Friday, 31 May 2013

ಪ್ಲೀಸ್ ಬೈಬೇಡ್ರಿ















ಮಾತಿನ ಚಾಟಿಗಿಂತ,
ಮೌನದ ಸವರು ಆಘಾತಕಾರಿ
ಚುಚ್ಚು ಮುಳ್ಳಿಗಿಂತಲೂ ಭಯಾನಕ,
ಚುಚ್ಚುವುದೆಂಬ ಗಾಬರಿ
ಹೂವಿನಂತೆ ತಲೆಯೇರಿ
ಭಾರವಾಯ್ತು ಒಲವೆಂಬ ಮಕ್ಕರಿ
ನನ್ನ ಪಾಡು ನನ್ನದು
ನನ್ನ ಗೋಳಿಗೆ ನೀವ್ಯಾಕೆ ಬಿಕ್ಕಿರಿ ?!!
ಅದೇನು ಯೋಚಿಸುತ್ತ ಕೂತಿರಿ
ಬೇಗನೆ ಎಲೆ ಹಾಕಿರಿ
ತಡವಾಗಿದೆ ಮನೆಯಲ್ಲಿ
ಕಾಯುತಿಹಳು ಕಿನ್ನರಿ
ಸೋತ ಮುಸುಡಿ ಕಂಡೊಡನೆ
ಊಟಕ್ಕೆ ಹಾಕುವಳು ಕತ್ತರಿ
ಜೇಬು ಜಣಗುಡಲು ನಕ್ಕು
ಸತ್ಕರಿಸುವ ಬಿತ್ತರಿ
ನೆನೆಯ ಬೇಕು ಸಾಯೋ ತನ್ಕ
ಆ ಮಧುರ ರಾತಿರಿ
ನಿಮ್ಮ ಆಲೋಚನೆ ಸರಿಯಿಲ್ಲ
ದಯವಿಟ್ಟು ತಿದ್ದುಕೊಳ್ಳಿರಿ
ಜೂಜು-ಮೋಜು ನಮಗೆ ಮಾತ್ರ
ಹೆಂಗಸರ ಕೇಳಿ ನೋಡಿರಿ
ಕೈಗೆ ಕೊಂಡ ಪೊರಕೆ ಏಟು
ಬೀಳದಂತೆ ಓಡಿರಿ
ಇಷ್ಟಕ್ಕೆ ನಮ್ಮ ಸ್ನೇಹ
ಮುಗಿಯಿತೆಂದರ್ಹೇಗೆ ರೀ
ಮತ್ತೊಂದಿನ ಮತ್ತೊಂದಾಟಕೆ
ಎಲ್ಲ ಸೇರಿರಿ
ಸೋತು ಗೆದ್ದು, ಗೆದ್ದು ಸೋತು
ಸಮತೋಲನ ಕಾಣಿರಿ
ಎಲ್ಲರೂ ಸೇರಿ ಈ ಗೀತೆಗೆ-
- ಜೈ ಅನ್ನಿರಿ
ಆ ಒಂದ್ಸಾರಿ, ಆ ಎರ್ಡ್ ಸಾರಿ, ಆ ಮೂರ್ ಸಾರಿ..............


                                                  --ರತ್ನಸುತ



Monday, 27 May 2013

ರಾಧಾ ಮಾಧವ


























ಮಾಧವನ  ಉಸಿರಲ್ಲಿ ಬೆರೆತಳಾ ರಾಧ
ಕೊಳಲಿಂದ ಹೊಮ್ಮಿಸುತ ಶೃಂಗಾರ ನಾದ
ಹೂ ಬನದ ಅಂಗಳದಿ ಮಾಧುರ್ಯ ಗಾನ
ಚಿಟ್ಟೆ, ಗಿಣಿ, ನವಿಲುಗಳಿಗಲ್ಲಿ ನಿರ್ಬಂಧ

