Wednesday, 16 February 2022

ಒಲವಾದಾಕ್ಷಣ ಮಾತೇ ಬಾರದೇ

ಒಲವಾದಾಕ್ಷಣ ಮಾತೇ ಬಾರದೇ 

ಎದುರಾಗುತ್ತಲೇ ಉಸಿರು ನಿಂತಿದೆ 
ಹೆಸರ ಗೀಚುವೆ ಎಲ್ಲೇ ನಾ ನಿಂತರೂ 
ಮನದ ದಾಹಕೆ ಆಗು ಬಾ ತುಂತುರು 
ಹೊಸೆದು ನೀಡಲೇ ಹೊಸ ಸಾಲೊಂದನು 
ಬೆಸೆದು ನನ್ನಲಿ ನಿನ್ನ ನಗುವನು 
ಗರಿ ಬಂದಂತಿದೆ ನೋಡು ಸಂತೋಷಕೆ 
ಸಿರಿ ಸಿಕ್ಕಂತೆ ನೀ ನನ್ನ ಈ ಜೀವಕೆ 
ಒಲವೇ ನಿನ್ನಿಂದ ಜನುಮ ಸಾರ್ಥಕ 
ಮೈಯ್ಯ ಮರೆವೆ ನೆನೆವಾಗ, ನೀನೇ ಕೌತುಕ.. 

ಈ ಬಿರುಸಾದ ಬೇಗೆಗೆ 
ಇರಲೇ ಬೀಸಣಿಕೆಯಾಗಿ 
ಆ ಸೊಗಸಾದ ಸಂಜೆಗೆ
ಸಿಗಲೇ ಏಕಾಂತವಾಗಿ 
ತುಡಿಗಣ್ಣಲ್ಲಿ ನೀ ಇಟ್ಟು ನನ್ನನು 
ಕುಣಿಸೋ ಆಟ ಹಿತವಾಗಿದೆ 
ಒಳಗೇನೇನೋ ಆತಂಕ ಕಾಡಲು
ನೀ ಎದೆಗಪ್ಪಿ ಇರಬಾರದೇ?!



ಬೆಳಕನ್ನು ನಾಚಿಸೋ ಹಾಗೆಯೇ 
ಪರದೆ ನೀಡಿದೆ ಮೋಡವು 
ಬೆರಳ ಸೋಕಿ ನೀ 
ಕಣ್ಣೀರಾಗಿ ಹೊರ ಬಂದವು 

ಸುಮ್ನೆ ಜೀವನ ಸಾಗುತೈತೆ ಎಲ್ಲ ಮಾಮೂಲಿ

ಸುಮ್ನೆ ಜೀವನ ಸಾಗುತೈತೆ ಎಲ್ಲ ಮಾಮೂಲಿ

ಒಡೋ ಟೈಮನು ತಡೆಯೋಕಾಗೋದಿಲ್ಲ ಕೈಯ್ಯಲಿ
ಪ್ರೀತಿ ಹಾಂಚೋಣಾ ಆದರೆ ದುಬಾರಿ ಲೈಫ಼ಲಿ
ಸೋಲು ಗೆಲುವು  ಬೇವು ಬೆಲ್ಲ ಹಬ್ಬನೇ ಇಲ್ಲಿ
ಹೆಜ್ಜೆ ಹೆಜ್ಜೆಗೂ ದಾರಿ ಕಾಣೋ ದುಂಡು ಭೂಮಿಲಿ
ಬಾನಿಗಾರೋಣ ಸಿಕ್ರೆ ಚಾನ್ಸು ರಾಕೆಟ್ ಸ್ಪೀಡಲ್ಲಿ
ಏನೇ ಆಗು ಎಲ್ಲೇ ಹೋಗು ಇರಿಸು ನೆನಪಲ್ಲಿ
ನಿನ್ನೂರು, ನಿನ್ನೊರ್ಗಿಂತ ಏನೂ ಮಿಗಿಲು ಬಾಳಲ್ಲಿ 

ಬಣ್ಣ ತೊಟ್ಟ ಚಿಟ್ಟೆ ತನ್ನ ಅಂದ ಬಚ್ಚಿಟ್ಟು
ಗೂಡಿನಲ್ಲೇ ಕೂತ್ರೆ, ಜೇನು ಸಿಗುತೈತಾ
ಮೋಡ ಮುಚ್ಚಿತಂತ ಸುಮ್ಸುಮ್ನೆ ಸಿಟ್ಟಾಗಿ 
ಬೆಳಗೋ ಸೂರ್ಯ ಹುಟ್ಟೊದಿಲ್ಲ ಅಂದ್ರೆ ಆಗುತ್ತಾ
ಸಕ್ರೆ ಬೇಕು ಅಂದ್ರೆ, ಹುಡುಕು ಇರುವೆ ಹಂಗೆ (೨)
ಆನೇಗೂನೂ ಬಾದೆ ತಪ್ಪಿದ್ದಲ್ಲ ಕಾಡಲ್ಲಿ
ದೇವ್ರಾಗೋಕೂ ಹೋರಾಡ್ಬೇಕು‌ ನೀನು ಬಾಳಲ್ಲಿ!

