Saturday, 1 January 2022

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನೀನು ಬೆಲ್ಲದಲ್ಲಿ ಬಚ್ಚಿಟ್ಟ ಸಿಹಿ ಗುಟ್ಟು
ಪ್ರೀತಿ ಸೇತುವೆ ನಮ್ಮ ನಡುವೆ ಕಟ್ಟಿ ಕೊಟ್ಟು
ಬೆರೆತು ಹೋದೆವು ಬಾಳಲ್ಲಿ ಇಷ್ಟ ಪಟ್ಟು

ಚೂರು ಬಿಸಿ ತಟ್ಟಿದಾಗ ನೀ ತುಪ್ಪವಾದೆ   
ನಾ ಜಾರಲೆಂದೇ ಕಾದ ಬೆಂದ ರೊಟ್ಟಿಯಾದೆ 
ಬಿಟ್ಟು ಕೊಟ್ಟಲ್ಲೆಲ್ಲ ನೀ ನನ್ನ ತುಂಬಿಕೊಂಡೆ 
ಕಿತ್ತೂ ಬೇರೆ ಆಗಲಾರೆವಂತೆ ಇನ್ನು ಮುಂದೆ  

ನೀನು ಗಟ್ಟಿಗಿತ್ತಿ, ನನ್ನ ಕಾಡಿ ಕೊಲ್ಲುವಾಕೆ  
ಪಾಕವಾಗಿ ನೋಡು ಒಮ್ಮೆ ನನ್ನ ತಬ್ಬಲಿಕ್ಕೆ 
ನೀ ರೂಪಿಸೋ ಹಾಗೆ ನಾ ರೂಪಗೊಂಡೆ 
ನಾ ಬಿದ್ದರೆ ನಿನ್ನದಲ್ಲ, ದೋಷ ನಂದೇ

ಖಾರವಾಗುತಿದ್ದೆ ಹಿಡಿಯದೇ ನೀ ನನ್ನ ಕೈಯ್ಯ 
ಹೊತ್ತ ಮೂಟೆಯಂತೆ ಭಾರವಾಗಿ ಪುಟ್ಟ ಹೃದಯ 
ಹೂರಣಕ್ಕೆ ನಾ ಕಾವಲಾದೆ ಕಡುಬಿನಲ್ಲಿ 
ಹಬ್ಬವಾಗಿ ನೆಲೆಸುವ ಕಣ್ಮನಸಿನಲ್ಲಿ 

ಇರುವೆ ಸಾಲಿಗೆ ನಾ ಗೆರೆಯ ಎಳೆದು ಬರುವೆ 
ನೀ ಇರುವಲ್ಲಿ ಚಿಲ್ಲಿ ರಂಗೋಲಿ ಬರೆವೆ 
ಅಚ್ಚು ಕಟ್ಟು ನೀ ನಾಚಿದಾಗ ಮುದ್ದೆ ಬೆಲ್ಲ 
ನಾ ಪಡೆವ ಹೆಸರು ನಿನ್ನದು, ನನ್ನದಲ್ಲ 

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಎತ್ತ ನೋಡಿದರೂ ಬಣ್ಣಗಳು
ದುಬಾರಿ ಬೆಲೆಯ ಥಾನುಗಳೊಂದೆಡೆ 
ಅಗ್ಗದ ಬ್ಲೌಸ್ ಪೀಸುಗಳು

ಕೊಳ್ಳುವವರಲ್ಲಿ ಎರಡು ವಿಧ
ತೊಡಲು -
ಮುಟ್ಟಿ, ಸವರಿ, ಅಳೆದು
ಮ್ಯಾಂಚಿಂಗ್ ಮಾಡುವವರದು ಒಂದು ವಿಧ
ಕೊಡಲು - 
ಯಾವುದಾದರೆ ಏನು?
ಕಡಿಮೆ ಬೆಲೆಗೆ ಗಿಟ್ಟಲು ಅದುವೇ
ಸಾಕೆನ್ನುವವರದು ಇನ್ನೊಂದು ವಿಧ

