Monday, 26 July 2021

ನಾ ಕರಗಿ ಬರುವೆ

ನಾ ಕರಗಿ ಬರುವೆ 

ಸೇರಲು ಆ ಬೊಗಸೆಯಲಿ 
ನೀ ಹಿಡಿ ನನ್ನ ಉಳಿಸುತಲಿ 
ಆ ನಿನ್ನ ನೆನಪಿನಲಿ 
ನಾ ಬರುವೆ  ಜೊತೆಗೆ 
ಹೇಗಿರಲಿ ಒಂದಾಗದೆ  
ನೀ ಹಿಡಿ ನನ್ನ ಉಳಿಸುತಲಿ 
ಆ ನಿನ್ನ ಕಾಡೋ ಚಂದ ನೆನಪಿನಲಿ 

ಆವರಿಸು ಒಲವೇ
ಕಾದಿರುವೆ ನಿನಗಾಗಿಯೇ ನಾ
ಹಿಡಿ ನನ್ನ ಕೈಯ್ಯನು ನೀ
ನೆನಪನ್ನು ಆವರಿಸಿ
ಕಾತರಿಸಿ ಇರುವೆ
ನೇವರಿಸು ತಂಗಾಳಿಯ ಹಾಗೆ
ನನ್ನ ಮನಸನು ನೀ 
ಎದೆಯ ಕರೆಯನ್ನು ಕೂಡಲೇ ಸ್ವೀಕರಿಸಿ


ಆವರಿಸು ಒಲವೇ
ಆದರಿಸಿ ಮನದಾಸೆಯನು 
ನೀ ನನ್ನ ಸ್ವಾಗತಿಸು
ನವಿರಾದ ನೆನಪಿನಲಿ 
ಸ್ವೀಕರಿಸು ಕರೆಯ 
ಸಾಗರದಾಚೆಗೂ ನಾ ಬರುವೆ ಜೊತೆ 
ಬೇಡ ಅನ್ನದಿರು 
ನೆನಪಾಗಿ ನಿಲ್ಲುವೆ ನಿನ್ನ ನೆನಪಿನಲಿ 
ಬರಲೇನು ಚೂರು ದೂರ 
ನೆರಳಾಗುತ್ತಾ ನಾನು  
ಬೆರಗಾದಂತೆ ಒಂದಾಗಿ 
ಕನಸನ್ನು ಕಾಣುವ 
ಕೊಡಲೇನು ಓಲೆಯೊಂದ 
ಕಿರು ಸಾಲನ್ನು ಗೀಚಿ 
ಪಿಸು ಮಾತಲ್ಲಿ ನೀನಾಗ 
ಕೊಡುಬೇಕು ಸಮ್ಮತಿ.. ಹೇ.. 
ಗಡಿ ಬಿಡಿ ಇನ್ನೇಕೆ 
ಮರದಡಿ ಕೂಡುವ  ಬಾ.. ಏ ಹೇ 
ಕುಡಿಯೊಡೆದ ಪ್ರೀತಿ 
ವಿನಿಮಯವಾಗಲಿದೆ.. ಏ 

ಬಾ ಸನಿಹ ಒಲವೇ
ಆದರಿಸಿ ಮನದಾಸೆಯನು 
ನೀ ನನ್ನ ಆವರಿಸು  
ನವಿರಾದ ನೆನಪಿನಲಿ 
ಸ್ವೀಕರಿಸು ಕರೆಯ 
ಸಾಗರದಾಚೆಗೂ ನಾನಿರುವೆ  ಜೊತೆ 
ಬೇಡ ಅನ್ನದಿರು 
ನೆನಪಾಗಿ ನಿಲ್ಲುವೆ ನಿನ್ನ ನೆನಪಿನಲಿ 

