Friday, 3 May 2013

ಶಾಂತಂ ಪಾಪಂ, ಪೋಲಿ ಕಾವ್ಯಂ

ಪೋಲಿ ಪದ್ಯ ಬರೆಯೋಕಂತ ಹಂಗೋ ಹಿಂಗೋ ಕುಂತೆ
ಕಂಡಿದ್, ಕೇಳಿದ್, ಓದಿದ್ದೆಲ್ಲಾ ತುಂಬಿಸ್ಕೊಂಡು ಮೂಟೆ
ಮನ್ಸಿನ್ ಮೂಲೆ ಗಲ್ಲಿಯಲ್ಲಿ ಪೇಚಾಟದ್ದೇ ಸದ್ದು
ಕೇಳೋದಕ್ಕೂ ಪುರ್ಸೊತ್ತಿಲ್ಲ ನಿಮ್ಸನಾದ್ರೂ ಕಾದು

ದೇವ್ರು-ದಿಂಡ್ರು ಗೆಪ್ತಿಗ್ ಬಂದ್ರು ಕೆನ್ನೆ ಬಾರಿಸ್ಕೊಂಡೆ
ಗುರುಗೋಳ್ ಕಿವಿ ಹಿಂಡ್ದಂಗಾಯ್ತು ಹೆಂಗೋ ತಪ್ಪಿಸ್ಕೊಂಡೆ
ಬಣ್-ಬಣ್ ಮಾತಿನ್ ರಂಗು, ಗುಂಗೆರಿಸ್ತಿತ್ತು ಕಿವಿಯ
ಗೆಪ್ತಿ ಆತು ಎಲ್ಲೋ ಗೆಳೆಯ ಪಿಸ್ಗುಟ್ಟಿದ್ ವಿಸ್ಯ

ತೋಟದ್ ಮನೆ ತಮಟೆ ಏಟು ಬರಿಯೋಕೊಸಿ ಘಾಸಿ
ಗುಂಡು ತೋಪಿನ ಮರಗೋಳ್ ಹಿಂದೆ ಅಡ್ಡಡ್ ಬಂದೆ ಒಸಿ
ನಾಲ್ಗೆ ಕಚ್ಕೊಂಡ್ ಹುಣ್ಣಾಗೋಯ್ತು ಅಷ್ಟರ್ ಮಟ್ಟಿಗ್ ನಾಚ್ಕೆ
ಅಲ್ಗೂ ಅಕ್ಸ್ರ ಮೂಡ್ತಾಯಿತ್ತು ಹಾಳೆ ಮ್ಯಾಲೆ ಬೆಚ್ಗೆ

ಪೋಲಿ ಟೆಂಟು, ಪೋಲಿ ಸಿನ್ಮಾ ಗೆಪ್ತಿ ಬರ್ದೇ ಇದ್ರೆ
ಪೋಲಿ ಪದ್ಯ ಅನ್ಸೋದಾದ್ರೂ ಹೆಂಗೆ ಅಂದ ಮಿತ್ರ
ಕದ್ದು ನೋಡಿದ್ ಸನ್ನಿವೇಶ ಹಂಗೇ ಕಣ್ಮುಂದ್ ಬಂತು
ಏನ್ ಬರ್ಯೋದ್? ಏನ್ ಬಿಡೋದ್? ಎಲ್ಲಾ ಮರ್ತೇ ಹೋಯ್ತು

ಹೆಂಗೋ ಹಂಗೆ ಬರ್ದು ಇಟ್ಟೆ ಸವಾಲ್ ಹಾಕ್ದೋನ್ ಮುಂದೆ
ಅರ್ಧಂಬರ್ಧ ಅರ್ಥ ಮಾಡ್ಕೊಂಡ್ ಸುಮಾರು ಅಂತಂದ
ಏನೋ ಸ್ವಲ್ಪ ತಪ್ಪು ಮಾಡಿ ಕಾಟ್ ಹೊಡ್ದಿದ್ದೆ ಒಂದ್ತುಣ್ಕು
ಅದೇನು ಅಂತ ಹೇಳೋವಷ್ಟರಲ್ ಇದ್ ನನ್ ಪ್ರಾಣ ತಿಂದ

