Tuesday, 26 July 2022

ಸುಪ್ತವಾದಾಗ ನೀ ನನ್ನ ಮನದನ್ನೆಯೇ

ಸುಪ್ತವಾದಾಗ ನೀ ನನ್ನ ಮನದನ್ನೆಯೇ 

ಎಲ್ಲೇ ಹುಡುಕಾಡಲಿ ಕಾಣುವೆ ನಿನ್ನನೇ 
ಎಲ್ಲ ಸುಳ್ಳೆಂಬ ಅನುಮಾನವು ಸಹಜವೇ 
ಸೀಳುತ ಎದೆಯನು ತೋರುವೆ ನಿನ್ನನೇ

ನಂಟು ಬೆಸೆವಾಗ ನೀ ನಾಚಿ ಕೆಂಪಾಗುವೆ 
ನೋಡು ಗೋಧೂಳಿಯ ಬಣ್ಣಕೆ ಹೋಲಿಕೆ 
ಯಾವ ಹೂವಾದರೂ ನಿನಗೆ ಶರಣಾಗಿದೆ 
ಉದುರೋ ಎಲೆಯಾದರೂ ಬೇಡಿದೆ ನಿನ್ನನೇ

ತಂತಿ ಹಿಗ್ಗುತ್ತಾ ಬಿಗಿಯಾಗಿದೆ ನೋಡಿದೋ 
ಮೀಟತಾ ಹೊರಟರೆ ಈಗ ನಿನ್ನಿಷ್ಟಕೆ 
ಯಾವ ಸ್ವರವಾದರೂ ಕೂರದೇ ಶ್ರುತಿಯಲಿ  
ಹಾಡು ಹೊಸೆವಾಟಕೆ ಕೂಗಿವೆ ನಿನ್ನನೇ

ನಲ್ಲೆ ನಡುದಾರಿಯ ಬಿಟ್ಟು ಸರಿದಾಗ ನೀ
ದಾರಿಯು ಅಲ್ಲಿಗೇ ಕೊನೆ ಆದಂತಿದೆ
ಮುಂದೆ ನೆಟ್ಟಂಥ ಮೈಲಿಗಲ್ಲುಗಳೆಲ್ಲವೂ
ಗುರುತಿಗೆ ಎದುರು ನೋಡುತ್ತಿವೆ ನಿನ್ನನೇ

ಹಬ್ಬವು ಹಬ್ಬವೇ ನೀನು ಇರದಿದ್ದರೆ
ಬೆಲ್ಲದ ಹೂರಣ ಕೂಡ ಕಹಿಯಾಗಿದೆ
ಬಾಡಿದ ತೋರಣ ಹೊತ್ತ ಮನ ಬಾಗಿಲು
ಇಟ್ಟ ರಂಗೋಲಿಯೂ ಬಿಡಿಸಿದೆ ನಿನ್ನನೇ

ಬಂಧಿಖಾನೆಯಲಿ ಹೆಚ್ಚು ಖುಷಿ ಪಟ್ಟವ 
ಬಿಡುಗಡೆ ಹೊಂದಲು ಏಕೋ ಭಯವಾಗಿದೆ  
ಮಾಡದ ತಪ್ಪಿಗೆ ಶಿಕ್ಷೆಯ ನೀಡು ನೀ 
ನಾನೇ ಶರಣಾಗುವೆ ಬಾಚುತ ನಿನ್ನನೇ  

ಬಿಡುಗಡೆಗೆ ಕಾದಿರುವೆ ಬಂಧನವು ಸಾಕಾಗಿ

ಬಿಡುಗಡೆಗೆ ಕಾದಿರುವೆ ಬಂಧನವು ಸಾಕಾಗಿ

ನೀಡಲಾದರೆ ಅದುವೇ ಮುಯ್ಯಿ ನನಗೆ
ಬೇಡಿಕೆ ಏನಿಲ್ಲ ನಿನ್ನೆಲ್ಲ ನೆನಪನ್ನು
ಅಳಿಸಿಬಿಡು ಸಿಕ್ಕಂತೆ ಜೋರು ಮಳೆಗೆ

ನಿನ್ನ ಎರಡಂತಸ್ತು ಎಟುಕಲಾರದು ನೋಡು
ನಾನು ತಳಪಾಯದಲಿ ಹೂತ ಬೇರು
ಆ ಮೊದಲ ಪರಿಚಯವ ಮರೆತು ಹೇಳು
ನಿನ್ನ ಮುಗಿದ ಅಧ್ಯಾಯದಲಿ ನಾನು ಯಾರು?

