Friday, 27 July 2012

ಸಂತೆಗುಂಟು ಚಿಂತೆ

Add caption
ಅಲ್ಲಿ ದಣಿದಿತ್ತು ಸಂತೆ
ನಿತ್ಯ ಜನ ಜಂಜಾಟವ ಹೊತ್ತು
ಕೊಳೆತವನ್ನೆಲ್ಲ ಮೂಲೆಯ ಮಡಿಲಲ್ಲಿರಿಸಿ

ಬಂದವರದೆಷ್ಟೋ, ಹೋದವರದೆಷ್ಟೋ,
ಯಾವೊಂದ ಲೆಕ್ಕ ಹಾಕದೆ ಹಾಗೆ ತೆರೆದು
ತನ್ನೊಡಲ ಅಂಗಾಂಗವನು ಧಾರೆಯೆರೆದು
ಲಾಭ ಚೀಲದ ಸ್ಪರ್ಶವಾದಂತೆ ನಕ್ಕು
ರೈತ ಬಂದುಗಳ ನಿಟ್ಟುಸಿರ ಹೊಕ್ಕು

ಸಾಕು ಸಾಕಾದ ಗ್ರಾಹಕರ ಬೀಳ್ಗೊಟ್ಟು
ಮರ ನೆರಳ ತಂಪಲ್ಲಿ ದಣಿವನ್ನು ಸುಟ್ಟು
ಚಿಣ್ಣರಿಗೆ ಉಯ್ಯಾಲೆ, ಜಾರೋಬಂಡಿಯಲಿ-
ಸಿಕ್ಕ ಖುಷಿಯನ್ನು ತನ್ನದೆಂದು ಭಾವಿಸಿ

ಮೋಸಗಾರರ ಮೋಸವನ್ನು ಕಂಡು ಬೇಸೆತ್ತು
ವೃಧರ ಪಾಡಿಗೆ ಕಣ್ಣೀರನಿತ್ತು
ಪೊದೆಗಳ ಸಾಲಲ್ಲಿ ನಿಶಬ್ಧ ಪ್ರಕರಣಗಳ
ಕೇಳಿಯೂ ಕೇಳಿಸದಂತೆ ನಾಚಿ

ಕೆಂಪಾದ ಬಾನಿನಂಗಳ ದೀಪದಲ್ಲಿ
ಇಟ್ಟ ಬೆವರನ್ನು ಕೊನೆ ಬಾರಿ ವೊರೆಸಿ
ತುಂಬಿದ ಜೇಬುಗಳ ಸರದಾರರೊರಟಿಹರು
ಯುದ್ಧ ಮುಗಿದು ಉಳಿದ ರಣರಂಗವನು ಬಿಟ್ಟು
ಸಂತೆಯಾಯಿತು ಮನೆಯ ನಿಸ್ಸಹಾಯಕ ಗೃಹಿಣಿ
ಮಕ್ಕಳ ಕ್ಷೆಮೋಪಚಾರವನು ಮಾಡಿ

ಬೀಳ್ಗೊಟ್ಟಿತಲ್ಲಿ ಜನ - ಜಾನುವಾರುಗಳ
ಮತ್ತೊಂದು ವಾರದ ಸರದಿಗೆ ಕಾದು
ಮಲಗುವಂತೆ ಮಾಡಿ ತೂಕಡಿಸಿ ಎದ್ದಿತು
ಸಂತೆ ಅಂಗಳಕೆ ಮತ್ತೊಂದು ರಂಗೆದ್ದಿತು.........

                              -- ರತ್ನಸುತ 

Thursday, 26 July 2012

ಜೋಡಿ ಪದ

ಕದ್ದು ಮುಚ್ಚಿ ಸಂದೇಶವ ಎಷ್ಟು ಬಾರಿ ಕಳಿಸುವೆ?
ಮನ ಬಿಚ್ಚಿ ಎಲ್ಲ ಹಾಗೆ ಹೇಳಿ ಬಿಡಬಾರದೇ?
ಮುಚ್ಚು ಮರೆಯ ಸಂದೇಶ ನೀ ಮೆಚ್ಚುವ ಹುಡುಗನ
ತಲುಪೋ ಮುನ್ನ ಕಳೆಯಬಹುದು, ಅವನ ಮನವ ಸೇರದೆ...