ಲೋಕಕ್ ಹೆದ್ರಿ ಬಚ್ಚಿಟ್ಟೆ ಹರ್ದಾಕೋ ಮನ್ಸಿಲ್ದೀರಾ
ಆಗಾಗ್ ತೆರ್ದು ಓದ್ತಿರ್ತೀನಿ ಮರ್ತಿಲ್ಲ ಅದ್ನ ತೀರಾ
ಬರ್ದಿದ್ ಕರ್ಮ ಅನ್ಕೊಂಡು ಮಡ್ಚಿಟ್ಟೆ ಕಾಣ್ದಂಗೆ
ಪೋಲಿ ಪದ್ಯ ಬರ್ದೊರ್ ಕಥೆ ಇರ್ತೈತೇನೋ ಹಿಂಗೆ?!!......

                                                        
                                                                 --ರತ್ನಸುತ

Tuesday, 30 April 2013

ಅನಾಮಿಕೆ

ಹಳದಿ ಕೇಶ ಬಂದಿ (hair band) ಸಂಬಾಳಿಸಿತ್ತು ಅವಳ,
ಕೋಲು ಮುಖವ ಮರೆಸುತಿದ್ದ ತುಂಟ ಮುಂಗುರುಳ
ಗಮನ ಸೆಳೆಯುವಷ್ಟು ಘಾಢವಾಗಿ ಅಲ್ಲದಿದ್ದರೂ
ಸಹಜತೆಯ ಮುಖ ಲಕ್ಷಣ ಇಷ್ಟವಾಯ್ತು ಬಹಳ
ಕೊಟ್ಟ ಸುಳಿವ ಹಿಡಿದು ನನ್ನ ಗುರುತು ಹಿಡಿವಳೇನೋ?!!
ಇನ್ನೂ ಬಣ್ಣಿಸುತ್ತಾ ಇಕ್ಕಟ್ಟಿಗೆ ಸಿಲುಕಲಾರೆ
ಅವಳ ಹೆಸರು ಏನೆಂಬುದು ತಿಳಿದಿಲ್ಲ ನನಗೆ,
ಆದರೆ ನಾನಿಟ್ಟ ಮುದ್ದು ಅಡ್ಡ-ಹೆಸರ ಹೇಳಲಾರೆ :p


ಕಳೆದುಕೊಂಡಳಾ ಕೇಶ ಬಂದಿಯ, ಮುಂಗುರುಳಿಗೆ ಬಿಡುವು ಕೊಟ್ಟು ??!!
ಇಂದೇಕೋ ನೋಡಬೇಕನಿಸುತಿದೆ ಅವಳ ಮುಖ :(

ಮುಂಗುರುಳ ಮರೆಯಲ್ಲಿ ಕದ್ದು ನೋಡಲೇ?
ತಂಗಾಳಿ ಬೀಸಿಗೆ ಕಾದು ಕೂರಲೆ?
ಅವಳಾಗೇ ಸುರುಳಿ ಕಿವಿ ಮರೆಗೆ -
- ಸಿಕ್ಕಿಸಿಕೊಳ್ಳುವಾಗ ಸಿಕ್ಕಿ ಬೀಳಲೇ?

ಶಬ್ಧವನ್ನೇ ನಾಚಿಸುವ ಹೆಸರು ಅವಳದ್ದು
ನಾಚಿ ಕಚ್ಚಿಕೊಂಡ ಗಾಯದ ನಾಲಿಗೆ ನನ್ನದು
ಯಾಕೆ, ಹೇಗೆ, ಏನಾಯಿತೆಂದು ಕೇಳದಿರಿ
ವಿವರಿಸಲಾರೆ ಮುಂದೆ ಏನೊಂದು .. !!!


