Saturday, 25 December 2021

ಹಾಡೊಂದಿಗೆ ಜೀವನ

ಹಾಡೊಂದಿಗೆ ಜೀವನ 

ಹಾಡಿನೊಂದಿಗೇ ಆಲಂಗನ 
ಭಾವನೆಗಳ ಮಜಲಿಗೆ 
ನೀಡಿ ದನಿಯ ಹಿನ್ನೆಲೆ  
ಪುಣ್ಯ ಮಾಡಿದಂತಿವೆ
ಪದ ಆ ಕೊರಳಲೇ
ಸಂತೋಷವ ಹಂಚುತ್ತಿರೋ
ಸಂಗೀತದ ಓ ಮಾಂತ್ರಿಕ
ನಮ್ಮೆಲ್ಲರ ಹಾರೈಕೆಯು ನಿಮ್ಮೊಂದಿಗೆ
ಪ್ರೀತಿಯ ಹ್ಯಾಪಿ ಬರ್ತ್ಡೇ..

ಪ್ರತಿ ದಿನ ಮುಂಜಾನೆ ಮಂಜಲಿ
ಸರಾಗವಾದ ನಾದ ನಿಮ್ಮದೇ
ರೂಮಲ್ಲಿರೋ ರೇಡಿಯೋಗೆ ನಿಮ್ಮ ಮೇಲೆ
ಯಾತಕೋ ಲವ್ವಾಗಿ ಹೋಗಿದೆ
ಗೆಜ್ಜೆ ಕಟ್ಟಿ ಕುಣಿಯಲು
ಲೋಕ ಮರೆತು ದಣಿಯಲು
ಬೇಕು ನಿಮ್ಮ ಗಾಯನ
ಖುಷಿ ಮರವಾಗಲು
ಸಂತೋಷವ ಹಂಚುತ್ತಿರೋ
ಸಂಗೀತದ ಓ ಮಾಂತ್ರಿಕ
ನಮ್ಮೆಲ್ಲರ ಹಾರೈಕೆಯು ನಿಮ್ಮೊಂದಿಗೆ
ಪ್ರೀತಿಯ ಹ್ಯಾಪಿ ಬರ್ತ್ಡೇ..

ಹೊಸ ಹೊಸ ಪ್ರಕಾರದಲ್ಲಿ ರಂಜಿಸುತ್ತ
ಸಾಗಿದೆ ಈ ನಿಮ್ಮ ಯಾನವು 
ಅಭಿನಯ ಯಾರಿಗೇನು ಕಮ್ಮಿ ಇಲ್ಲದಂತಿದೆ 
ಒಂದೊಂದು ಬಾರಿಯೂ 
ಯಾವ ಲೋಕವಾದರೂ 
ಭಾವಪೂರ್ಣವಾಗಿಸೋ 
ಮೋಡಿಗಾರ ಎಂದರೆ 
ಅದು ನೀವೊಬ್ಬರೇ 
ಸಂತೋಷವ ಹಂಚುತ್ತಿರೋ
ಸಂಗೀತದ ಓ ಮಾಂತ್ರಿಕ
ನಮ್ಮೆಲ್ಲರ ಹಾರೈಕೆಯು ನಿಮ್ಮೊಂದಿಗೆ
ಪ್ರೀತಿಯ ಹ್ಯಾಪಿ ಬರ್ತ್ಡೇ..

ನಿನ್ನ ಕಣ್ಣಲ್ಲಿ ಸೆರೆಯಾಗುವಾಗ

ನಿನ್ನ ಕಣ್ಣಲ್ಲಿ ಸೆರೆಯಾಗುವಾಗ

ಬೇರೆ ಇನ್ನೆಲ್ಲೂ ಮನಸ್ಸಾಗದೀಗ
ಹೇಳಿ ಕೇಳಿ ಮೂಡೋದಲ್ಲ ಅನುರಾಗ
ಕಣ್ಣಿನಲ್ಲೇ.. ಕಣ್ಣಿನಲ್ಲೇ ಕೊಲ್ಲೋ ನಲ್ಲೇ.. ಓ...
ನಿನ್ನ ಕಣ್ಣಲ್ಲಿ ಸೆರೆಯಾಗುವಾಗ
ಕಣ್ಣಿನಲ್ಲೇ.. ಓ.. ಕಣ್ಣಿನಲ್ಲೇ .. ಓ.. ಕಣ್ಣಿನಲ್ಲೇ ಕೊಲ್ಲೋ ನಲ್ಲೆ 