ಎಷ್ಟೆಂದು ಕಟ್ಟಿ ಹಾಕುವೆ ಪದ ಮಾಲೆಯಲ್ಲಿ
ಒಂದೊಂದೇ ನುಲಿಯುತ ಬರೆದ ಅಕ್ಷರಗಳ
ಪತ್ರವೂ ಬೇಸೆತ್ತಿದೆ ನಿನ್ನ ಅಂಜಿಕೆ ಕಂಡು
ಬಾಯೊಂದಿದ್ದಿದ್ದರೆ ತನಗೆ, ನಿನ್ನ ಪಯಣ ಸರಳ!!

ನಡುದಾರಿಯ ನಡುರಾತ್ರಿಯ ಬೆಳದಿಂಗಳ ಹೊತ್ತಲಿ
ರವಾನಿಸಿದ ಸಂದೇಶ ಮತ್ತೊಂದ ಕಂಡು ಬಿರಿಯಿತು
ತನ್ನೊಡಲ ಹೃದಯ ಪದವ ಕಿತ್ತದರೆಡೆ ಇಟ್ಟು
ತನಗಿಷ್ಟವಾದ ಒಂದು ಪದದ ಬಯಕೆ ಹೆಚ್ಚಿತು


ದಿನಗಳುರುಳಿ ಕಳೆಯಿತಲ್ಲಿ ಪದ ಹಂಚುವ ದೆಸೆಯಲಿ
ಮಳೆಗೆ ನೆನೆದು ಮುದ್ದೆ ಕಟ್ಟಿ, ಒಣಗಿ ಹಾಗೆ ಬಿಸಿಲಲಿ
ಅಲ್ಲೊಂದು ರಸಗಳಿಗೆ ಸಂದೇಶಕೆ ಕಾದಿತ್ತು
ಪರ-ಸಂದೇಶ ತನ್ನದೆಂದದಕೆ ತಿಳಿಯಿತು


ಒಬ್ಬೊಬ್ಬರ ಗುಟ್ಟೊಬ್ಬರಿಗೆ ಮತ್ತೆರಿಸೋ ಪಾಣಕ 
ಇಷ್ಟರಲ್ಲೇ ಮುಗಿಯಲಿಲ್ಲ ಅವರ ಜನ್ಮ ಕಾಯಕ
ಕಾದಿದ್ದವು ಪಾಪ ನಿರೀಕ್ಷೆಯ ಹೊತ್ತ ಜೀವಗಳು
ನಡುವೆ ಸಂದೇಶಗಳ ಪ್ರಣಯ ಪ್ರತಿರೋದಕ

ಅಂತೂ ಪ್ರೇಮಿಗಳ ಸೇರಿಸಲು ಅವು ದೂರಾದವು
ಸೇರಬೇಕಾದ ತಮ್ತಮ್ಮ ಅಂಚೆಲಿಳಿದವು
ಓದುವವರು ಮುಗಿಸುವನಕ ಪತ್ರಕಲ್ಲಿ ಪರೀಕ್ಷೆ 
ಆನಂತರಕದಕೆ ತುಂಬು ಪ್ರೀತಿ ಮಡಿಲ ಸುರಕ್ಷೆ


ಹಂಚಿಕೊಂಡ ಪದಗಳು, ಇವನಿಗವಳ - ಅವಳಿಗಿವನ
ಪರಿಚಯ ಹೆಚ್ಚಿಸಿ ಪ್ರೇಮಾಂಕುರವಾಯಿತು
ಆಕೆ ಮಾತ್ರ ಬರೆದುದ್ದಲ್ಲ, ಈತನೂ ಬರೆದದೆಷ್ಟು ಬಾರಿಯೋ
ಅಂತು ಕಾಲ ಗೆದ್ದಿತು!!!