                                                    --ರತ್ನಸುತ

Friday, 26 April 2013

ತೆಲುಗು ಹುಡುಗಿಗೆ, ಕನ್ನಡ ಪ್ರೇಮ ನೆವೇದನೆ

ನೀ ನಕ್ಕಾಗ, ನಿನ್ನ ನಗುವಿನಷ್ಟೇ ಆ ಮುಖವೂ ಮುದ್ದು
ಹೇಳಬೇಕನಿಸಿದ್ದುಂಟು ಈ ವಿಷಯ ನಿನಗೇ ನಾ ಖುದ್ದು
ಆದರೂ ಮೂಖಾಗಿಸಿದವು ಮರೆಯಾಗಿ ಮಾತು ಕದ್ದು
ಏನೆಂದು ಬಣ್ಣಿಸಲಿ, ಮನ ಬಳಲುತ್ತಿತ್ತು ಎದ್ದು-ಬಿದ್ದು
ಆ ಕ್ಷಣಕೆ ಸಮಾದಾನಕರ ಕಾರಣಗಳು ರದ್ದು
ಕೇವಲ ನನ್ನೊಳಗೆ ಕಿತ್ತಾಟ ಸದ್ದು
ನೀ ಮೆಚ್ಚುವ ಹಾಗೆ ನೀನೆ ನನ್ನ ತಿದ್ದು
ಆಗಲೇ ಮೆರೆಯ ಬಲ್ಲೆ ನಿನ್ನ ಗೆದ್ದು ......
ಪದ್ದು....  ಈ ಕವನ ಇಷ್ಟವಾಗದಿದ್ದರೆ ನನ್ನ ನೋಯಿಸ ಬೇಡ ಎದೆಯ ಒದ್ದು...
ನನಗೆ ತೆಲುಗುಲೋ ಬರೆಯಲು ರಾದು.... ಪ್ಲೀಸ್ ಅಲಾ ಚೂಡೋದ್ದು......

                                                                                   --ರತ್ನಸುತ

Thursday, 25 April 2013

ದಾಸವಾಳ
























ಬಳ್ಳಿ ತುಂಬ ಅರಳಿದ ಮೊಗ್ಗಿನ ಸುಮ ರಾಶಿ
ಎಲೆಗಳನ್ನೂ ನಾಚಿಸುವ ಹೂವಿನ ಮೈ ಬಣ್ಣ
ಒಮ್ಮೆ ಒಂಟಿ, ಒಮ್ಮೆ ಜಂಟಿ, ಮತ್ತೊಂದೆಡೆ ಇಡೀ ಬಳಗ
ಹಿತ್ತಲ ಕಣ್ಮರೆಯ ಚಿಗುರ ಧಟ್ಟ ದಾಸವಾಳ ಗಿಡ                   [೧]

ನೀರೆರೆಯದೆ, ಗೊಬ್ಬರದ ವಾಸನೆ ಕಾಣದ ಬಡಪಾಯಿ
ಆದರೂ ಸಿರಿವಂತಿಕೆ ಮೆರೆದ ಪ್ರತ್ಯಕ್ಷ ನಿದರ್ಶನ
ಹಬ್ಬಗಳಿಗೆ ಕಾಯದ ಮಡಿಲ ಚಿಗುರ  ಮೊಗ್ಗು, ಹೂವು
ದಿನ ನಿತ್ಯ ಆರಾಧಕರ ಪೂಜೆಗೊಲಿದ ಕಾರಣ                      [೨]