ಪ್ಲಾಸ್ಟಿಕ್ ಚೀಲದ ಒಳಗೆ
ಉಸಿರುಗಟ್ಟಿದ ಬಣ್ಣದ ತುಂಡು
ನಾನಾ ಕೈ ಬದಲಾದರೂ ಈ ತನ
ಈಚೆ ತೆಗೆದವರಿಲ್ಲ ಯಾರೂ

ನೀರಲಿ ಅದ್ದಲು ಬಣ್ಣ ಬಿಡುವುದೇ?
ಒಗೆಯುವ ಹಂತಕೆ ಹೋದವರಾರು?
ಸತ್ಯವ ಅರಿತ ಅಂಗಡಿಯವ
ಇಳಿಸಿದ ಗುಣಮಟ್ಟವ ಇನ್ನೂ ಚೂರು..

ಅಟ್ಟದ ಮೇಲೆಲ್ಲೋ ಎತ್ತಿಟ್ಟು
ಅಪ್ಪಟ ಹಬ್ಬಕೆ ಬಿಚ್ಚಿದ ಕಟ್ಟು
ಅಗ್ಗದ ತುಂಡನು‌ ದಾನದಲಿಟ್ಟು
ಕೊಡುವರು ಉದಾರ ಮನಸನು ಹೊತ್ತು

ಕೊಂಡವರೇನೂ ಸಾಚಾಗಳಲ್ಲ
ಸತ್ಯವ ಅರಿಯದ ಮೂರ್ಖರು ಅಲ್ಲ
ಕೊಡುವವರಿಗೆ ಕೊಡಬೇಕೆಂಬುದಿಲ್ಲ
ಪಡೆದವಗೆ ಪಡೆಯದೆ ನಷ್ಟವಿಲ್ಲ

ಹೀಗಿದ್ದು ಮನೆ ಮನೆಗಳ ದಾಟಿ
ಅಲೆಯುವ ಪಾಪದ ಚೀಲಗಳು
ಯಾರೇ ಕೊಟ್ಟರೂ ಬೇಡ ಅನ್ನದೆ
ಚುಕ್ತಾ ಆಗುವ ಲೆಕ್ಕಗಳು

ಇಷ್ಟಿದ್ದರೂ ಕೊಡದವರೆಡೆ ಏಕೋ 
ನಿಷ್ಠುರ ಮಾಡುವ ಹೆಂಗಸರು
ಹಣದುಬ್ಬರದ ನಡುವೆ 
ನಾಟಕದಲ್ಲಿ ಭಾಗಿ ಗಂಡಸರು...

ಕತ್ತಲಲ್ಲಿ ಕಾಳಗ

ಕತ್ತಲಲ್ಲಿ ಕಾಳಗ 

ಜೊತೆಗೆ ದಟ್ಟ ಮೋಡ ಕೂಡಿ ಜೋರು ಮಳೆ 
ಇತ್ತ ಇವನಲ್ಲಿ ಆಕ್ರೋಶದ ಮೊರೆತ 
ಅತ್ತ ಅವಳಲ್ಲಿ  ಭಾವಾಂಕುರ 
ಮತ್ತು ಮಳೆಗೆ ಭುವಿಯತ್ತ ಪ್ರತಿಕಾರದ ಗುರಿ 

ಉರಿ ಚಿತೆಗೆ ಆರುವ ಭಯ 
ಶವಕ್ಕೆ ಕತೆ ಹೇಳುವ ತವಕ 
ಎಲ್ಲಕ್ಕೂ ಮಳೆಯೇ ಸಾಕ್ಷಿ 
ಆತ್ಮಸಾಕ್ಷಿಗೆ ಬೆಳಕಿಲ್ಲ 

ಶುರುವಾತು, ಮಧ್ಯಂತರ ಹುಡುಕುವಲ್ಲಿಗೆ 
ಎಲ್ಲವೂ ನೇಪಥ್ಯಕ್ಕೆ ಸರಿದು ಮುಕ್ತಾಯ
ಸುಪ್ತವಾದವು ಮತ್ತೆ ಪುಟಿದೆದ್ದು 
ರಕ್ತ ಹರಿಸಬಹುದು 
ಮುಕ್ತಿ ಸಿಗುವನಕ ಮುಂದುವರಿಯಬಹುದು  
ಭೀಭತ್ಸ ಸಮರ.... 