ತಮಾಷೆ ಮಾಡಿದಂತೆ ಅಲ್ಲ ಜೀವನ

ತಮಾಷೆ ಮಾಡಿದಂತೆ ಅಲ್ಲ ಜೀವನ 

ವಿಶೇಷವಾಗಿಸೋಕೆ ಬೇಕು ಕಾರಣ 
ಹತಾಶೆ ಬೇಡ ಸೋತೆಯಾದರೀ ದಿನ 
ನಾಳೆ ಅನ್ನೋದೇ ಕೌತುಕ 

ಹೆಗಲ ಮೇಲೆ ಭಾರ ಹೊತ್ತೆ ಏತಕೆ?
ಹಗುರವಾಗು ಸೇರಿ ನಗುವ ಕೂಟಕೆ 
ಗಲಾಟೆ ಮಾಡಿಕೊಳ್ಳಲೇಕೆ ಆಗಲೇ?
ಕರಾಟೆ ಆಡಿ ಸೋಲಬೇಡ ನಿನ್ನಲೇ 
ಬರೋದು ಬಂದೇ ಬರುವುದೆಂದು ಅರಿತರೆ 
ಒಂದೊಂದೂ ಕ್ಷಣವೂ ರೋಚಕ 

ಬಿದ್ದ ಜಾಗದಲ್ಲೇ ಬೆಳೆದು ನಿಲ್ಲುವ
ಬೀಜವಾಗಬೇಕು ನೀನು ಮಾನವ
ಸವಾರಿಯಲ್ಲಿ ಏರು ತಗ್ಗು‌ ದಾಟುತ
ಪರಾರಿಯಾಗೋ ಗಾಳಿಯಂತೆ ಸಾಗುವ
ಪಿತೂರಿ ಮಾಡಿ ಕೂತರಲ್ಲೇ ಕೊಳೆಯುವೆ
ಮಾತಾಡಬೇಕು ಕಾಯಕ

ಎಷ್ಟೇ ಇರಲಿ ನಮ್ಮ ನಡುವೆ ಅಂತರ
ಪ್ರೀತಿ ಕೊಂಡಿಯಾದರೆಷ್ಟು ಸುಂದರ!
ಕೊಡೋದ ಕೊಟ್ಟು ಉಳಿಯ ಬೇಕು ತೆಪ್ಪಗೆ
ದುರಾಸೆ ಬಿಟ್ಟು ಮಣಿಯ ಬೇಕು ತಪ್ಪಿಗೆ
ಇದಿಷ್ಟೇ ‌ನನ್ನ ಅರಿವಿಗಿರುವ ಉತ್ತರ
ಮಾಡೋಣ ಬಾಳು ಸಾರ್ಥಕ...

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು

ಪದ ಕಟ್ಟೋದಲ್ಲ ಮನ್ಸಿನ್ ಕದ ತಟ್ಟಿ ನೋಡು 

ಮದ ಗಿದ ಹಂಚೊದಲ್ಲ ಮುದ ನೀಡಿ ನೋಡು 
ಬೇಕು ಬೇಕು ಅಂತ ಆಂಗ್ಲ ಪದ ಬೆರ್ಸೋದ್ಯಾಕೆ?
ಆಗೋದಿಲ್ವಾ ಕನ್ನಡ್ದಲ್ಲೇ ರ್ಯಾಪ್ ಮಾಡೋದಕ್ಕೆ
  
ರಾಗಿ ಮುದ್ದೆ ಜೊತೆ ಮುರಿ ಖಡಕ್ ರೊಟ್ಟಿ ಕೂಡ  
ನೀರ್ ದೋಸೆ ಮೀನ್ ಸಾರು ಘಮ್ಮತ್ತು ನೋಡಾ
ಕರಾವಾಳಿ, ಬಯ್ಲು ಸೀಮೆ, ಮಲೆನಾಡು ಅಂದ
ಬಗೆ ಬಗೆ ಸೊಗಡಿನ‌ ನಮ್ಮ ಕನ್ನಡ ಚಂದ