ಆಗಸದ ತೆರೆ ಎಳೆದ ಸಾಲು ಮೋಡಗಳು
ಘರ್ಷಣೆಯ ಕಾರಣಕೆ ಮಿಂಚು ಮೂಡಿರಲು
ಬೆಚ್ಚಿದಳು ರಾಧೆ, ಕಂಪಿಸಿತು ತನುವು
ಗೆಜ್ಜೆ ಝಲ್ಲೆಂದೊಡನೆ ಮಾಧವಗೆ ದಣಿವು

ರೆಪ್ಪೆ ಬಿಡದೇ ಬಡಿದು ನಾಚಿಹುದು ಮಾಧವನ -
- ನೇರ ಮಾದಕ ನೋಟವ ಹಾಗೆ ತಡೆದು
ಸುರಿದ ಮಳೆ ಚಳಿ ಹಿಡಿಸಿದರೂ ನಡುಗದ ಅಧರ
ನಡುಗುತಿದೆ ಇನಿಯನ ಆಲಿಂಗನವ ಪಡೆದು

ಮೊಗ್ಗಿಗೆ ಹಿಗ್ಗಿ ಹೂವಾಗುವ ಮನಭಾರ
ಬಳ್ಳಿಗೆ ಹೂವುಗಳ ಹೊತ್ತು ಮೈಭಾರ
ಕರಗಿದ ಮುಗಿಲ ಮರೆ ನೀಲಿಗೆ ಕಂಡಿತು
ಮದನ ಲೀಲೆಯ ಮೋಹಕ ಪ್ರಸಾರ

ಬೆವರಿಳಿಕೆಯಲಿ ಹಗುರಗೊಂಡಿತು ಮೋಹ
ಶಮನಗೊಂಡಿರಲು ವದನದೊಳ ಜ್ವಾಲೆ
ಒಂದೆಡೆ ಸಂವಾದ ನಡೆಸುತ್ತಿತ್ತು ಮೌನ
ಸದ್ದಿನಲೂ ನಿರ್ಲಕ್ಷಿತ ಮೇಘ ಮಾಲೆ ........

(ಈ ಕವನದಲ್ಲಿ ಯಾವುದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ನನ್ನನ್ನು ಕ್ಷಮಿಸಿ)

                                         --ರತ್ನಸುತ

Saturday, 25 May 2013

"ಇದೊಂದು ಪ್ರೇಮ ಕಾವ್ಯ??"




















ಆಕೆಯ ಮೆಚ್ಚಿದ್ದು ಬರೇ ಕಣ್ಣುಗಳ ನೋಡಿ
ಅರಿತುಕೊಂಡದ್ದು ಮೌನ ಧೀರ್ಘ ಚರ್ಚೆ ಮಾಡಿ
ಇದ್ದಲ್ಲೇ ಹಿಂಬಾಲಿಸುತಿತ್ತವಳ ಈ ಹೃದಯ
ಮುಂದೆನಾಗಿರಬಹುದು?? ನೀವೇ ಊಹೆ ಮಾಡಿ!!!

ಎದುರಾಗುವ ಅನಿರೀಕ್ಷಿತ ಕಂಪನದ ಗಳಿಗೆ
ಇಬ್ಬರ ಎದೆಯಲ್ಲೂ ಒಂದೇ ಧಾಟಿಯ ಬಡಿಗೆ
ಅಸಹಜತೆಯ ಸಹಜತನ ಸ್ಪಷ್ಟ ಗೋಚರಿಸಿದರೂ
ಒಪ್ಪಲು ನಕಾರ ಎಳೆದ ಪ್ರಣಯ ಬೀಸಣಿಗೆ

ಭಾವ ಬರೆಯಲಂತು ರಾಶಿ-ರಾಶಿ ಕರೆಯೋಲೆಗಳ
ತಿಳಿಯದೇಕೆ ಅದಕೆ? ಆಕೆ ನೆಲೆಸಿರುವಳು ಇಲ್ಲೇ
ಆಕೆಯ ನೋಯಿಸಿದೆನೆಂಬ ಸಂಶಯದ ಚಿವುಟು
ಕಾಡಿದ ವಿಸ್ತಾರವನ್ನು ನಾನು ಮಾತ್ರ ಬಲ್ಲೆ