ತ್ಯಾಗವಾದ ಒಂದು ಪ್ರೀತಿ, ಲಾಂಛನ ಮತ್ತೊಂದಕೆ
ಪರಿಚಯ ಹೆಚ್ಚಾದಂತೆ ದೂರ ಸರಿದ ಹೆದರಿಕೆ
ಒಂದಾದ ಜೀವಗಳಲಿ ಎರಡು ಮನಕೆ ಒಂದೇ ಕದ
ಹೊಸ ಅಲೆಗೆ ಸ್ಪೂರ್ತಿಯಾಯ್ತು ದೂರಾದ ಜೋಡಿ ಪದ..............




                                                    --ರತ್ನಸುತ







Saturday, 14 July 2012

ನೀನಿರಲು ಜೊತೆಯಲ್ಲಿ




ನಿನ್ನ ಸುತ್ತಿ ಬಂದ ನನಗೆ, ಲೋಕವೊಂದ ಸುತ್ತಿದಂತೆ
ಅಧ್ಭುತಗಳ ಎಕೀಕರಣವೇ ನಿನ್ನ ಸೃಷ್ಟಿ
ನಿನ್ನ ಮಾತ ಕೆಳಿದೆನಗೆ, ಭಾವ ಪ್ರವಚನೆ ಆದಂತೆ
ರಾಗ ರಸಗಂಗೆಯಲ್ಲಿ ಮೌನಕೆ ವಿಮುಕ್ತಿ

ನಿನ್ನ ಸಾವಿರದ ಸಾವಿರ ಹೆಜ್ಜೆ ಗುರುತುಗಳಿಗೆ
ನನ್ನ ಹಿಂಬಾಲಿಕೆಯಲ್ಲೊಂದು ಮಂದ ಬೆಳಕು
ನಿನ್ನ ಕಣ್ಣೋಟ ದಾಟಿ ಮೀರಿ ನಡೆದ ಹುಡುಕಾಟಕೆ
ಸಿಕ್ಕ ಪ್ರತಿಕ್ರಿಯೆಯ ಅಂಚಿನಲ್ಲೊಂದು ತೊಳಕು

ನಿನ್ನ ಮುನಿಸಿನಲ್ಲಿ ಬೆಂದ ನನ್ನಂತರಂಗ ವೃಂದಕೆ
ನೀನತ್ತಾರೆ ಕಂಬನಿಗೆ ಕೈ ಚಾಚುವ ತವಕ
ನೀ ಹಿಡಿದ ಕಿರು ಬೆರಳು ದಾರಿ ತೋರೋ ಗುರುವಾಗಿದೆ
ನೀನೇ ಮುನ್ನಡೆಸು ನನ್ನ ಗುರಿ ಸೇರುವ ತನಕ

ನೀ ತಾರದಿರುವ ಆ ಅಧ್ವಿತೀಯ ಉಡುಗೊರೆಯ 
ನೆನೆದೇ ಮಘ್ನನಾಗಬೇಕಿರುವ ಹಂಬಲ
ಎಡವಿಕೊಂಡ ಕಾಲ್ಬೆರಳಿಗೆ ಸಿಕ್ಕ ಗಾಯ ಗುರುತೆಷ್ಟೋ
ನಿನ್ನತ್ತ ಎಡವಿದಾಗ ಸಿಗದ ನೋವೆ ಚೊಚ್ಚಲ

ನೀ ನಡೆದೇ ಮೆಲ್ಲ ನನ್ನ ಮನಸಿನ ಮಧುಮಂಚಕೆ
ಸಿಂಗಾರ ಮಾಡಿಕೊಂಡು, ಶೃಂಗಾರವ ಅಪೇಕ್ಷಿಸಿ
ನೀ ಬಂದ ಮೇಲೆ ಎಲ್ಲ ಸಾಧಾರಣವೆನಿಸಿತು
ಎಲ್ಲಿ ಹೋಲಬಹುದು ಕಲ್ಪನೆಯ ಮೀರಿ ಮೆಚ್ಚಿಸಿ