ಅವಳು ಹಗಲಿನ ಬೆಳಗು

ಅವಳು ಹಗಲಿನ ಬೆಳಗು

ಅವ ರಾತ್ರಿಯ ಕತ್ತಲು
ಅವಳಿಗೆ ಕತ್ತಲ ಭಯವಿಲ್ಲ, ಅಲ್ಲಿ ಅವ ಇರುತ್ತಾನೆ
ಅವನಿಗೆ ಬೆಳಕ ಕೊರತೆಯಿಲ್ಲ, ಆಕೆ ಭರಪೂರ ಕೊಡುತ್ತಾಳೆ

ಪಾಳಿ ಬದಲಿಸುವ ವೇಳೆ
ಕೆಲ ಕಾಲ ಮಾತಿಗಿಳಿಯುತ್ತಾರೆ
ಆಗಸ ಆಲಿಸುತ್ತ ನಾಚಿ
ಕೆಂಪು ಮುಡಿದು ಕಂಗೊಳಿಸುತ್ತದೆ

ಅವನು ಚಂದ್ರನ ಸುತ್ತ
ತಾರೆಗಳ ತೋರಣ ಕಟ್ಟಿ ಪ್ರಕಟಿಸಿದಾಗ
ಅವಳು ಇಬ್ಬನಿಯ ಹೊತ್ತ
ಪಕಳೆಗಳ ಪ್ರೇಮ ಕವಿತೆ ಹಾಡುತ್ತಾಳೆ

ಅವನು ಮಿಂಚು-ಗುಡುಗುಗಳ ರೂಪಿಸಿ
ಎದೆಯ ಕಂಪಿಸಿದಾಗ
ಅವಳು ಕೆನ್ನೆ ಸೆರೆಹಿಡಿದ
ಹಿಮದ ರುಚಿಯ ಪರಿಚಯಿಸುತ್ತಾಳೆ

ಮಳೆ‌ ಇಬ್ಬರಿಗೂ ಆಪ್ತ
ಆದರೆ‌ ಭಾವ ಬೇರೆ
ಇಳೆ ಇಬ್ಬರಲ್ಲೂ ಸುಪ್ತ
ಮಿಡಿತದ ದಾಟಿ ಬೇರೆ

ಅವನಲ್ಲಿ ಆಕೆ ಎಲ್ಲ ಗುಟ್ಟುಗಳ
ಬೆಚ್ಚನೆ ಬಚ್ಚಿಟ್ಟು ಕಾಪಾಡುತ್ತಾಳೆ
ಆಕೆಯಲ್ಲಿ ಅವ ಸೀಳಿದ ಕಿರಣದ
ಬಣ್ಣಗಳಿಗೂ ಮೇರಾಗಿ ಉಳಿಯುತ್ತಾನೆ

ಹಣತೆ ಮೌನ ವಹಿಸಿದಾಗ
ಅವಳು ಅವನೊಳಗೆ
ಕಿಡಿ ಸೋಕಿದ ಮರು ಕ್ಷಣ
ಅವ ಅವಳೊಳಗೆ

ಇಬ್ಬರೂ‌ ಒಂದೇ ಅಲ್ಲ
ಒಂದಾದರೆ ಮತ್ತೊಂದಕೆ ಮೃತ್ಯು
ಯುಗಗಳಿಂದ ತಿದ್ದಿ ತಂದ
ಕಟ್ಟು ಕತೆಗಳ ಕಡತಗಳನ್ನು
ಒಂದೇ ಏಟಿಗೆ 
ಸುಟ್ಟು ಹಾಕಿ ಬಿಡಬಹುದಿತ್ತು
ಆಥವ
ಅವರಿಗೆ ಅವ್ಯಾವುದರ ಪರಿವೇ ಇಲ್ಲ
ಸಿಕ್ಕಷ್ಟೂ ಹೊತ್ತು ಪ್ರೀತಿಸಿ
ಮಿಕ್ಕಂತೆ ಮತ್ತೂ ಪ್ರೀತಿಸಿ
ಇರುವಿಕೆಯ ಸಾಬೀತು ಪಡಿಸುತ್ತ
ಉಳಿದು ಬಿಟ್ಟಿದ್ದಾರೆ 
ತಾವಿರುವಂತೇ!...