ಕಿತ್ತಷ್ಟೂ ಕೈಸೇರುವುದು, ಕೊಸರಿನ ಸಿಳಿವಿಲ್ಲ
ಕಾವಲಿಡುವ ಚಿಂತೆ ಬೇಡ, ಕದಿವವರೂ ಇಲ್ಲ
ಒಂದು ಬೆರೆಳ ಕಿತ್ತು ನೆಟ್ಟರೊಂದು ಜೀವದಾನ
ಘನಿಕನೋ, ತಿರುಕನೋ, ಈರ್ವರಿಗೂ ಸಮ ಸನ್ಮಾನ             [೩]

ಆಯುರ್ವೇದದ ಮೂಲಿಕೆಯಲ್ಲೊಂದು ಈ ಜೀವಿ
ಸೌಂದರ್ಯ ವರ್ದಕಗಳ ನಾಚಿಸುವ ಗುಣವತಿ
ಮಾರುಕಟ್ಟೆಯಲ್ಲಿ ಬೇಡಿಕೆಯಿರದ ಈ ಚೆಲುವಿಗೆ
ಯೋಗ್ಯತೆಗೂ ಮೀರುವ ಬೆಲೆ ಸಿಗುವಂತಾಗಲಿ ಪರಿಸ್ತಿತಿ           [೪]

ರುಚಿಕರ ಮಧು ಅಮಲೇರಿಸಿ ಸೆಳೆವುದು ದುಂಬಿಗಳ
ಇರುವೆಗಳಿಗೆ ಜೀವನ ನಡೆಸಲು ಸೂಕ್ತ ತಾಣ
ಮಂಗಗಳಿಗೂ ಒಮ್ಮೊಮ್ಮೆ ಅನಿವಾರ್ಯ ಆಹಾರ
ಜಾನುವಾರುಗಳಿಗೆ ಸಿಕ್ಕರೆ ಸಿಹಿ ಹೂರಣ                            [೫]

ಗುಡಿ ದೇವರ ಶಿಲೆಗಳಿಗೆ ಅಲಂಕಾರ ಬೆರಗು
ಸತ್ತವರ ಎದೆ ಮೇಲೂ ನಗುವ ತ್ಯಾಗ ಮೂರ್ತಿ
ಮುಡಿಯೇರಲು ಹೆಚ್ಚಿಸುವುದು ಚೆಲುವೆಯರ ಚೆಲುವ
ಯಾಮಾರಿದವರ ಕಿವಿಗೆ ಉಡುಗೊರೆ ಈ ಹೂವ                    [೬]

ಅತಿ ಸರಳ ಸ್ವಭಾವ, ನಿಷ್ಚಂಚಲ ಕೋಮಲೆ
ದಿಢೀರ್ ನೆಂಟರ ಆಗಮನಕೆ ತಾಂಬೂಲ ಜೊತೆಗೂಡುವ ಹೂವು
ದುಂದು ವೆಚ್ಚ  ವಹಿಸುವವರ, ತುರ್ತು ಎಟುಕಿಗೆ ಸಿಗುವ          
ನಮ್ಮ - ನಿಮ್ಮೆಲ್ಲರ ಮನೆ ಮನೆಯ ದಾಸವಾಳ ಹೂವು .......     [೭]

                                                                
                   