ನೀ ಸುಟ್ಟ ಹಾಳೆಗಳ ಘಾಟು ತಟ್ಟದೆ ಇರಲಿ
ಎಚ್ಚರಗೊಳ್ಳುವುದು ಸತ್ತ ಸತ್ವ
ಗಾಯಗೊಂಡ ಬೆರಳು ಏನ ಬರೆದರೂ ಸಹಿತ
ಮೂಡಿ ಬರುವುದು ಅಲ್ಲಿ ಒಂದು ತತ್ವ

ಇಟ್ಟ ಹೆಜ್ಜೆಯ ಹಾಗೆ ಹಿಂದಿಡದಿರು 
ಮತ್ತೆ ತಪ್ಪುವುದು ಈ ದೂರದ ಮಾಪನ
ಹತ್ತಿರವಾಗುವ ಪ್ರಯತ್ನಗಳ ಕೊಲ್ಲೋಣ
ಒಪ್ಪಂದ ಮುರಿದರೆ ವ್ಯಥೆ ಉಲ್ಬಣ

ಈ ಮೂರು ದಿನಗಳ ಹೀಗೆ ಕಳೆದುಬಿಡುವ 
ಗುರುತುಗಳ ಮರೆಸೋಕೆ ನೆನ್ನೆಯನು ವ್ಯಯಿಸಿ 
ನೆನ್ನೆಯ ನಷ್ಟಕ್ಕೆ ಪರಿಹಾರವಿಂದು 
ಇಂದಿನ ಅತೃಪ್ತಿಗೆ ಹೆಚ್ಚುವರಿ ನಾಳೆ

ಕದ್ದು ನೋಡು ಒಮ್ಮೆ ಮೆಲ್ಲಗೆ

ಕದ್ದು ನೋಡು ಒಮ್ಮೆ ಮೆಲ್ಲಗೆ 
ಎಚ್ಚರವೇ ಇಲ್ಲದಾಗಿದೆ 
ಸಿಕ್ಕಿದಾಗ ನಿನ್ನ ದಾಳಿಗೆ ಸೋಲೋ ಸಂಭ್ರಮ
ಸ್ವಚ್ಛವಾದ ಈ ಪ್ರೀತಿಯ 
ಇಚ್ಛೆಯಿಂದ ಹಂಚಿಕೊಳ್ಳುವೆ 
ನೀನೇ ಎಲ್ಲದಕ್ಕೂ ಆದಿಯೂ, ನೀನೇ ಅಂತಿಮ 
ಓ~ ಬಿಟ್ಟು ಬಾಳಲಾರೆ ಎನ್ನುವೆ
ನಂಬಿ ನೋಡು ನನ್ನ ಮಾತನು 
ಹೊತ್ತು ಮೀರಿ ಹೋಗೋ ಮುನ್ನವೇ ಒಪ್ಪಿ ನೋಡು ನನ್ನನು 
I love you.. ಹೃದಯಕ್ಕೆ ಬಂತು ಕೋರಿಕೆ  
I love you.. ನಿನದೊಂದೇ ಬೇಡಿಕೆ 

ಮಳೆ ಹನಿ ನೀನಾಗಿ 
ನನ್ನ ನೆನೆಸೋ ವೇಳೆ 
ಸುಂದರ ನೆನಪನ್ನು ನಾ ಗಳಿಸುವೆ  
ಬರೆಯುತ ಹೋದಾಗ 
ನಿನ್ನ ಕುರಿತು ನಾನು    
ಪುಟಗಳು ಮುಗಿದಾಗ ಒದ್ದಾಡುವೆ 
ಕತ್ತಲಲ್ಲಿ ನಿನ್ನ ಕಂಗಳೇ 
ದಾರಿ ತೋರೋ ಬೆಳದಿಂಗಳು 
ಚಿತ್ತದಲ್ಲಿ ಮೂಡಿ ಬಂದರೆ 
ಏರಿದಂತೆ ಅಮಲು 
I love you.. ಹೃದಯಕ್ಕೆ ಬಂತು ಕೋರಿಕೆ  
I love you.. ನಿನದೊಂದೇ ಬೇಡಿಕೆ 