ಬೇಕು ಬೇಕೆಂದೇ ಭೇಟಿಯಾದ ಹಾಗೆ
ಒಂದೇ ಏಟಲ್ಲಿ ಲೂಟಿಯಾದ ಹಾಗೆ
ನಿನ್ನ ಅಂದಕ್ಕೆ ಸಾಟಿಯಿಲ್ಲ ಹೇಗೆ
ಸೇರು ನನ್ನ ಹಾಗೇ, ಶ್ವಾಸವಾದ ಹಾಗೆ
ನಿನ್ನ ಕಣ್ಣಲ್ಲಿ ಸೆರೆಯಾಗುವಾಗ
ಕಣ್ಣಿನಲ್ಲೇ.. ಓ.. ಕಣ್ಣಿನಲ್ಲೇ .. ಓ.. ಕಣ್ಣಿನಲ್ಲೇ ಕೊಲ್ಲೋ ನಲ್ಲೆ 

ಕೊಟ್ಟು ಪಡೆಯೋಣ ಎಲ್ಲವನ್ನೂ ಬೇಗ
ಇಟ್ಟುಕೊಳ್ಳೋಣ ಗುಟ್ಟಿಗೊಂದು ಜಾಗ
ಸದ್ದೇ ಇರದಂತೆ ಪ್ರೀತಿಯಾಗುವಾಗ
ಕೇಳು ನನ್ನಲೀಗ, ನಿನ್ನದೊಂದು ರಾಗ

ಚೂರಾಗಿದೆ ಜೀವನ

ಚೂರಾಗಿದೆ ಜೀವನ

ಕಾಡೋ ನೆನಪಿಗೆ ಆದೆ ಕಾರಣ
ಬಣ್ಣವೆಲ್ಲ ಮಾಸಲು
ಕಣ್ಣು ಮಂಜಾಗಿದೆ
ದೀಪವಾರಿ ಹೋಗಲು
ಜೊತೆ ಬೇಕಾಗಿದೆ
ಈಡೇರಿಸು ಮನದಾಸೆಯ
ಆಲಂಗಿಸು ಅನುರಾಗಿಯ
ಈ ಗಾಯಕೆ ಬೇಕಾಗಿದೆ ನಿನ್ನಾಸರೆ
ಜೀವದ ಬಯಕೆ ನೀನು 

ವಿದಾಯಕೆ ನೂರಾರು ನೆಪಗಳ 
ಕೊಡೋದು ಬೇಡ ಯಾಕೆ ಸುಮ್ಮನೆ 
ಉಪಾಯವೇ ಇಲ್ಲದಂತೆ ಸೋತು ಹೋದೆ  
ಜಾರಿದ ಕಣ್ಣೀರೇ ಪ್ರಾರ್ಥನೆ 
ನಿನ್ನ ಗುಂಗಿನಲ್ಲಿಯೇ 
ಮೂಢನಂತೆ ಅಲೆಯುವೆ 
ಕಾವಲಿಟ್ಟು ಕನಸಿಗೆ 
ಕತೆ ಹೆಣೆದಾಗಿದೆ
ಈಡೇರಿಸು ಮನದಾಸೆಯ
ಆಲಂಗಿಸು ಅನುರಾಗಿಯ
ಈ ಗಾಯಕೆ ಬೇಕಾಗಿದೆ ನಿನ್ನಾಸರೆ
ಜೀವದ ಬಯಕೆ ನೀನು 

ಪರಾಗವು ಸರಾಗವಾಗ ತೇಲಿ ಬಂದು 
ನೀಡಿದೆ ನೀನಿರುವ ಸೂಚನೆ
ನೀ ಎಲ್ಲಿಯೋ ಹೂವಾಗಿ ಅರಳುವಾಗ ಇಲ್ಲಿ 
ತಾಳಿದೆ ನೂರೆಂಟು ಯೋಚನೆ 
ಬೇಲಿ ಹಾರಿ ಬಂದರೂ
ಕಾಣಲಿಲ್ಲಿ ಎಲ್ಲಿಯೂ 
ಚುಚ್ಚಿಕೊಂಡ ಮುಳ್ಳಿಗೂ 
ವ್ಯಥೆ ಶುರುವಾಗಿದೆ 
ಈಡೇರಿಸು ಮನದಾಸೆಯ
ಆಲಂಗಿಸು ಅನುರಾಗಿಯ
ಈ ಗಾಯಕೆ ಬೇಕಾಗಿದೆ ನಿನ್ನಾಸರೆ
ಜೀವದ ಬಯಕೆ ನೀನು 