ಬಿಸಿಬೇಳೆ ಬಾತ್, ಉಡುಪಿ ಹೋಟೆಲ್ ಇಡ್ಲಿ ವಡೆ 
ಬಿಸಿ ಕಾಫಿ ರುಚಿ ಚಿಕ್ಕಮಗಳೂರಿನ್ ಕಡೆ 
ಸಿಹಿ ಕುಂದಾ, ಧಾರ್ವಾಡ್ ಪೇಡ, ದಾವಣಗೆರೆ ದೋಸೆ 
ಸಕ್ರೆ ಮಂಡ್ಯ, ಮೈಸೂರ್ ಪಾಕ್, ನಮ್ ಕನ್ನಡ ಭಾಷೆ 

ತೆಂಗು, ರೇಷಿಮೆ, ಶ್ರೀಗಂಧ, ಬಂಗಾರ ಬೆಲೆ  
ಜೋಳ, ರಾಗಿ, ಬತ್ತ, ವಿವಿಧ ತರ್ಕಾರಿ ಬೆಳೆ
ಕೃಷ್ಣೆ, ತುಂಗೆ, ಕಾವೇರಿ ನಮ್ಮ ಮಣ್ಣಿನ ಸಿರಿ 
ಇದ ಸಾರಿ ಹೇಳಿ ಎಲ್ಲ ಕನ್ನಡಿಗರಾಗಿರಿ 

ಚನ್ನಪಟ್ಟಣದ ಗೊಂಬೆ, ಮಾತನಾಡೋ ಜೀರ್ಜಿಂಬೆ
ದಟ್ಟಾರಣ್ಯದ ಹೊದಿಕೆ, ಮೃಗಗಳ ಸಂಕುಲಕ್ಕೆ
ಶಿಲ್ಪ ಕಲೆಗಳ ಬೀಡು, ಜೀವಂತಿಕೆಯನು ನೋಡು
ಭೂಮಿ ಮೇಲೆ ಸ್ವರ್ಗದಂತೆ, ನಮ್ಮ ಚೆಲುವ ಕರುನಾಡು

ಮಿಲ್ಟ್ರಿ ಹೋಟಲ್ ಕಾಲ್ಸೂಪು, ಬೋಟಿ ಗೊಜ್ಜು ಸವಿ 
ಬಿರಿಯಾನಿ ಜೊತೆ, ನಾಟಿ ಕೋಳಿ ಜಮ್ಮಾಸ್ಬಿಡಿ 
ಸಾಕು ಸಾಕು ಅಂತ ಇನ್ನು ನಾಲ್ಕು ತುತ್ತು ಜಡಿ 
ಊಟದಲ್ಲೇ ಇದ್ದಾನಂತೆ ದೇವ್ರು ಮರೀಬೇಡಿ 

ಚೂಡಾ, ಮಿರ್ಚಿ ಬಜ್ಜಿ ತಿಂದು ಚಾ ಕುಡಿಯೋಣ ಬಾ 
ತಮಟೆ ಏಟು ಬಿತ್ತು ಅಂದ್ರೆ ಅಲ್ಲೇ ಕುಣಿಯೋಣ ಬಾ 
ಜಾತಿ-ಧರ್ಮ ಸೀಮೆ ದಾಟಿ ಒಂದಾಗೋಣ ಬಾ 
ಪ್ರೀತಿಗಿಂತ ಬೇರೆ ಧರ್ಮ ಇಲ್ಲ ಅನ್ನೋಣ ಬಾ 

ಕನ್ನಡನ ಬಿಟ್ಟು ಬಾಳೋವಂತ ಬಾಳೇತಕೆ 
ಕಲ್ಲು ಕಲ್ಲು ಕೂಡಬೇಕು ಬೆಟ್ಟ ಆಗೋದಕ್ಕೆ 
ಸಾಕು ಮಾಡು ಶೋಕಿಗಂತ ಮಾತನಾಡೋ ನುಡಿ 
ರಕ್ತ ಕಣಕಣದಲ್ಲೂ ತುಂಬು ಕನ್ನಡ ನುಡಿ 