ನೀ ಗೆಜ್ಜೆ ಬೀಳಿಸಿಕೊಂಡೆ

ನೀ ಗೆಜ್ಜೆ ಬೀಳಿಸಿಕೊಂಡೆ

ಕಳ್ಳನಂತೆ ನಾನು ಜೇಬಲ್ಲೆತ್ತಿಟ್ಟುಕೊಂಡೆ
ನೀ ಸಾಗಿ ಹೊಂಟಾಗ ಮುಂದೆ
ಹಿಂದೆ ಹಿಂಬಾಲಿಸೋ ಹೆಜ್ಜೆ ಗುರುತೆಲ್ಲ ನಂದೆ
ಮಾತನಾಡೋ ಕೋಗಿಲೆಯೇ
ಕಾಡುವ ಕನ್ನೈದಿಲೆಯೇ 
ದಾರಿ ತಪ್ಪಿ ಬೇಕಂತ ನಿನ್ನತ್ತ ಬೀಸಿದೆ ತಂಗಾಳಿಯೇ 
ಸೂಜಿ ಕಣ್ಣ ಚುಚ್ಚುತ್ತಲೇ
ಬೆಚ್ಚಿ ಬೀಳೋ ವೈಯ್ಯಾರಿಯೇ
ಏಳು ಬಣ್ಣ ಸೀಳಿ ಬಂದು ನಿನ್ನ ಕೆನ್ನೆಗೆ ಅಂಟಿದೆಯೇ.. 

ಕದ್ದು ನೋಡ ಬೇಡ ಸುಂದರಿ
ಆದೆ ನಿನ್ನ ಕೈಯ್ಯ ಬುಗುರಿ
ಗುನ್ನ ಇಟ್ಟಂತ ಆಯಿತು ಕೋಪಕ್ಕೆ ನಿನ್ನ ಗುರಿ
ಊಟ, ನಿದ್ದೆಗೆಲ್ಲ ಕತ್ತರಿ
ನಿನ್ನ ಕಂಡ ಮೇಲೆ ಅಚ್ಚರಿ
ಸೋಕಿ ಹೋಗೋ ವೇಳೆ ಆದೆ ಚಂದದ ಸೋಗೆ ಗರಿ  
ಉತ್ತರವೇ ಇಲ್ಲದಿರೋ ಪ್ರಶ್ನೆಯಿದು 
ಪ್ರೀತಿಯಲ್ಲಿ ಎಚ್ಚರವು ಯಾಕಿರದು  
ಬರೆಯೋಕೆ ಹೋದೆ ಅಕ್ಷರವೇ ಸಾಲದು... 

ಇಷ್ಟು ಬಾರಿ ಹಾಡಿ ಹೊಗಳಿ
ನೋಡಲಿಲ್ಲ ನೀನು ಹೊರಳಿ
ಬೇರೆ ಏನು ಮಾಡಬೇಕು ಅಂತ ತೋಚದಾಗಿದೆ
ಇಷ್ಟ ಪಟ್ಟು ಇಟ್ಟೆ ನಿನಗೆ
ಒಂದು ತುಂಟ ಮುದ್ದು ಹೆರಸ
ಹೀಗೆ ಒದ್ದಾಡುತಿರುವೆ ಕೂಗೋದಕ್ಕೆ ಆಗದೇ
ಚಿತ್ತಾರವೂ ನಿನ್ನ ರೂಪ ತಾಳುತಿದೆ
ಗುಂಡಿಗೆಯು ಇದ್ದಲ್ಲಿಂದ ಜಾರುತಿದೆ
ಎದುರಾದೆ ನೀನು ಮಾತುಗಳೇ ಬಾರದೇ...

ತಡವಾಗಿಸದೆ ಎದುರಾಗು

ತಡವಾಗಿಸದೆ ಎದುರಾಗು

ಮುಡುಪಾಗಿಸುವೆ ಮನಸನ್ನು
ಅನುಮಾನಿಸದೆ ನೆರವಾಗು
ಅನುವಾದಿಸುತ ಒಲವನ್ನು
ತಲೆದೂಗುವೆನು ಶರಣಾಗಿ
ನೀ ಆಡೋ ಸುಳ್ಳಿಗೂ ಸೋತು
ಕನಸಲ್ಲಿಯೂ ಕೋರುವೆ ನಿನ್ನ
ಹಿಂದಿರುಗಲು ಆತುರವೇನು 