Monday, 1 November 2021

ಹಗಲಿರುಳೆನದೆ, ಅನುದಿನ ಬಿಡದೆ

ಹಗಲಿರುಳೆನದೆ, ಅನುದಿನ ಬಿಡದೆ 

ಬೆರಗುಗಳ ಮಳೆ ಸುರಿಸಿದೆ ಪ್ರಣಯ 
ಅನುಭವವಿರದೆ, ಚಲಿಸುವ ನಡಿಗೆ 
ಎಡವಿದ ಗಳಿಗೆ ಹಿಡಿವುದು ಪ್ರಣಯ 

ಮರೆತರೂ ನೆನಪು ತರಿಸುವ ವಿಷಯ 
ವಿಷಯಾಂತರ ಮಾಡದು ಭರವಸೆಯ 
ಸವಿ ಸಮಯವನು ಸವೆಸುವ ಹೃದಯ 
ಹಾಡೊಂದಿಗೆ ಕಾದಿದೆ ಆಲಿಸೆಯಾ?

ಹೊಸ ತುಡಿತಗಳು ಜೊತೆಗೊಡುತಿರಲು
ಬರೆಯುವ ಸರದಿ, ಸುಂದರ ಕವನ
ನುಡಿದರೆ ಹರಳು ಕಳೆಯುವ ಭಯಕೆ 
ಕೊನೆಯಿರಿಸುತಿದೆ ಮೌನದ ಮಿಲನ

ಅರೆ ಮುಚ್ಚಿದರೆ, ಅರೆ ತೆರೆದಂತೆ 
ಹೆಚ್ಚೇನನೂ ಹೇಳಲು ಆಗದಿರೆ 
ಸ್ವಪ್ನಗಳೆಲ್ಲ ಕಂಬನಿ ಹಿಡಿದು 
ಹೊರಹೊಮ್ಮಿವೆ ಕಣ್ಣು ನಾಚುತಿರೆ  

ನಿಜ ಹೇಳಲು ಬರದೆ ಅನುರಾಗಿ 
ಒಗಟಿನ ಧಾಟಿಯ ಮೊರೆ ಹೋದಂತೆ  
ಇರುವಲ್ಲಿಯೇ ಮರೆತ ತನ್ನನ್ನು 
ಬೊಗಸೆಯ ಹಿಡಿ ನೀರಲಿ ಪಡೆದಂತೆ 

ಎರಡು ತೊರೆಯು ಜೊತೆಗೂಡಿರಲು 
ಮೊರೆವ ಅಲೆಗೆ ನೆರವಾಗಿರಲು 
ಕರೆ ನೀಡದೆಯೇ ಬರುವುದು ಪ್ರಣಯ 
ಕಡಲ ಒಡಲಲಿ ಮಗುವಾಗಿರಲು... 

ಅಪ್ಪು ಅಪ್ಪು

 ಅಪ್ಪು ಅಪ್ಪು 

ಮನದಾಳದಲ್ಲಿ ಅಚ್ಚಳಿಯದಂಥ ನೆನಪು 
ಅಪ್ಪು ಅಪ್ಪು 
ಮಗುವಂಥ ನಗುವಲ್ಲಿ ಕಾಡುವಂಥ ನೆನಪು 

ನಮ್ಮೆಲ್ಲರ ಮನಸಲಿ ನಿನಗೆ ಉಂಟು ಪಾಲು 
ಅಗಲಿದ ಈ ವೇಳೆಗೆ ನಿಲ್ಲದಾಯ್ತು ಅಳಲು 
ಸೂರ್ಯ ಚಂದ್ರ ಇರುವ ವರೆಗೂ ಕೊಂಡಾಡುತೀವಿ ಹೆಸರ  
ಮತ್ತೆ ಹುಟ್ಟಿ ಬಾ ಕನ್ನಡಿಗರ ಮನೆ ಮಗನೇ ನೀನು ಅಮರ 

ಅಪ್ಪು ಅಪ್ಪು 
ಕರುನಾಡಿನಲ್ಲಿ ಅಚ್ಚಳಿಯದಂಥ ನೆನಪು 
ಅಪ್ಪು ಅಪ್ಪು 
ಮಗುವಂಥ ನಗುವಲ್ಲಿ ಕಾಡುವಂಥ ನೆನಪು 

ದೃಷ್ಟಿ ತಾಕದಿರಲಿ ದೇವರೇ

ದೃಷ್ಟಿ ತಾಕದಿರಲಿ ದೇವರೇ 

ನಮ್ಮ ಮನೆಯ, ಈ ಮಗುವ 
ಈ ನಗುವ, ಮೊಗದ ಸಿರಿಗೆ ಮನಸೋತು 
ದೃಷ್ಟಿ ತಾಕದಿರಲಿ ದೇವರೇ !