                                                                         --ರತ್ನಸುತ

Monday, 8 April 2013

ವಾಸ್ತವ


ಆಳೋ ಪ್ರಭುಗಳೇ ಒಳಗಾಗಿರುವರು ಶಂಕೆಗೆ
ಸನ್ಮಾರ್ಗ ತೋರುವವರೇ ಹಾರಿದರು ಬೆಂಕಿಗೆ
ದೇಶವೇ ತತ್ತರಿಸಿದೆ ಭ್ರಷ್ಟಾಚಾರ ಸೋಂಕಿಗೆ
ಪ್ರತಿಪಕ್ಷಗಳು ಆಂಟಿವೆ ಆರೋಪದ ಕೊಂಕಿಗೆ
ರೈತನೋ ನಿದ್ದೆಗೆಟ್ಟ ಬೇಸಿಗೆ ಬಿಸಿ ಕ್ರಾಂತಿಗೆ
ಆಶ್ರಮಗಳು ದುಬಾರಿ ಬೆಲೆ ನಿಯೋಜಿಸಿದವು ಶಾಂತಿಗೆ
ಗಡಿಯಲ್ಲಿ ಗಡಿಬಿಡಿ ದೇಶ-ಭಾಷೆ ಉಳಿವಿಗೆ
ಗುಡಿಯಲ್ಲಿ ಗೊಡ್ಡು ಪೂಜೆ, ತುಂಬು ಹೊಟ್ಟೆ ಹುಂಡಿಗೆ
ಮನುಜ ಮನ ಹೊಲಸಾಗಿದೆ ಕಾಮನೆಯ ಧೂಳಿಗೆ
ಹೊಸ ರೋಗಗಳ ಸೇರ್ಪಡೆ ಇದ್ದವುಗಳ ಸಾಲಿಗೆ
ನಿತ್ಯ ಪೂಜೆ, ಹೋಮ, ಹವನ ಪಾಪದ ವಿನಾಯ್ತಿಗೆ
ದೇವರೂ ಕಿವುಡನಾದ ಪ್ರಾಮಾಣಿಕ ವಿನಂತಿಗೆ.......

                                            -- ರತ್ನಸುತ

Friday, 15 March 2013

ಗುಳ್ಳೆ ಪಟಾಕಿ (ಮೌನ ಮುರಿದ ಪುಟಾಣಿ ಸದ್ದು)






ಹಾಲ ಬಟ್ಟಲ ತುಂಬು ಅದ್ದಿಗೆ, ಮಿಂದು ಎದ್ದ ಮುದ್ದು ಕೂಸೇ
ಎತ್ತಿ ನಿನ್ನ ಅಪ್ಪಿಕೊಂಡು ಬಿಡದೆ ಹಾಗೆ ಮುದ್ದಾಡುವಾಸೆ
ಕತ್ತಲಲ್ಲಿ ತುಂಬು ಚಂದಿರ, ಬೆಳಕಿಗೆ ನೀ ನೆರಳ ಮಿತ್ರ
ಕಲಾರಾಧಕ ತಪಿಸಿ ಬಿಡಿಸಿದ ವರದ ರೂಪಕ ನಿನ್ನ ಚಿತ್ರ  ।೧।

ಹೆಣೆದ ಸಾಲಿಗೆ ಒಲಿದ ಭಾವನೆ, ನಿನ್ನ ಪುಟ್ಟ ಕಣ್ಣುಗಳ ಕಂಡು
ನಾನೂ ಮಗುವಾಗುವಾಸೆ ನಿನ್ನ ಮೂಖ ಭಾಷೆಯ ಕಲಿತುಕೊಂಡು
ಅತ್ತು ಜಾರಿಸಬೇಡ ಕಂಬನಿ ಮುತ್ತುಗಳು ಮುನಿದಾವು ಪಾಪ
ಮಲಗೋ ಮುನ್ನ ಹಠವ ಮಾಡಿ ತರಿಸು ಜನನಿಗೆ ಕೊಂಚ ಕೋಪ  ।೨।

ಬೇಗ ಬಲಿತು, ಮಾತು ಕಲಿತು, ಕರೆಯೋ ನನ್ನ "ಮಾಮಾ" ಎಂದು
ಖಾಲಿ ಪುಟಗಳು ತೆರೆಯುವುದು ಆಗ ಅಮೃತಾಪದ ರಚಿತಗೊಂಡು
ನಿನ್ನ ಕಾಂತಿ ಹೆಚ್ಚಿಸಲಿ ವಾತಾವರಣದ ಮಂದ ಹೊಳಪ
ಕಿಸೆಯ ತುಂಬಲಿ ನಿನ್ನ ಬಾಳನು ಚಂದಗೊಳಿಸೋ ಹೊನ್ನ ಬಳಪ  ।೩।