ಮೊದಲಾಗಿದೆ ಆಗಲೇ
ಮುದ ನೀಡುವ ಭಾವನೆ
ಮರುಳಾಗಿ ಜೊತೆ ನೀಡು
ಸರಿ ಹೋಗುವೆ ಸುಮ್ಮನೆ
ಕರೆಯೊಂದನು ನೀಡಲೇ 
ಎದೆಗಪ್ಪುತ ನಿನ್ನನೇ
ಮರುಳಾಗಿ ಜೊತೆ ನೀಡು
ಸರಿ ಹೋಗುವೆ ಸುಮ್ಮನೆ


ಹೊರ ಬಾರದ ಮಾತು
ಕಣ್ಣಲ್ಲಿಯೇ ಕೂತು
ಏನೇನೋ ‍ನುಡಿದಂತೆ ನೂರು ವಿಚಾರ
ಹೃದಯ ತುಂಬೆಲ್ಲ
ನೀನೇ ಇರುವಂತೆ
ನೀ ನಡೆಸು ನಾ‌ ನಡೆವೆ ನಿನ್ನ ಪ್ರಕಾರ
ಸ್ವೀಕರಿಸು ಒಲವ ಮನವಿ
ಮಿಡುಕಾಡಿಹೆನು ಬಿಡದೇ
ಕಾದಿರುವೆ ಕೈ ಚಾಚಿ ಭಯದಲ್ಲಿ

ಎದೆ ಬಿರಿಯಿತು ಬಾಣ
ಹೋದಂತಿದೆ ಪ್ರಾಣ
ನೀ ಹಾಗೆ ಮುನಿಸಲ್ಲಿ ನೋಡಲು ನನ್ನನ್ನು
ಬಿಳಿ ಹಾಳೆಯ ಮೇಲೆ
ಅರೆ ಬೆಂದಿರೋ ಸಾಲು
ನೀ ಮುಂದುವರಿಸು ನಾ ಮರೆಯುವೆ ಸಾಲನ್ನು
ಸೋಜಿಗವೇ ನೀ ಆವರಿಸು
ಮಿತಿ ಮೀರಿದ ಪ್ರೀತಿಯಲಿ
ನಿಂತರೆ ನಿಲ್ಲಲಿ ಉಸಿರು ಮಡಿಲಲ್ಲಿ..

ಬೆನ್ನಿಗಂಟಿದ ಅಪ್ಪನ ಬೆರಳಚ್ಚು

ಕಂದ 

ಬೆನ್ನಿಗಂಟಿದ ಅಪ್ಪನ ಬೆರಳಚ್ಚು 
ಕ್ಷಮೆ ಕೋರಿದೆ ನೋಡು 

ಹೆಮ್ಮರದ ಅಡಿಯಲ್ಲಿ 
ಗೋಲಿ ಆಟದ ವೇಳೆ 
ಪೆಟ್ಟು ಬಿದ್ದರೆ  ಹಾಗೆ ಒದರಬಾರದಿತ್ತು  
ನಿನ್ನ ಕಣ್ಣಲಿ ಬಿದ್ದ 
ನನ್ನ ಅಂಶದ ಧೂಳು 
ಹೃದಯವ ಅಷ್ಟಾಗಿ ತೋಯಿಸಬಾರದಿತ್ತು   

ಅಷ್ಟಕ್ಕೂ ನಿನ್ನ ಕೋಪ 
ನಿನ್ನ ಹಠ, ತಗಾದೆಗಳೆಲ್ಲೆ  
ನನ್ನ ಪಡಿನೆರಳು;
ಎಲ್ಲ ಮುಗಿದ ಮೇಲೆ 
ಏನೂ ಆಗದ ಹಾಗೆ ಎದೆಗಪ್ಪುವೆ 
ಹಾಗೆ ನನ್ನಿಂದಾಗುವುದಾ ಹೇಳು?!

ನಿದ್ದೆಯಲಿ ಹೊರಳಿ
ಮುದ್ದು ಹಸ್ತವ ಕೆನ್ನೆಗಿಟ್ಟು  
ಬಿದ್ದ ಕನಸಿನ ಲೆಕ್ಕ 
ನೀಡುವಂತಿದ್ದವು ನಿನ್ನ ಬೆರಳು,
ನಾ ಲೆಕ್ಕ ಹಾಕುತ್ತಲೇ ತಪ್ಪುತ್ತಾ ಹೋದೆ 