ಶ್ರೀಮಂತ ಸಾಹಿತ್ಯಕ್ಕೆ ಸಿಕ್ತು ಜ್ಞಾನಪೀಠ
ಎಲ್ಲೇ ಇರ್ಲಿ ಹಾರಿಸ್ತೀವಿ ನಾವ್ ನಮ್ ಬಾವುಟ
ತಾಯಿಯಷ್ಟೇ ತಾಯಿ ಭಾಷೆಯನ್ನೂ ಪ್ರೀತ್ಸೋ ಗುಣ
ಇದು ಕನ್ನಡಿಗರಲ್ಲಿ ಕಾಣೋ ಹುಟ್ಟು ಗುಣ

ಯಾರೇ ಕಟ್ಟಿಕೊಳ್ಳಲಿ ಇಲ್ಲಿ ತಮ್ಮ ಬದುಕನ್ನ
ಬೇಡ ಅನ್ನಳು ಕನ್ನಡ ತಾಯಿ ಸಾಕು ಮಕ್ಳನ್ನ
ತಪ್ಪಾದ್ರೂ ಪರ್ವಾಗಿಲ್ಲ ತಿದ್ದೋದ್ ನಮ್ಮ ಲಕ್ಷಣ
ಸಂಕೋಚ ಬೇಡ ಬಳ್ಸೋದಕ್ಕೆ ಕನ್ನಡ ಭಾಷೆನ

ಅಭಿಮಾನ ತುಂಬಿ ಹೊಮ್ಮಿ ಬಂದು ಹಾಡಾಯಿತು 
ಕೋಗಿಲೆನೂ ಕೂಡ ಖುಷಿ ಪಟ್ಟು ಕೊಂಡಾಡಿತು
ಲೋಕಕ್ಕೆಲ್ಲ ಕೇಳೋ ಹಾಗೆ ಪದ ಹಾಡ್ತೀನ್ನಾನು 
ಯಾಕಂದ್ರೆ ನಾನೊಬ್ಬ ಸ್ವಚ್ಛ ಕನ್ನಡದವನು..

ಮಾತಾಡುತಾ ಸಾಗು ನೀ

ಮಾತಾಡುತಾ ಸಾಗು ನೀ

ನಾ ಆಲಿಸಿ ನಿಲ್ಲುವೆ
ಕಾದಾಟಕೆ ನಿಂತರೆ
ನಾನಾಗಿಯೇ ಸೋಲುವೆ
ಆರಂಭಿಸು ಭಾವದ ಲೇಖನ
ಹಿಂಬಾಲಿಸಿ ಬರುವೆ ನಾ
ಆಧ್ಯಾತ್ಮಿಕ ಪ್ರೇಮದ ಹೂರಣ
ನಾವಿಬ್ಬರೇ ಹೋರಣ

ಜಾರಿದಂತೆ ಜೀವ ನಿನ್ನ
ನಿಳವಾದ ಕಣ್ಣಲಿ
ಗೇಲಿ ಮಾಡಬೇಡ ನೀನು
ಹೀಗೆ ನುಡಿದರೆ
ದೂರ ಮಾಡಿ ಹೋಗೋ‌ ಮುನ್ನ
ನೀಡು ಒಂದು ಕಾರಣ
ಮೌನಕೆಂದೂ ನೂರು ಬಣ್ಣ
ನೋಡ ಹೋದರೆ

ಎಲ್ಲದಕ್ಕೂ ಇರುವ ಹಾಗೆ 
ಪ್ರೀತಿಗಿರದು ಅಂತ್ಯವು 
ನನ್ನ ನಿನ್ನ ಧ್ಯಾನವಿನ್ನೂ 
ಮುಂದುವರಿಯುತಿರಲಿ 

ನನ್ನೊಡನೆ ನಾ ಮಾತಾಡಿದಂತೆ

ನನ್ನೊಡನೆ ನಾ ಮಾತಾಡಿದಂತೆ

ನಿನ್ನೊಂದಿಗೂ ಮಾತಾಡುವೆ
ನನ್ನೊಡನೆ ನಾ ಕಾದಾಡಿದಂತೆ
ನಿನ್ನೊಂದಿಗೂ ಕಾದಾಡುವೆ
ನನ್ನೊಳಗೆ ಮೂಡೋ ಸಂತೋಷವನ್ನು
ನಿನ್ನೊಂದಿಗಷ್ಟೇ ಹಂಚಿಕೊಳ್ಳುವೆ
ನನ್ನಲ್ಲಿ ಬಿಟ್ಟ ಬಿರುಕನ್ನು ನಿನ್ನತ್ತ 
ವ್ಯಾಪಿಸದಂತೆ ಕಾಯುವೆ