ಕಾಳ ರಾತ್ರಿಯೇ
ಕರಾಳ ರಾತ್ರಿಯೇ
ಕ್ರೂರ ರಾತ್ರಿಯೇ
ಕವಿದ ರಾತ್ರಿಯೇ

(ಬಂಜರು)
ಮಾತಾಡಿಸು ತೇಲಾಡೋ ಮುಗಿಲೇ 
ನನಗೂ ಅಪಾರ ದಣಿವಿದೆ
ವಿರಹದಿ ಪರಿತಪಿಸಿರುವೆ
ಪರಿಹರಿಸಲು ನಿನ್ನ ಕೂಗಿದೆ

ಇಲ್ಲೊಂದು ಸುಡುಗಾಡಿನ ಚಿತೆ 
ಅರೆ ಬೆಂದ ಶವ ಹೇಳಿದ ಕತೆ 
ಮಳೆ ಇನ್ನೂ ಜೋರಾಗಬೇಕಿದೆ.. 

ಬಾರೋ ಮಳೆರಾಯ
ನೋಡು ಬೆಂಕಿಯ ಕಣ್ಣಲಿ ಭಯ
ಬಾರೋ ಮಹರಾಯ, ಮಳೆರಾಯ

ನಿನ್ನ ನುಡಿಯೆನ್ನುವ ಸಣ್ಣ ಕಿಡಿ ಸೋಕಿಸಿ

ನಿನ್ನ ನುಡಿಯೆನ್ನುವ ಸಣ್ಣ ಕಿಡಿ ಸೋಕಿಸಿ 

ಹೊತ್ತಿಸು ನನ್ನನು ಸುಟ್ಟು ಕವಿಯಾಗುವೆ 

ಕಣ್ಣ ಕಾರಂಜಿಯು ಚಿಮ್ಮಿಸಿದೆ ಪ್ರೀತಿಯ 
ನೋಡುತ ಕಣ್ಣನೇ ಕೂತು ಕವಿಯಾಗುವೆ 

ನೋಡು ಮುನಿಸಲ್ಲೂ ಮುದ್ದಾದ ಮೊಗ ನಿನ್ನದು  
ಕನ್ನಡಿಯಂತೆ ಚೂರಾಗಿ ಕವಿಯಾಗುವೆ 

ನಕ್ಕರೆ ಕಬ್ಬಿನ ಹಾಲು ಹೊನಲಾಯಿತು 
ಜಾರಿದ ಗುಂಡಿಗೆ ಹೊತ್ತು ಕವಿಯಾಗುವೆ 

ದಾಳಿಗೊಳಗಾದ ಗುಡಿಯಲ್ಲಿ ಶಿಲೆಯಾಗುವೆ 
ನೀಡು ನೀ ದರುಶನ ಕರಗಿ ಕವಿಯಾಗುವೆ 

ಸಂಜೆ ಏಕಾಂತಕೆ ಸಿಕ್ಕ ಪರಿಹಾರವೇ 
ಸೇದುತಾ ನೆನಪನು ಗೀಚಿ ಕವಿಯಾಗುವೆ 

ನನ್ನ ಮನದನ್ನೆಯೇ ಏಕೆ ಈ ಅಂತರ  
ಮುತ್ತಿಗೆ ಸಿಕ್ಕರೆ ಇಟ್ಟು ಕವಿಯಾಗುವೆ 

ತೊಟ್ಟು ಮಧುವಲ್ಲಿಯೇ ನೀಗಿಸು ತೃಷೆಯನು
ನಶೆ ಏರಿಳಿತ ಬೇಕಾಗಿ ಕವಿಯಾಗುವೆ.. 