ನೀ ಗುರುತಾದೆ ನನಗೆ, ನೀ ತೋರದೆ ಅಡಗಿಸಿಟ್ಟ-
- ಭಾವಗಳ ಬಂಡಾರಕೆ ನಾ ಆಳೊ ದೊರೆಯಾದೆ
ಸಿರಿವಂತಿಕೆ ಆಗಮಿಸಿ, ದಾರಿಧ್ರ್ಯ ನಿರ್ಗಮಿಸಿ
ನಿನ್ನಿಂದ ಬೆಳಗುವ ಜ್ಯೋತಿಗೂ ಸ್ಫೂರ್ತಿ ಸಿಕ್ಕಿದೆ.....

                                        --ರತ್ನಸುತ



Sunday, 8 July 2012

ಲಕ್ಕಿ



ಹಾಲ ಬಟ್ಟಲಿಂದ ನಿನ್ನ ಅದ್ದಿ ತಗೆದರೇನು?
ನೋಡು ಇನ್ನು ಅಂಟಿದೆ ನಿನ್ನ ಕೆನ್ನೆ ಮೇಲೆ ಕೆನೆ
ಆಹಾ ಅದೆಷ್ಟು ಚುರುಕು ನಿನ್ನ ಕಣ್ಣೋಟ
ಕೃಷ್ಣೆಯಂತೆ ಮುದ್ದು ನೀನು, ಗೋಕುಲ ನಿನ್ನ ಮನೆ
ದೃಷ್ಟಿ ತಾಕದಿರಲು ಇಟ್ಟ ಬೋಟ್ಟಿಗೂ ದೃಷ್ಟಿ ತಾಕಿ
ಜ್ಯೋತಿ ಆಕಾರದಲ್ಲಿ ಹೊಳೆಯುತಿದೆ ಹಣೆ
ಬೆಳ್ಮುಗಿಲು ಕರಗುವಾಗ ತಾಳುವ ಬಣ್ಣದ ಕೇಶ
ಬಳ್ಳ ಮೀರಿ ತುಂಬಿದಂತೆ ಕಪ್ಪು ರಾಗಿ ತೆನೆ
ಪುಟ್ಟ ತುಟಿಗಳಿಂದ ಹೋರಡಲೆಂದು ಕಾದ ಮುತ್ತುಗಳು
ನಕ್ಕಾಗ ಸುರಿಯುತಾವೆ ನೋಡು ಸುಮ್ಮನೆ
ಬಿಕ್ಕಿ ಬಿಕ್ಕಿ ಅಳುವಾಗ ಕೆಂಪಾದ ಮಲ್ಲೆ ಮೂಗು
ಅರಳಿದ ಹೂವ ಹೊತ್ತ ಕನಕಾಂಬರ ಗೊನೆ.......

                                     --ರತ್ನಸುತ

Friday, 29 June 2012

I love u ಅಮ್ಮ


ಅಕ್ಷರದ ಮೊದಲ ಅಕ್ಷರವೂ "ಅ"ಕಾರವೇ
ಜೀವನದ ಮೊದಲ ಅಕ್ಷರವೂ "ಅ"ಕಾರವೇ
ಕೂಗಿನ ಕೊರಳ ಕೊನೆಗೆ ಮಮಕಾರದ "ಮ"ಕಾರ
ಜೀವನದ ಕನೆ ಅಕ್ಷರ, ಮರಣದಲ್ಲೂ "ಮ"ಕಾರವೇ