ಆಳವಾಗಿ ಸೇರಿಹೋಗಲೇನು ನೀಲಿ ಕಣ್ಣಲಿ

ಆಳವಾಗಿ ಸೇರಿಹೋಗಲೇನು ನೀಲಿ ಕಣ್ಣಲಿ 

ಬೀಡು ಬಿಟ್ಟು ನಲಿಯಲೇನು  ನಿನ್ನ ನೀಳ ತೊಳಲಿ 
ಸಾಲುಗಟ್ಟಿ ನಿಂತ ಹಾಗೆ ನಿನ್ನ ಮುಂದೆ ಅಹಂ ಇದೋ 
ಸೋಲಿಸೋಕೂ ಮುನ್ನ ಸೋತು ಹೋದೆ ನಿನ್ನ ಎದುರಲಿ 

ಎಷ್ಟು ದೂರ ಸಾಗಬೇಕು ನೆರಳ ಹಿಂಬಾಲಿಸಿ 
ಆಗಲೇನು ನಾನೇ, ಅದರ ಜಾಗವನ್ನು ತುಂಬತಾ 
ಇಷ್ಟ ಪಟ್ಟ ಹಾಗೆ ನೀನು ಸಿಕ್ಕಿದಾಗ ತಿರುವಲಿ 
ಮನದ ಭಾರ ಹಗುರವಾಗಿ ನಿನ್ನ ತುಂಬೋ ಇಂಗಿತ 

ಹಿಟ್ಟು ತಿಂದ ದೇಹದಲ್ಲೂ ಗಟ್ಟಿ ಇರದು ಗುಂಡಿಗೆ 
ಪ್ರೀತಿ ವಿಷಯದಲ್ಲಿ ಅದುವೂ ಹೂವಿನಷ್ಟೇ ಕೋಮಲ 
ಬಿಟ್ಟು ಬಾಳಲಾರೆ ಎಂಬುದಷ್ಟು ಸಣ್ಣ ವಿಷಯವೇ?
ನೀನು ಇರದ ಬಾಳು ಕೆಸರ ಅಪ್ಪಿಕೊಂಡ ಉತ್ಪಲ   

ತಟ್ಟಿ ಹೋಗು ಎದೆಯನೊಮ್ಮೆ ಚಿಮ್ಮಿ ಬರಲಿ ಅಕ್ಷರ 
ಗೋಳು ತೋಡಿಕೊಳ್ಳುವಂತೆ ಗೀಚಿಕೊಳುವೆ  ಹಾಳೆಯ
ಚಿಟ್ಟೆ ಬಿಟ್ಟು ಹೋದ ಹೆಜ್ಜೆಯನ್ನು ಹಿಡಿಯುವಾಕೆ ನೀ 
ನನ್ನ ದುಗುಡ-ತುಮುಲ ಮೂಲ ಹಾಡನೊಮ್ಮೆ ಕೆಳೆಯಾ?

ನೋಡು ಹಸಿದುಕೊಂಡ ಕಣ್ಣು ಕನಸಿಗೆ ಕರೆ ನೀಡಿದೆ 
ಯಾವುದೇ ಮುಲಾಜು ಇರದೆ ಸ್ವಪ್ನ ದಾಳಿ ಆಗಿಸು 
ಸಣ್ಣ ಕಿಡಿಯ ಹೊತ್ತು ಉಗುರಿನಲ್ಲಿ ಬೆನ್ನ ಗೀರಲು
ಕರಗಿದಂತೆ ನಾನು ಹಿಡಿಯಲೆಂದು ನೀನೇ ಧಾವಿಸು 

ಪಾದ ಸೊಕಿದ ಎದೆ‌ ಉಬ್ಬುವಂತಿದೆ

 ಪಾದ ಸೊಕಿದ ಎದೆ‌ ಉಬ್ಬುವಂತಿದೆ

ಪುಟ್ಟ ಕಂದನ ಹಿಡಿದು ತಬ್ಬುವಂತಿದೆ
ಅಳುವ ಸದ್ದಿಗೆ ಮನ ಕಲಕಿದಂತಿದೆ
ಮಗುವ ನಗುವ ಸದ್ದಿನಲ್ಲೇ ಸಿಲುಕಿದಂತಿದೆ

ನಿದ್ದೆ ಮಾಡುತಿದ್ದರೆ ಧ್ಯಾನ ಬುದ್ಧನೇ
ನಿದ್ದೆ ದಾಟಿದಾಕ್ಷಣ ಚಂದ ರೋಧನೆ
ಮಿಟುಕುವಾಗ ನೋಡುತ ಹೊಳೆಯೋ ಕಣ್ಣನೇ
ಉಸಿರ ರಾಗ ಹಿಡಿಯುವೆ ಹಾಡಿ ಮೆಲ್ಲನೆ