Saturday, 25 December 2021

ಅದಲು ಬದಲಾಗಿ

ಅದಲು ಬದಲಾಗಿ

ಹೃದಯ ಕುಳಿತಂತೆ ಮಾತಿಗೆ
ಎದುರು ಬದುರಾಗಿ
ಮಧುರ ಮಳೆಯಾಗೋ ವೇಳೆಗೆ
ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಈ ದಾರಿ ಸವಾರಿ ಖುಷಿಗೆ ರೂವಾರಿ 
ವಿರಾಮ ಸಿಗೋ ವೇಳೆ ನೆನಪಲ್ಲೇ ಜಾರಿ 
ಸಿಗೋಣ, ಸಿಗೋಣ ಪ್ರತಿ ಬಾರಿ ತಂಗಾಳಿಯೇ 
ಸಮೀಪ ಬರೋದೇ ವಿಶೇಷ ವಿಚಾರ
ಸರಾಗ ಸಮಾಚಾರವೇ ಅಲ್ಲಿ ಪೂರ
ನಿಧಾನ, ನಿಧಾನ ನೀ ಓಡು ಓ ಗಡಿಯಾರವೇ

ಇರಾದೆ ಒಂದೇ ಇಬ್ಬರಲ್ಲಿಯೂ
 
ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಸುಮಾರಾಗಿ ಕಾಡೋ ಜ್ವರ  ಒಂದು ಹೀಗೆ 
ಜೊತೆ ಹಂಚಿಕೊಂಡಂತೆ ಸರಿ ಹೋದೆ ಹೇಗೆ 
ಗಾಲಾಟೆ, ಗಲಾಟೆ ನೀ ಉಗುರಷ್ಟು  ದೂರಾದರೂ
ಹೊಸ ದಿಕ್ಕು ತೋರಿ, ಇದೋ ಕಂಡ ದಾರಿ 
ಇಡೀ ಲೋಕವ ಸುತ್ತುವೆ ನಿನ್ನ ಸೇರಿ 
ನಿರಾಸೆ, ನಿರಾಸೆ ನೀ ಕನಸಲ್ಲಿ ಬರದಿದ್ದರೂ

ತಗಾದೆ ಒಂದೇ ಇಬ್ಬರಲ್ಲಿಯೂ

ಕಣ್ಣಂಚಲಿ ಮೂಡುವ
ಮಿಂಚಲ್ಲಿಯೇ ಎಲ್ಲವ 
ನೀ ಹೇಳುವೆ, ನಾ ತಾಳುವ
ಮನದಾಸೆಯ.. ಆಆ..
ಹೇಗಾಯಿತು, ಹೇಗಾಯಿತು
ಈ ಅನುರಾಗ ಹೇಗೆ ಶುರುವಾಯಿತು

ಲಂಡನ್, ಚಿನ್ನದ ಕುಂಡದಲ್ಲಿ ಅರಳಿದ ಸಾಮಾನ್ಯ ಹೂ...

ಇಲ್ಲಿ ಇತಿಹಾಸ ಸಾರುವ ಶಿಥಿಲ ಗೋಡೆಗಳಿಗೆ

ಆಧುನಿಕ ಕಾಂಕ್ರೀಟ್ ಗೋಡೆಗಳನ್ನ 
ಜೋಡಿಸಿ ಜೋಪಾನಗೊಳಿಸಲಾಗಿದೆ

ಪ್ರತಿ ಕಲ್ಲಿನ ಸುತ್ತಲೂ ಕಥೆಯ ಹೆಣೆದು 
ಕಥೆಗೆ ಒಪ್ಪುವ ಬಣ್ಣ ಬಳಿದು 
ಪ್ರವಾಸಿಗರ ಮನಸಿನಾಳಕ್ಕೆ ಗಾಳ ಇಳಿಸಿ
ಹೊಟ್ಟೆ ತುಂಬಿಸಿಕೊಳ್ಳುವ ಚಾಲಾಕಿ ವರ್ತಕರು 