ಅಮ್ಮ ಎಂಬ ಎರಡು ಅಕ್ಷರವೇ ಜೀವನ
ಆರಂಭದಿಂದ ಅಂತ್ಯವರೆಗೆ ಎಂಬುದದರರ್ಥ
ಕರೆಸುಕೊಂಡು ಆಕೆ ಎಷ್ಟು ಹಿಗ್ಗುವಳೋ ನಾ ಕಾಣೆ
ಕೂಗಿಕೊಂಡ ಕೊರಳ ಪ್ರಯತ್ನಕಿಲ್ಲ ವ್ಯರ್ಥ 

ಶೀತ ಗಾಳಿ ಸೋಕದಂತೆ ಹಬ್ಬಿ ನಿಂತ ಪರ್ವತ 
ಆಕೆಯ ಮಡಿಲಲ್ಲಿ ನಾ ಕಂಡದ್ದು ಸರ್ವತಾ
ಮೇಲ್ನೋಟಕೆ ಆಕೆಯ ತುಟಿ ಅರಳಿ ನಮ್ಮ ನಗಿಸಿತು 
ಎದೆಯಾಳದಲ್ಲಿ ಸಹಿಸಿರುವಳು ಚಂಡಮಾರುತ

ಪ್ರೀತಿಯ ಕೈತುತ್ತೆ ಎಲ್ಲ ಖಾಯಿಲೆಗೆ ಔಷದಿ
ಸೋಲುತ್ತಲೇ ಗೆಲ್ಲುವಳು ಬಾಳಿನೆಲ್ಲ ಆಟದಿ 
ಕಂಡ ಕನಸ ಮುಗಿಲುಗಳಿಗೆ ಆಕೆ ಹಿಡಿದ ಅಂಬರ
ಬೆಳಕಿಲ್ಲದ ಮನೆಯಲ್ಲೂ ಅವಳಿದ್ದರೆ ಸುಂದರ

ಒಮ್ಮೆಮ್ಮೆ ದೂರಾಗಲು ಕಣ್ಣೀರಲಿ ಕಾಣ್ವಳು
ಎಚ್ಚೆತ್ತುಕೊಂಡೆ ಕೂಗಿ ಕನಸಿನಲ್ಲಿ ಬೀಳಲು
ಒಂದು ಮಾತನಾಡಿದರೆ ಸತ್ತ ಬಲಕು ಬೆಂಬಲ
ಅವಳ ಹಾದು ಗೆಲುವು ಕಾಣುವುದೇ ಮನದ ಹಂಬಲ

ಬೆನ್ನ ಹಿಂದೆ ನೆರಳು ಆಕೆ ಬೆನ್ನ ತಿಕ್ಕಿ ತೊಳೆಯುವಾಕೆ
ಎಲ್ಲ ಹಂಚಿಕೊಳ್ಳಬಹುದಾದ ಬಾಳ ಸಂಗಾತಿ
ಎಷ್ಟು ಜನ್ಮ ಪಡೆದು ಅವಳ ಋಣವ ತೀರಿಸೋಕೆ ಸಾಧ್ಯ
ಮನದ ಮನೆಯ ಗರ್ಭಗುಡಿಗೆ ಅವಳೆ ಧೈವ ಮೂರುತಿ........

                                                          -- ರತ್ನಸುತ 

Saturday, 16 June 2012

ಭಾವವೇಣಿ


ಆ ಕಣ್ಣಿಗೆ ಸೋತ ಬಗೆಯ ಹೇಗೆಂದು ಬಣ್ಣಿಸಲಿ
ವಿಸ್ಮಯತೆಯ ಉತ್ತುಂಗವ ಮುಟ್ಟಿ ಬಂದೆ ಅಂದು
ಎಲ್ಲವ ಮರೆತಂತಾಗಿದೆ ಹಾಗೆ ಕಣ್ಣು ಮುಚ್ಚಲಿ
ನೂರು ಭಾವಗಳನು ಮೀರಿ ಮಿನುಗಿತೊಂದು ಬಿಂದು