ಬೇಕೆಂದು ಬಚ್ಚಿಟ್ಟ ಗುಟ್ಟುಗಳು ರಟ್ಟಾಗಿ
ಆಗೊಮ್ಮೆ, ಈಗೊಮ್ಮೆ‌ ಸಿಡಿದೇಳುವೆ
ಸಾಕೆಂದು ಎತ್ತಿಟ್ಟ ಪುಸ್ತಕದ ನಡುವೆಲ್ಲೋ
ಪ್ರೇಮ ಸಂದೇಶವ ಗೀಚಿ‌ ಇಡುವೆ
ಆಗಂತುಕ ನಾನು ಬದುಕುಳಿಯುವ ತನಕ
ನಿಜವಾದ ನಾನಾರೋ ನಾನರಿಯೆನು
ಬತ್ತಿದ ಹಣತೆಯಲಿ ನನ್ನಿಟ್ಟು ಹೊತ್ತಿಸು
ಪ್ರಶ್ನಿಸದೆ ಕ್ಷಣ ಕಾಲ ನಾನುರಿವೆನು

ಮೊಂಡನೋ, ಹುಂಬನೋ, ಹಠದಿ ನಿಸ್ಸೀಮನೋ
ಹಿಡಿದು ತೋರಿಸು ಕನ್ನಡಿಯ
ನನ್ನ ನನಗೇ ಬಿಂಬಿಸಿ ತರುವಾಯ
ಕಣ್ಣಲಿ ಕಣ್ಣಿಟ್ಟು ಪ್ರೀತಿಸೆಯಾ?
ವಿಷಯಾಂತರ ಮಾಡುವೆ ಬೇಕಂತಲೇ
ಒಲ್ಲದ ವಾದಕೆ ನಿಂತರೆ ನೀ
ರೂಪಾಂತರಗೊಳ್ಳುವುದು ಆವರಣ
ಬಿಟ್ಟು ಬರಲು  ಕಣ್ಣ ಕಂಬನಿ...

ಮಳೆಯಲ್ಲಿಯೇ ಶುರುವಾಗಿದೆ ನಮ್ಮ ಜೊತೆ

ಮಳೆಯಲ್ಲಿಯೇ ಶುರುವಾಗಿದೆ ನಮ್ಮ ಜೊತೆ

ಮಳೆಯೆಂದಿಗೆ ಮುಂದುವರಿಯುತಿದೆ
ಹನಿಗೂಡುತ ಬರೆದಾಗಿದೆ ನಮ್ಮ ಕತೆ
ಬೆರಗಾಗಿಸಿ ಒಲವ ಉಣಿಸುತಿದೆ
ವಿಷಯ ಹೀಗಿರಲು
ಕೊಡೆ ಹಿಡಿಯುವ ಸಾಹಸವೇ
ಪ್ರಣಯ ಚಿಗುರಿರಲು
ಪ್ರತಿ ಕ್ಷಣವೂ ರೋಚಕವೇ ...

ಅತಿಯಾಗಿ ಕಾಡೋ ನಾಚಿಕೆ ಒಂದ
ನೀ ಮುಡಿದು ಬರುವ ವೇಳೆ
ನನ್ನಲ್ಲಿ ಮೂಡೋ ಸಂಕೋಚವನು 
ನೀ ಅರಿತುಕೊಂಡೆ ಹೇಗೆ?
ಅಭಿಮಾನಿ ನಾನು ನಿನಗೆಂದು ಹಿಡಿವೆ
ಹೂವನ್ನು ಮಂಡಿ ಊರಿ
ಅನುಬಂಧವನ್ನು ಬಿಗಿಯಾಗಿಸೋಕೆ
ಬಿಗಿದಪ್ಪು ಒಂದು ಬಾರಿ 

ಸಮಯ ಹೀಗಿರಲು
ಮಾತಾಡುವ ಸಾಹಸವೇ
ಪ್ರಣಯ ಚಿಗುರಿರಲು
ಪ್ರತಿ ಕ್ಷಣವೂ ರೋಚಕವೇ ...