ಒಂಬತ್ತು ಮಾಸಗಳ ಗರ್ಭದ ಗುಡಿಯನು 
ನಮಿಸಿ ಈ ಜಗವ ಕಾಣಲು ಬಂದಿಹನು 
ಕಣ್ಣಿಗೆ ಧೂಳು ಬೀಳುವ ಮುನ್ನ 
ರೆಪ್ಪೆಯ ಹಾಗೆ ಕಾಯುವೆ ಇವನ 
ಎಲ್ಲ ಸುಖವ ನೀಡುತ 
ಸುಖಿಸಿದವನು ನಾನು 
ಅಪ್ಪ ಎಂದ ಕೂಡಲೇ 
ಕುಣಿಯುವವನು ನಾನು 
ನನ್ನ ಮಗುವೇ ನನ್ನ ಸರ್ವಸ್ವವು... 

ದೃಷ್ಟಿ ತಾಕದಿರಲಿ ದೇವರೇ !

ತಾರೀಫು ಮಾಡುತಲೇ ತರಲೆ ಮಾಡುವ  
ತೂಕಡಿಕೆ ಬರಲು ಮಡಿಲಿಗೆ ಜಾರುವ 
ಮುಂಗೋಪದಲ್ಲೂ ತುಂಬಿದ ಚಂದ್ರ 
ಆಟಾಡುವಲ್ಲಿ ಸೋಲಿಸೋ ಮಿತ್ರ 
ನಾನು ಎಂಬ ಅಹಮಿಗೆ 
ಅಂತ್ಯ ಹಾಡೋ ಶೂರ 
ಏನೇ ಇರಲಿ ಹೇಳುವ 
ಸಂಕೋಚವಿರದೆ ನೇರ 
ನನ್ನ ಮಗುವೇ ನನ್ನ ಆದರ್ಶವು... 

ದೃಷ್ಟಿ ತಾಕದಿರಲಿ ದೇವರೇ !

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ

ಕನಸ ಕೊಳ್ಳೆ ಹೊಡೆಯೋ ಕೆಲಸ ಎಷ್ಟು ಸರಿ
ನನ್ನ ನಿನ್ನ ನಡುವೆ ಮೌನ ಕಾದಂಬರಿ
ಬರೆದು ಸಾಕಾಯ್ತು ನೀ ಚೂರು ಮುಂದುವರಿ
ಎಲ್ಲ ಮಾತಿಗೂ ನಗುವ ಆ ವೈಖರಿ
ನೂರು ನವಿಲು ಕುಣಿದಂತೆ ತೆರೆಯುತ್ತ ಗರಿ

ಖಾತ ಮಾಡಿಸುವೆ ಹೃದಯನ ನಿನ್ನೆಸರಲೇ
ಇಟ್ಟು ಕೊಂಡಾಡುವೆ ನಿನ್ನ ನನ್ನುಸಿರಲೇ
ಎತ್ತು ಹೊಡೆವಾಗ ನಿನ್ನ ಮನೆಯ ಮುಂಬಾಗಿಲಲಿ
‍ಗೆಜ್ಜೆ ಸದ್ದನ್ನ ಸೆಳಕೊಂಡೆ ನಿನ್ನ ಹೆಜ್ಜೆಯಲಿ
ಯಾವ ಹೂವ ಮುಡಿಸೋದಂತ ಗೊತ್ತಾಗದೆ
ತೋಟ ಮಾಡಿಟ್ಟೆ ಆಗಿದ್ದು ಆಗೋಗಲಿ..

ಜೀವ ಹೋದಂತೆ ಎದುರು‌ ಬದಿರು ಸಿಕ್ಕರೆ
ಮತ್ತೆ ಮರು ಜೀವ ನೀ ನೀಡು ಸಿಹಿ ಸಕ್ಕರೆ
ಕೆಂಪು ಗಲ್ಲಕ್ಕೆ ಕಾರಣ ನಾನಾದರೆ
ನೀ ನನ್ನ ದೊರೆಸಾನಿ ನಾ ನಿನ್ನ ದೊರೆ
ಮನವ ತುಂಬಿದ ಮೇಲೆ ಮನೆ ತುಂಬಿದಂತೆ
ಬಿರುಕು ಬಿಟ್ಟೀತು ಮನಸು ನೀ ಸಿಗದಿದ್ದರೆ..

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...