ನೀ ನನ್ನವ ಎನ್ನುವ ಅಮಲು 
ನಿಧಾನಕೆ ಇಳಿಯುತ್ತಿದ್ದಂತೆ 
ಲೋಕ ನಿನ್ನನ್ನು ನೀನಿರುವಂತೆ   
ಎಷ್ಟು ಮುಗ್ಧವಾಗಿ ಸ್ವೀಕರಿಸಿದೆ
ಎಂಬುದು ಅರಿವಾಯ್ತು ನೋಡು;
ನೀ ನಿನಗಾಗಿ ಮಾತ್ರ ಬದುಕು 
ನಿನ್ನೊಳಗೆ ಸರ್ವಸ್ವವೂ ಅಡಗಿದಂತೆ 

ದೇವರಲ್ಲದೆ ಮತ್ತೇನು ನೀನು 
ಹೆಗಲೇರಿ ಕುಣಿಯುತ್ತ 
ನನ್ನನ್ನೂ ಕುಣಿಸುವೆ 
ಸೋಜಿಗವೆಂಬಂತೆ  
ನೋಡು ನೋಡುತಲೇ ಶಿಖರದ 
ತುತ್ತ ತುದಿ ಜಯಿಸಿ  
ಮತ್ತೆ ಎರಗಿ ಬಂದು ಮಡಿಲ ಮಗುವಾಗುವೆ 

ನೋಡು 
ನನ್ನ ಬೆನಿಗೂ ಬಿಗಿದುಕೊಂಡೆ 
ಅಲ್ಲಿಗೆ ಎಲ್ಲ ಮಾಫಿಯಾಗಲಿಲ್ಲ 
ನಿನ್ನ ಪೆಟ್ಟು

ಹೇಳಿಕೊಡಬೇಡ ಪ್ರೀತಿ ಮಾಡುವುದನ್ನು

ಹೇಳಿಕೊಡಬೇಡ ಪ್ರೀತಿ ಮಾಡುವುದನ್ನು 

ಮೂಡಲಿ ಅದಾಗಿಯೇ ಚಿಗುರಿನಿಂದ 
ಸಾಧ್ಯವಾದರೆ ಹಬ್ಬುವಾಗ ನೀ ಮರವಾಗು 
ಸಿಂಗರಿಸುವೆ ನಿನ್ನ ಹೂ ಅರಳಿಸಿ 

ಕಚ್ಚಿ ಕೊಡಬೇಡ ಕಿತ್ತ ಹಣ್ಣನು ಹಾಗೆ 
ನಿನ್ನ ಅಧರಾಮೃತವ ಬೆರೆಸಿ ಅದಕೆ 
ಸವಿದು ಬಿಡುವೆ ಹಣ್ಣ ಸಹಜ ರುಚಿಯ 
ಪರಮ ಸುಖಕೆ ಇಡುತ ಅಲ್ಪ ವಿರಾಮ 

ಶಪಿಸದಿರು ಮಳೆಯನ್ನು ಒದ್ದೆ ಕೂದಲ ಒದರಿ 
ಮುದ್ದೆ ಸೆರಗಂಚಿನಲಿ ಮುಖ ಸವರುತ 
ಬರಗಾಲಕೆ ತತ್ತರಿಸುವುದು ಭೂ ಒಡಲು
ಶಾಂತವಾಗಲಿ ಕೋಪ ತುಸು ಮೆಲ್ಲಗೆ 

ಕಣ್ಣೀರ ಇಡದಿರು ತೀಕ್ಷ ನುಡಿ ಆಡುತ
ಬಾಣದಂತೆ ಸೀಳಿಬಿಟ್ಟೀತು ಎದೆಯನ್ನು 
ಹೃದಯವು ಈಗಷ್ಟೇ ಪೌರ್ಣಿಮೆಯ ಕಂಡಿದೆ 
ಆಗಲೇ ಮೂಡದಿರಲಿ ಕಗ್ಗತ್ತಲು 

ಅಪ್ಪುತ ಬೆನ್ನಿಗೆ ಕಲಿಸಿದೆ ಅಕ್ಷರಮಾಲೆ
ಉಗುರುಗಳ ಗೀರಿ, ಬಳಸಿ, ಕೊಂಬನು ಕೊಟ್ಟು
ಬೆನ್ನಿಗೆ ಬೆನ್ನೊರಗಿಸಿ ಪಾಠ ಮಾಡದಿರು
ಕಣ್ಣೊಳಗೆ ಕಣ್ಣಿಡು ಹತ್ತುವುದು ತಲೆಗೆ

ಬಿಂದಿಗೆಯ ಹೊತ್ತು ತಾ ಮೇಲೆತ್ತುವ
ಬಾವಿಗೆ ಬಿದ್ದ ಚಂದ್ರನ ತುಂಡನು  

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...