ಪ್ರಪಂಚದ ಮೂಲೆ ಮೂಲೆಯಿಂದ ದೋಚಿದ  
ಲೂಟಿಯನ್ನ ಎತ್ತರದ ಕೋಟೆಕೊತ್ತಲೊಳಗೆ ಹುದುಗಿಸಿ
ಗಾಜಿನ ಹೂಜಿಯಲ್ಲಿ ಪ್ರದರ್ಶನಕ್ಕಿಟ್ಟಾಗ 
ಕಣ್ಣು ಬಾಯಿ ಬಿಟ್ಟು ನೋಡುವವರ ಸಿಟ್ಟಿಗೆ  
ಸಿಗಬಾರದೆಂದೇ ಅಡಿಗಡಿಗೊಬ್ಬೊಬ್ಬ ಕೊತ್ವಾಲನು 

ಬೀದಿ ಬೀದಿಗಳಲ್ಲಿ ದೈತ್ಯ ಕಟ್ಟಡದ ಕೆಳಗೆ 
ನಿರಾಶ್ರಿತರ ಸಾಂಪ್ರದಾಯಿಕ ಭಿಕ್ಷಾಟನೆ 
"Please spare some change" 
ಒಂದೇ ಸಲಕ್ಕೆ  ಅರ್ಥವಾಗದಿದ್ದರೂ 
ಕರುಣಾಜನಕ ಕೊರಳಂತೂ ಚಿರಪರಿಚಿತ 

ಇಲ್ಲಿ ಸ್ಥಳೀಯ, ಪರಕೀಯರೆಂಬ ಬೇಧವಿಲ್ಲ 
ಸಂಕುಚಿತ ಮನಸ್ಥಿತಿಯಿಂದ ಹೊರಬರಲಾಗದವರು 
ವಾಸ್ತವಾಂಶವನ್ನ ಅರಗಿಸಿಕೊಳ್ಳಲಾಗದವರು ಮಾತ್ರ 
ಬಣ್ಣ, ಎತ್ತರ, ಸುತ್ತಳತೆಯ ಮಾಪನ ಹಿಡಿದು 
ತಮ್ಮವರಿಂದಲೇ ಉಚ್ಛಾಟನೆಗೊಳಪಡುತ್ತಾರೆ 

ಪಾದಚಾರಿ, ಸೈಕಲ್ ಹೊಡೆವವ, ಕೋಟಿಗೆ ಬಾಳುವ  
ವಾಹನ ಸವಾರನಿಗೂ ಸಮಾನ ಮಾನ್ಯತೆ 
ತಪ್ಪು ಯಾರಿಂದ ಆದರೂ ತಪ್ಪೇ  
ಮಂತ್ರಿ, ಕುತಂತ್ರಿಗಳ ಚೇಲಾಗಳಿಗೆ ಕಿಮ್ಮತ್ತಿಲ್ಲ 
ಪ್ರತಿಭಟನೆಗಳ ಪ್ರತಿರೋಧಿಸಲು ಪಿಸ್ತೂಲುಗಳಿಗೆ ತಾಕತ್ತಿಲ್ಲ 

ಹೊಸ ಪೀಳಿಗೆಗೆ ಅಸಲಿ ಇತಿಹಾಸದ ಅರಿವಿನ ಕೊರತೆ 
ಹಣ್ಣು ಮುದುಕರ ಊರುಗೋಲು, ಮಾತಲಿ ಮಮತೆ 
ಹೆಜ್ಜೆಜ್ಜೆಗೂ "Please", "Thank you", "Sorry"ಗಳ ರಗಳೆ  
ಅದೇ ಸಾಲಗೆ ಬೈಗುಳಗಳದ್ದೂ ಸರಣಿ ಸುರಿಮಳೆ 