ಅದೆಷ್ಟು ಬಾರಿ ಎಡವಿಹೆನೋ ಆಕೆಯ ಗುಂಗಲ್ಲಿ
ಆದ ನೋವು ಅವಳ ನೆನೆಪ ಸವಿಯ ಮುಟ್ಟಲಾದೀತೇ?!!
ದಾಹವೆಂದು ಅಂಗಲಾಚಿ ಬೊಗಸೆ ಹಿಡಿದ ತಿರುಕ ನಾ
ಅಮೃತ ಪಾನವ ನೀಡಿದ ಆಕೆ ಪ್ರೇಮ ದೇವತೆ

ನಿವೇದಿಸಿಕೊಳ್ಳಲು ಆಗದ ಈ ಒದ್ದಾಟವೇ
ಜಾತಕದಲಿ ಗೀಚಲಾದ ಮಹೋನ್ನತ ಸಾಧನೆ
ಸಾಧನೆಯ ಹಾದಿಯೇ ಇಷ್ಟು ರೋಮಾಂಚಕ
ಇನ್ನೆಷ್ಟು ರಮಿಸಬಹುದು ಆ ಪ್ರೇಮ ನಿವೇದನೆ

ನಾಚಿದಕ್ಷರಗಳ ಗೀಚುತ ಮುಂದ್ಹರಿಸುತಲಿ
ಕೊನೆಗೆ ಅನಿಸತೊಡಗಿತು, "ಇದೊಂದು ಪ್ರೇಮ ಕಾವ್ಯ??"
ನಾನೇ ಬರೆದೆನೇ? ಎಂಬ ಗೊಂದಲವಿದೆ ನನ್ನೊಳಗೆ
ಆಕೆ ಬರೆಸಿರಬಹುದೆನ್ನುವುದಾದರೆ ಸತ್ಯ...........


                                                --ರತ್ನಸುತ

Friday, 24 May 2013

ಕರ್ನಾಟಕದಲ್ಲಿಡ್ಕೊಂಡು ಒಬ್ಬ ಬಂಗಾಲಿ ತಮಿಳ್ ಕಲ್ತ
ಇಲ್ಲೇ ಹುಟ್ಟಿ ಇಲ್ಲೇ ಬೆಳ್ದೋನ್ ಕನ್ನಡ ಇರೋದನ್ನೇ ಮಾರ್ತ
ಮಾತೃಭಾಷೆ ಬಿಟ್ಟು ಒಬ್ಬ ಇಂಗ್ಲೀಷ್ ಮಾತಾಡ್ತಾ ಸತ್ತ
ಎಲ್ಲಾ ಕೈಮೀರ್ಹೋದ್ಮೇಲೆ  ನನ್ನತೌನೊಬ್ಬ ಕಣ್ಬಿಟ್ಟ


ಯಾರಾದ್ರು ಇನ್ನೂ ಕಣ್ಮುಚ್ಚಿದ್ದೀರಾ ಸ್ವಾಮೀ???????????????

                                                     --ರತ್ನಸುತ





Thursday, 23 May 2013

ಮಳೆ ನಿಂತು ಹೋದಮೇಲೆ















ಮಳೆ ನಿಂತ ಮರುಗಳಿಗೆ
ಇಳೆಗೆ ಚೂರು ಬರವಸೆಯ-
-ಒದಗಿಸಿತ್ತು ಹನಿಯ ಕಾಯ್ದಿರಿಸಿದ ಎಲೆಯೊಂದು

ಬಿದ್ದು ತಣ್ಣಗಾಗಿದ್ದ
ನಿಂತ ನೀರಿನಲೆಯ ಬಲೆ
ಸೆರೆ ಹಿಡಿಯಿತು ಬಿದ್ದ ಹನಿಯ ಸಾಲಿಗೆ ಮತ್ತೊಂದು !!!