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ 

ಇಬ್ಬರೂ ನಟಿಸಿದ್ದೆವು, ಇನ್ನೂ ನೆನಪಲ್ಲಿದೆ
ನಗೆ ತರಿಸದ ಚಟಾಕಿ ಹಾರಿಸಿದಾಗಲೂ
ಒತ್ತಾಯಕೆ ನಕ್ಕಿದ್ದು ಇನ್ನೂ ನೆನಪಲ್ಲಿದೆ

ಯಾರ ಕಣ್ಣಿಗೂ ಬೀಳದೆ ಮೆಲ್ಲ ಕೈ ಬೆಸೆದು 
ಸಂತೆ ಬೀದಿಗಳಲ್ಲಿ ಓಡಾಡಿಕೊಂಡೆವು 
ಎಲ್ಲರೂ ಗಮನಿಸುವುದ ಮೊದಲೇ ಅರಿತವರಾಗಿ 
ಮತ್ತೂ ಮುಗಿಬಿದ್ದೆವು ಇನ್ನೂ ನೆನಪಲ್ಲಿದೆ

ಚಿಕ್ಕ ಪುಟ್ಟ ಕಾರಣಕ್ಕೆ ಬೆನ್ನಿಗೆ ಬೆನ್ನ ಕೊಟ್ಟು 
ವಿಮುಖವಾಗುವ ವೇಳೆ ಸಂಕಟ ದುಪ್ಪಟ್ಟು 
ಹಠವ ಬಿಟ್ಟು ಕೊಡದಿರುವುದ ಆಗಿನಿಂದಲೇ 
ರೂಡಿಸಿಕೊಂಡಿದ್ದೆವು ಇನ್ನೂ ನೆನಪಲ್ಲಿದೆ 

ಯಾವ ಸಂಜೆಯ ಕೊಂಡಾಡಿದೆವೋ  
ಅದೇ ಮುಳುವಾಯಿತೆಂದು ವಿರಹದಲ್ಲಿ 
ಕಣ್ಣೀರಿನ ಪತ್ರಗಳ ಬರೆಬರೆದು ಹರಿದೆವು  
ಬವಣೆಯಲಿ ಬೆಂದೆವು ಇನ್ನೂ ನೆನಪಲ್ಲಿದೆ 

ರಾತ್ರಿಗಳ ಕನಸಿಗೆ , ಹಗಲು ಹೊಸ ಬಯಕೆಗೆ 
ಮೀಸಲಿಟ್ಟೆವು ನಡುವೆ ತೆಳು ಗೀಟು ಬರೆದು 
ಕತ್ತಲಿಗೆ ನಾವೆಂದೂ ಅಂಜಿದವರೇ ಅಲ್ಲ 
ಬೆಳಕು ನಮ್ಮೊಳಗಿತ್ತು ಇನ್ನೂ ನೆನಪಲ್ಲಿದೆ 

ನಾ ಮರೆತೆ ಎಂದು ನೀ, ನೀ ಮರೆತೆ ಎಂದು ನಾ 
ಹಳೆ ನೆನಪುಗಳ ಮೆಲುಕು ಹಾಕುತಿದ್ದೆವು 
ನೆನಪ ನೆನಪಿಸುವಂಥ ಬಳಪ ರೇಖೆಗಳನ್ನು 
ನೆಪ ಮಾತ್ರಕೆ ಬಿಡಿಸಿದೆವು ಇನ್ನೂ ನೆನಪಲ್ಲಿದೆ  

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು

 *ಪಲ್ಲವಿ*

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 
ನಿಧಾನಿಸದೆ ಆsss, ಧಾವಿಸು ಬೇಗ
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ 

*ಚರಣ ೧*
ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ 
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತುವೆ 
ಓ..  ಮರಳ ಮೇಲೆ ಪ್ರಣಯದ ಬರಹ, ಅಲೆಯೊಳು ಕೂಡುತಿವೆ   
ಹುದುಗಿದ ಭಾವಗಳ ಚಿಪ್ಪಲಿ ತುಂಬಿ ನಿನ್ನನು ಸೇರುತಿವೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)
ಮಿಡಿಯುತಿದೆ ನನ್ನ ಹೃದಯ
ಇನ್ನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ  

*ಚರಣ ೨*
ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 
ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 
ಓ... ಮುಗಿಯದ ಮಾತೆಲ್ಲ ಕಣ್ಣಲಿ ಜಿನುಗಿ ಖುಷಿಯಲಿ ಜಾರುತಿವೆ 
ಮರಳಿ, ಮರಳಿ ಹರಿದು ಬರೆದ ಕವಿತೆಗಳು ನಿನ್ನವೇ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು
ಹೇಗಾದರೂ ಈ ಕನಸ ನನಸಾಗಿಸೆಯಾ? (೨)  
ಮಿಡಿಯುತಿದೆ ನನ್ನ ಹೃದಯ
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ನಿನ್ನ ಹೆಸರ ಹನಿಯು ಗೀಚಿದಂತೆ(೨) 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...