ನುಡಿಗಳ ಗಮನಿಸುತ್ತ ಗಮಕಗಳ ಕಲಿತುಕೊಂಡೆ
ರೆಪ್ಪೆ ಬಡಿತಕ್ಕೆ ಮೂಡಿತೆನಗೆ ತಾಳದರಿವು
ಹುಡುಕಾಡಿದ ನೋಟ ಹಿಡಿದು ಸ್ವರಗಳ ಪರಿಚಯವಾಗಿ 
ಹೊಮ್ಮಿ ಬಂದ ಹೊಸ ಹಾಡಿಗೆ ಸಿಕ್ಕಾಯಿತು ತಿರುವು 

ಆ ಸ್ಪೋಟಕ ನೋಟ ಬಾಣ ಒಂದರ-ಹಿಂದೊಂದರಂತೆ
ಮನಸೊಳಗೆ ನಾಟಿ ಶರಪಂಜರ ಗಿಳಿ ನಾನಾದೆ
ಸಿಕ್ಕಿ ಬಿದ್ದ ನನ್ನ ಕಡೆಗೆ ಮತ್ತೆ ಆಕೆ ತಿರುಗದಿರಲು
ನೀರಿನಿಂದ ಹೊರ ತೆಗೆದ ಒದ್ದಾಡಿದ ಮೀನಾದೆ 

ಆಕಾಶದ ನೀಲಿ ಅವಳ ಕಣ್ಣುಗಳ ಹೋಲುತಿತ್ತು 
ನಡುವೆ ಅಡ್ಡಿ ಪಡಿಸಿದ ಮುಂಗುರುಳೆ ಕರಿ ಮೋಡ
ಚಾಚಿದಷ್ಟೂ ಬಾಚಬಹುದಾದ ಆ ಮುದ್ದು ಮುಖ
ಜಾಗವಿರದೆ ಉಕ್ಕಿ ಬರುತಿತ್ತು ನಗೆ ಕೂಡ

ಹಂಸ ನಡೆಯ ಕಾಣದವಗೆ ಹಿಂಸೆಯಾಯಿತವಳ ನಡೆ
ಭಾವುಕ ಕವಿಗಳಿಗೆ ಆಕೆ ಪದಗಳ ಮಳೆಗಾಲ 
ಜೀವಂತಿಕೆ ಪಡೆದುಕೊಂಡ ಶಿಲೆಗಳೂ ನಾಚುತಾವೆ
ಶಿಲೆಗಲಾಗೆ ಉಳಿಯೆ ಇಚ್ಚಿಸುತ್ತ ಛಿರಕಾಲ

ಪಶ್ಚಿಮ ಪರ್ವತದ ಹಿಂದೆ ಅವೆತು ಮಾಯವಾದ ರವಿ
ಬೆಳದಿಂಗಳ ಹೆಣ್ಣ ರೂಪ ಧರಿಸೆ ಆಜ್ಞೆ ಮಾಡಿದ
ವ್ಯಾಕರ್ಣಕೆ ಇದ್ದ ಸೋತ್ತೆಲ್ಲ ಖಾಲಿಯಾದರು
ಬಣ್ಣಿಸುವ ಕಾವ್ಯ ಸಿರಿಯ ನನಗೆ ಮಾತ್ರ ನೀಡಿದ......

                                                  --ರತ್ನಸುತ 

Saturday, 2 June 2012

ಪದಾನುಭವ

ಒಬ್ಬರ ಬಲಹೀನತೆ, ಮತ್ತೊಬ್ಬರಿಗೆ ಅಸ್ತ್ರ
ಒಬ್ಬನಿಗೆ ಶತ್ರು ಒಬ್ಬ, ಮತ್ತೊಬ್ಬನ ಮಿತ್ರ
ಒಬ್ಬನ ಮುರುಕಲು ಗುಡಿಸಲು,ಮತ್ತೊಬ್ಬನ ಛತ್ರ
ಅವನಿಗಿರದ ಪ್ರಶ್ನೆಗಳಿಗೆ, ಇವನಲ್ಲಿದೆ ಉತ್ರ
 