ಪುಟ್ಟ ಹೆಜ್ಜೆಯನಿಟ್ಟೆಡೆ ನೀ ಬಿಟ್ಟ ಪಾದ ಗುರುತುಗಳೂ ಕೂಡ
ನಿನ್ನ ಹಿಂದೆಯೇ ಬರುವುದೇನೋ, ಹಿಂಬಾಲಿಸುವಂತೆ ಮೋಡ
ಕೊಟ್ಟ ಆಟಿಕೆ ಕೆಡವಿ ಮತ್ತೆ ಹೊಸ ಬೇಡಿಕೆ ಇಟ್ಟು ನೋಡು
ಮೌನವಹಿಸಿಯೂ ಸ್ಪೂರ್ತಿಯಾಗು ಹೊಮ್ಮಿಸಲು ಅನನ್ಯ ಹಾಡು  ।೪।

ಶಿಳ್ಳೆ ಹಾಕಿ ಚೀರು ಸಿಡಿಸಿ ಮನೆಯ ತುಂಬ ಗುಳ್ಳೆ ಪಟಾಕಿ
ಪ್ರಶಾಂತತೆಯ ನಡುವೆ ಪರಿಚೆಯಿಸು ರಮಿಸುವ ನಗೆ ಚಟಾಕಿ
ಕೊಟ್ಟ ಉತ್ತರ ನನ್ನದು, ಕೂಡಿಟ್ಟ ಪ್ರಶ್ನೆ ನಿನ್ನದು
ನಿನ್ನ ಗೆಲ್ಲಿಸುವ ಸಲುವೇ ಬೇಡಿ ಪಡೆಯುವೆ ಸೋಲಿದು.......... ।೫।


                                                                      -ರತ್ನಸುತ

Tuesday, 19 February 2013

ಹಣೆ ಬರಹ

ಬೆವರ ಹಣೆಯ  ವಿವರಣೆಯ
ಕೇಳಲಿ ಮಸಿಯಾದ  ಬೆರಳು
ನೊಂದಿರುವುದು ಕೇವಲ ಬೆರಳಲ್ಲ
ಸುಮ್ಮನೆ  ಸಹಕರಿಸಿದ ಒಡಲೂ

ಬೆರಳ ಮಸಿ ಅಂಟದೇ ಇರಲಿ
ಬೆವರ ವೊರೆಸುವ ಅವಸರದಲಿ
ಮುಖವು ಹೇಗೆ ಬೇಡವೆನುವುದು
ಮುಂದಾದ ಬೆರಳದು ಸಹಜದಲಿ

ಕಣ್ಣು ಕಂಡಿತು ಬೆರಳ ಮಸಿಯ
ಹೇಗೆ ಕಾಣ್ವುದು ಹಣೆಯ ಬೆವರ?
ಗುರುತನಿಡುವುದು ಬೆರಳ ನೋವಿಗೆ
ಮರೆತೇ ಬಿಡುವುದು ಹಣೆಯ ಹೆಸರ

ಏನು ಧೋರಣೆ ಮನಸಿನದ್ದು
ಕಣ್ಣ ಸಾಕ್ಷಿಗೆ ಮಿಡಿಯುತಿರುವುದು
ನೊಂದ ಗಾಯಕೆ ಮತ್ತೆ ಪೆಟ್ಟು
ಹಣೆಯ ಬರಹವೇ ಇಂಥದ್ದು

ತಿದ್ದಲಾಗದ ಹಣೆಯ ಅಕ್ಷರ
ಹರಿಯಿತು ಬೆರಳ ತುದಿಯಿಂದ ಹಾಳೆಗೆ
ಒಂದು(ಬೆರಳು) ಇದ್ದಂತಿದ್ದು ನೊಂದಿತು
ಮತ್ತೊಂದು(ಹಣೆ) ಬಳಲಿತು ಬದಲಾವಣೆಗೆ.....

                                 --ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...