ರಾತ್ರಿ, ಹಗಲು ನಿದ್ದೆಗೆಟ್ಟು

ರಾತ್ರಿ, ಹಗಲು ನಿದ್ದೆಗೆಟ್ಟು

ಬಂದು ಹೋದವರನು ಬಿಟ್ಟು
ಬೀದಿ ದೀಪದಡಿಗೆ ನಗುವ ರಸ್ತೆಯೇ
ಸುಟ್ಟ ಬಿಸಿಲಿಗಾದೆ ಕಪ್ಪು
ಬಿದ್ದ‌ ಮಳೆಗೆ‌ ಚೂರು ತಂಪು
ಕೊರೆವ ಮಂಜಿನೊಡವೆಯುಟ್ಟ ರಸ್ತೆಯೇ

ಹಕ್ಕಿ ಪಿಕ್ಕೆಯಿಟ್ಟರೂನು 
ಬೀಡಿ ತೊಟ್ಟು ಬಿದ್ದರೂನು
ಏನೂ ಆಗದಂತೆ ಉಳಿದ ರಸ್ತೆಯೇ...
ಅಕ್ಕ ಪಕ್ಕ ಅಡ್ಡ ರಸ್ತೆ
ಮಿಗಿಲು ನೀನೇ‌ ಮುಖ್ಯ ರಸ್ತೆ
ನೀನು ಬಂದ್ ಆದರೆ ಅವಸ್ಥೆಯೇ!

ಹೊಂಡವಾಗಿ ಹಬ್ಬಿದೆ 
ನಿನ್ನ‌‌ ಆಚೆ ಈಚೆಗೆ
ಗದ್ದೆ ಕೆಸರ ರಾಚುವಂತ ರಸ್ತೆಯೇ
ಸದ್ದು ಮಾಡಿಕೊಂಡರೂ
ನಿದ್ದೆಯಲ್ಲಿ ಬಂದರೂ
ಚೂರೂ ಜಗ್ಗಲಿಲ್ಲವಲ್ಲ ರಸ್ತೆಯೇ

ನಿನ್ನ ನಂಬಿ‌ ಬದುಕುವ
ತೇಪೆ ಹಾಕೋ ಕೈಗಳ
ನೀನೇ‌ ಹಿಡಿಯಬೇಕು ಕೇಳು ರಸ್ತೆಯೇ
ಇದ್ದ ನಿನ್ನ ಚರ್ಮವ
ಸುಲಿದು ಮತ್ತೆ ಹಾಸಿದ
ಗುತ್ತಿಗೆದಾರನೆಲ್ಲಿ ರಸ್ತೆಯೇ?

ನೀನು ಇರಲು ಸಾಲದೆ
ಪಾದಚಾರಿ ಮಾರ್ಗಕೂ
ಚಕ್ರ‌ ತಾನೇ ಉರುಳುತಾವೆ ರಸ್ತೆಯೇ
ಸೂರು ಇಲ್ಲದವರನು
ಭಾರ ಭೂಮಿಗೆನ್ನುತ
ಮಣ್ಣ ಮುಕ್ಕಿಸುವರು ನೋಡು ರಸ್ತೆಯೇ

ಸ್ವಲ್ಪ ಕಾಲ ಹೋದರೆ
ನೀನೇ ಅಲ್ಪವೆನ್ನುತ
ನೆರಳು ಕೊಟ್ಟ ಮರವೇ ಮಾಯ ರಸ್ತೆಯೇ
ಬಳಿಕ ಬಳಕೆದಾರರು
ಸುಂಕ ಕಟ್ಟಿ ಸತ್ತರು
ವರ್ಷ ಪೂರ್ತಿ ಇನ್ನು ನೀ ದುರಸ್ತಿಯೇ...

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...