ಆಕಾರಕೆ ಬೆಲೆ ಕೊಟ್ಟವ ವಿಕಾರಿಯಾಗುವನು
ಅತಿಯಾಗಿ ಬಯಸುವವನೆ ಬಿಕಾರಿಯಾಗುವನು
ಇಟ್ಟ ಗುರಿಯ ಬೆನ್ನು ಹಟ್ಟುವವನೆ ಶಿಖಾರಿಯಾಗುವನು
ಭಾವನೆಗಳ ಲೆಕ್ಕಿಸುವವ ಸಂಸಾರಿಯಾಗುವನು
 
ಎಣಿಕೆಗೆ ಸಿಗುವ ಮೆಟ್ಟಿಲು ಎಳಿಗೆಗಾಗಲ್ಲ
ಮಾತಿನಲ್ಲೇ ಮುಗಿವ ಸ್ನೇಹ ಜೀವನಕಾಗಲ್ಲ
ಹೊಟ್ಟೆಗಾಗೆ ಉಣಿಸೋ ಹಾಲು ಎದೆಗೆ ಮೀಸಲಲ್ಲ
ಕಣ್ಣೀರನು ಒರೆಸಲಿಕ್ಕೆ ಕೈಗಳು ಬೇಕಿಲ್ಲ
 
ಮಿತವಾದ ಸಿಹಿಯ ಹೊತ್ತ ಮಿಟಾಯಿಗಿಲ್ಲ ಹೆಸರು
ನೀರು ಕೂಡ ಹಾದಿ ತಪ್ಪಿ ಆಗಬಹುದು ಕೆಸರು
ನಂಬಿದವನ ನಂಬಿಕೆಗಳೇ ನಾಳೆ ತೋರೋ ಉಸಿರು
ಬೇರು ಗಟ್ಟಿ ಊರಿದಾಗ ನಿಟ್ಟುಸಿರಿನ ತಳಿರು
 
ಬೆದರು ಬೊಂಬೆ ಕೂಡ ಬೆದರಿಸೋಕೆ ಜೀವ ತಾಳಿದೆ
ಸ್ತಬ್ಧ ಚಿತ್ರವಾದರೂನು ಹೊಸ ಕಣ್ಣ ಸೆಳೆದಿದೆ
ಹಳೆ ದಾರಿ ಅದೇ ತೀರ ತಲುಪಿಸುವುದಲ್ಲದೆ
ತಿರುವು ನೀಡಿದಾಗ ಹೊಸತು ಆಶ್ಚರ್ಯವ ನೀಡದೆ??
 
ಬಳಕೆಯಿಂದ ಕರಗಿ ಹೋದ ಬಳಪ ಧನ್ಯವಾಯಿತು
ತಿದ್ದಿ ತಿದ್ದಿ ಬರೆದ ಅಕ್ಷರವೇ ಅನ್ನವಾಯಿತು
ಆಕಳಿಕೆಯ ಗಾಳಿ ಅಮ್ಮನನ್ನು ನೆನಪು ಮಾಡಿತು
ಜೊತೆಗಿರುವ ಉಸಿರೇ ಅಮ್ಮನೆನಲು ಸುಮ್ಮನಾಯಿತು
 
ಹಾಲಿರದ ಗೆಜ್ಜಲನ್ನ ಗುದ್ದಿ, ಗುದ್ದಿ ತೆಗೆದರೆ
ಹಸಿದ ಕಾರುವ ಹಸಿವು ಕೊಂಚವಾದರೂ ನೀಗದೆ?
ಎಲ್ಲ ಮುಗಿಯಿತೆಂದುಕೊಂಡ ಮೇಲೂ ಹರಿವ ಮನಸಿಗೆ
ಹೀಗೆರಡು ಪದವ ಗೀಚಿಕೊಳಲು ಧಿಕ್ಕು ದೊರೆತಿದೆ.....
 
 
                                                      -- ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...