಗಾಳಿ 
ಅಂಕೆ ಮೀರಿ ಬರುವ ಮಾತು 
ಹಾಕಬೇಕೇ ಬೇಲಿ 

ಜೊತೆ ಇರಲು ಶುಭಯೋಗ   
ಅನುದಿನವೂ ಉಡುಗೊರೆಯೇ 
ಪಡೆದಿರಲು ಒಲವನು 

ಹೇಗೋ ಹಾಗೆ ಸಾಗಿ ಬಿಡಲಿ 
ನೀನು ಇರದ ವೇಳೆ   
ನನ್ನ ಎದೆಯ ತುಂಬಿಕೊಳಲಿ 
ನಿನ್ನ ಪ್ರೀತಿ ಸಾಲೇ.. 

ಸದಾ ನಿನ್ನ ನೆನೆವಾಗ 
ನೆನಪಿನಲೂ ನಸು ನಗುವೆ 
ಅರಳಿಸುತ ಬದುಕನು... 

ಒಲವೇ ಬಿಡಿಸು

ಒಲವೇ ಬಿಡಿಸು

ನಸುಕಾದಾಗ ಕನಸೊಂದನು
ಬಿಡದೇ ಜಪಿಸು
ನಾ ನೆನೆವಂತೆ ನೀ ನನ್ನನು
ಅರಳದೆ ಹೇಗೆ‌ ಇರಬಲ್ಲೆ 
ನೀನು ಇರುವಾಗ ನನ್ನ ಮನಸಿನೊಳಗೆ
ಮರೆಯದೆ ಓದು ಕಣ್ಣಲ್ಲಿ
ನೂರು ನವಿರಾದ ಸಾಲು ತಂದೆ ನಿನಗೆ
ಪ್ರತಿಯೊಂದೊಂದು ನಿಮಷನೂ 
ವರದಾನ ನೀನಿರುವಾಗ


ನೀನೆಂದರೆ ಹೋ ಓ..
ಬದುಕಿಗೆ, ಏನೋ ಉಲ್ಲಾಸವು
ಏನೆಂದರೂ ಹೋ ಓ..
ಸಮ್ಮತವೇ, ಎಂದಿದೆ ಜೀವವು
ಕವಿದಿರೋ ಇರುಳಿಗೆ
ನೀನಿರೆ ದೀವಿಗೆ
ಕತೆ ಇನ್ನೇನು ಇಲ್ಲಿಂದ ಬದಲಾಗೋ ಹಾಗಿದೆ..

ಒಲವೇ ಬಡಿಸು
ನಸುಕಾದಾಗ ಕನಸೊಂದನು

ಎಂದಿಗೂ ಹೋ ಓ
ಮುಗಿಯದ ಬಂಧವೇ ನಮ್ಮದು
ಹೂ ನಗು ಹೋ ಓ
ಎದುರಲಿ‌ ಸ್ವರ್ಗವೂ ಮಣಿವುದು
ಬದಲಿಸೋ ಪುಟದಲಿ
ಮದಲನೇ ಸಾಲಲಿ
ಇರಲಿ ನಿನ್ನದೇ ಛಾಯೆ ಅದರಲ್ಲೇ ಹಿತವಿದೆ..

ಮಬ್ಬು ಮುಸುಕನು

ಮಬ್ಬು ಮುಸುಕನು 

ಹೊದ್ದ ರಾತ್ರಿ 
ತೂಗು ಜೋಳಿಗೆ ಇದೋ  
ಕದ್ದು ನೋಡುವ 
ಚಂದ್ರನಿಲ್ಲ 
ಸದ್ದು ಮೂಡದೇ  

ಹೇಳು ಎಲ್ಲಿಗೆ 
ತೇಲಿ ಹೋದೆ
ತಂಪು ಗಾಳಿಯೇ ಇರು 
ತೂಗುವಾಟವು 
ಬೇಕು ಎಂದು 
ಕೋಪಗೊಂಡಿದೆ ತರು 
ವಿನೋದವೆಲ್ಲ ನಿನ್ನ ಹಿಂದೆ 
ತಯಾರಿಯಾಗಿ ನಿಂತ ಹಾಗೆ 
ಇರಾದೆ ನಿನ್ನದೇನು ಹೇಳು... 

ಚಿಲಿಪಿಲಿ ಇದೇ ರಾಗ ಎದೆಯಲಿ  
ಬೆರೆಸುವೆ ಪದೆ ಹೀಗೇ ಉಸಿರಲಿ 
ಗುನುಗಲು ಅದೇಕೋ ನೀ ಮರೆಯಲಿ 
ಕನಸಿಗೂ ಸಕಾಲ ಈ ಜೊತೆಯಲಿ 
ಮರೆಯದಂತೆ ಒಂದೂ ನಿಮಿಷ ತುಂಬು ದಿನಚರಿ 
ಎಲ್ಲವನ್ನೂ ಮೀರಿ ಬಂದೆ ನೀನೇ ಅಚ್ಚರಿ 
ತರರಾರ ರಾ ರ

ಇಲ್ಲೇ ಎಲ್ಲೋ ಕಳೆದಂತೆ ಮನಸು

ಇಲ್ಲೇ ಎಲ್ಲೋ ಕಳೆದಂತೆ ಮನಸು

ಎಲ್ಲೆ ಮೀರಿ ಹೋದಂತೆ ಕನಸು
ನೀ ಕಂಡ ಮೇಲೆ, ಬದಲಾದ ವೇಳೆ
ಅರಿವಿಲ್ಲದಂತೆ ಸಾಗಿತೇನೋ...

ನಿನ್ನಂದವ ಕೊಂಡಾಡಲು
ಆಯಾಸವೇ ಆಗದಲ್ಲ
ಏನೊಂದನು ಗೀಚಿಟ್ಟರೂ
ಸೋಲುತ್ತಿವೆ ಪದವೆಲ್ಲ 
ಅವಿತುಬಿಡಲೇನು ನಿನ್ನ ನೆರಳಲ್ಲೇ 
ಸರಿಯದಿರು ಚೂರೂ, ಹೇಳದಂತೆ... 

ಇಲ್ಲೇ ಎಲ್ಲೋ ಕಳೆದಂತೆ ಮನಸು
ಅದು ಎಲ್ಲಿ ಕಳುವಾಯ್ತೋ ತಿಳಿಸು 
ನೀ ಕಂಡ ಮೇಲೆ, ಬದಲಾದ ವೇಳೆ
ಅರಿವಿಲ್ಲದಂತೆ ಸಾಗಿತೇನೋ...

ಹೊಂಬಣ್ಣದ ಕಾರಂಜಿಯು 
ಚಿಮ್ಮುತ್ತಿದೆ ಹೋದಲ್ಲೆಲ್ಲ 
ಕೂಡಿಟ್ಟರೂ ಕದ್ದೋಡುವೆ 
ನೀ ಅರ್ಥವೇ ಆಗುತ್ತಿಲ್ಲ 
ತುಟಿಗೆ ತುಟಿಯನ್ನು ಎಳೆದು ತರುವಾಗ 
ಮುಗಿಯದಿರೋ ಪಾಡು ಏತಕೋ.. 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...