ಕಿರಿದಾದವುಗಳ ಮೂಗಿನ ಕೆಳಗೆ ಸಾಗಿಬಿಟ್ಟು 
ದೈತ್ಯ ಹಡಗುಗಳಿಗೆ ತನ್ನ ರೆಕ್ಕೆ ತೆರೆದುಕೊಳ್ಳುವ ಸೇತುವೆ 
ದಂಡೆಯಲ್ಲಿ ನಾಗರೀಕತೆಯ ಕುರುಹು 
ಸದಾ ಹೊಸತನ ಸಾರುವ ಕೆಸರು ಮೆತ್ತಿದ ಜಲ 
ಅಮಾನುಷ ಚರಿತ್ರೆಯ ಎದೆಯಲ್ಲಿ ಬಚ್ಚಿಟ್ಟು 
ತಣ್ಣಗೆ ಹರಿದು ಉರುಟುಗಲ್ಲುಗಳ ತೀರಕೆ ಬಡಿದು 
ನೆತ್ತರ ಬದಲಿಗೆ ನಿರುತ್ತರದ ನಿಲುವು 
ಅಲ್ಲಲ್ಲಿ ಪಶ್ಚಾತಾಪದ ತಾಪ 
ಮಿಕ್ಕಂತೆಲ್ಲವೂ ಮಂಜಿನಂತೆ ಅಸ್ಪಷ್ಟ  

ಹಗಲು ಧ್ಯಾನಕ್ಕೆ ಕುಳಿತು, ರಾತ್ರಿ ಎಚ್ಚರಗೊಳ್ಳುವ ಶಹರ 
ಮಿಂಚು ದೀಪಗಳ ನಡುವೆ ನಿದ್ದೆಗೆಡಿಸುವ ನಗರ 
ಎತ್ತರದಲಿ ಹಸಿವ ನೀಗಿಸುವ ಸ್ಕೈ ಗಾರ್ಡನ್ಗಳು
ಆಳದಲಿ ಗುರಿ ಮುಟ್ಟಿಸುವ ರೈಲು ಮಾರ್ಗಗಳು 
ನಡುವೆ ನೆಲದ ಮೇಲೆ ಎಲ್ಲರನ್ನೂ ಆದರಿಸುವ  
ದೂರದ ಚಂದ್ರನಂತೆ ಭಾಸವಾದರೂ
ಹತ್ತಿರಕ್ಕೆ ಅದೇ ಸಹಜತೆ ಕಾಯ್ದುಕೊಳ್ಳುವ
ಲಂಡನ್, ಚಿನ್ನದ ಕುಂಡದಲ್ಲಿ ಅರಳಿದ ಸಾಮಾನ್ಯ ಹೂ... 

ಒಲವಾಗಿ ಹೋದ ಮೇಲೆ

ಒಲವಾಗಿ ಹೋದ ಮೇಲೆ 

ಮನದಾಸೆ ನಿನ್ನ ಮೇಲೆ
ನಿನ್ನತ್ತ ಸಾಗಿ ಬಂದೆ 
ಕಣ್ಣಲ್ಲಿ ತುಂಬಿಕೊಂಡೆ 
ಮಾಡುಲೇ ನಿನ್ನ ಗುಣಗಾನವೀಗ 
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಮುಗಿಯದ ಮಾತೊಂದಿದೆ
ಎದುರಿಗೆ ಬಾ ಮಲ್ಲಿಗೆ 
ಕದಿಯುವ ಹುನ್ನಾರಕೆ
ಸಿಲುಕಲಿ ಈ ಗುಂಡಿಗೆ
ಚಿತ್ತಾರ ಗೀಚಲು ಹೋಗಿ
ಸಿಕ್ಕಿಲ್ಲ ಯಾರಿಗೂ ನೀನು
ಕುಂಚಕ್ಕೆ ನಿನ್ನ ಮೇಲೆ ಕೋಪವಂತೆ 
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಸಡಗರದ ಸಂತೆಯೇ 
ಜರುಗಿದ ಹಾಗಾಗಿದೆ 
ಕುಸಿಯುವ ಕನಸಾದರೂ 
ನಲುಮೆಗೆ ರಂಗೇರಿದೆ 
ಬಚ್ಚಿಟ್ಟ ಬೆಟ್ಟದ ಹೂವ 
ನಿನ್ನತ್ತ ಚಾಚುವೆ ನೋಡು 
ಅಂದಕ್ಕೆ ನಿನ್ನ ಮೇಲೆ ಮೋಹವಂತೆ  
ನಿನ್ನ ಬಯಸಿ ಬಯಸಿ 
ನಿನ್ನ ನೆರಳ ಬಳಸಿ 
ಇನ್ನೂ ಸನಿಹವಾಗುತಿರುವೆ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...