                                                --ರತ್ನಸುತ


Wednesday, 22 May 2013

ಸಾಕು ತಾಯಿ (ಸಾಲದಾಕೆ)



























ಹೊತ್ತವಳು, ಹೆತ್ತವಳು, ಉಣಿಸಿದವಳಿವಳಲ್ಲಾ
ಬೆಚ್ಚಿದ ಬೆರಳನ್ನು ಈವರೆಗೂ ಹಿಡಿದಾಕೆ
ತಾಯಿಗೂ ಎತ್ತರದ ಸ್ತಾನವೊಂದಿರುವುದಾದರೆ -
- ಈಕೆಗೆ ಮೀಸಲಿಡಬಾರದೇಕೆ ?

ಅಮ್ಮಳಲ್ಲವಾದರೂ "ಅಮ್ಮ" ಎಂದು ಕರೆಸಿಕೊಂಡಾಕೆ
ಇದ್ದ ಚಾಚಿನಷ್ಟು ಗುಡಿಸಲೊಳಗೆ ಜಾಗ ಕೊಟ್ಟು
ಗೂಡಿನ ತುಂಬು ಗುಬ್ಬಿಗಳಲಿ ನಾನು ಮರಿ ಗುಬ್ಬಿ
ಅಳತೆ ಇಡದೆ ಸಲುಹಿದಾಕೆ ಸಮಾನ ಗುಟುಕನಿಟ್ಟು

ಸಹಿಸಿದವಳು ತುಂಟಾಟವ, ತನ್ನವನಾನೆಂದುಕೊಂಡು
ನೋವ ಮೂಲ ಬಲ್ಲವಳು ಜೊತೆಗೆ ತಾ ನೊಂದು
ದೂರಿದವಳಲ್ಲ ನನ್ನ ಕುರಿತು ಯಾರ ಬಳಿಯೂ
ಈಕೆಯ ಸೋಕಿನ ನೆರಳಿದೆ ಪ್ರತಿ ಕಥೆಯಲೊಂದು

ಇನ್ನೂ ಎಳೆದವಳೇ, ಒಂಟಿ ಬುಜಡಿ ಹೊತ್ತ ನೇಗಿಲ
ಅಗಲಿದವರು ಕೊಳೆತ ಮಣ್ಣಿನಲ್ಲಿ ನಲಿಯುತಿರಲು
ಬೇಸರದ ಅಂಚಿಗೆ ಒಂದಿಷ್ಟು ನಗೆಯ ಲೇಪ
ಇರುವ ನಾಲ್ಕು ದಿನದ ಆಟ ಗೆಲುವಿನಲ್ಲಿ ಮುಗಿಸಲು

ಅನುಭವದಕ್ಷತೆಕಾಳಿನ ಆಶಿರ್ವಚನದ ನುಡಿ
ಕಿರಿದಾಗಿಸಿತೆನ್ನ ಬೆಳೆದರೂ ಈಕೆಯ ಮೀರಿ
ಯಾರಲ್ಲಿಯೂ ಬೇಡದ ಸ್ವಾಭಿಮಾನಿ ದೇವತೆ
ಕೊಡುವುದಿವಳ ಹುಟ್ಟು ಗುಣ, ನಾ ಸಾಗುವೆ ಕೋರಿ

ಗರ್ಭಗುಡಿಯ ದೇವಾರಾಧಕ ಧರ್ಮವ ತಿಳಿಸಿದಾಕೆ
ಮೈ ಮನಸನು ಶುಚಿಗೊಳಿಸಿದ ಪವನ ಕಲ್ಯಾಣಿ
ಕರುಳ ಕೂಗು, ಸ್ವಾರ್ತದಾಳ ಇನ್ನೆಷ್ಟೇ ಇರಲಿ
ಜನ್ಮ ನೀಡಿದಾಕೆ ಸಾಕಿದಾಕೆಯ ಅಭಿಮಾನಿ.......

                           
                                        --ರತ್ನಸುತ



Tuesday, 21 May 2013

ಚಿಟ್ಟೆ














ಚಿಟ್ಟೆ ಸತ್ತು ಬಿತ್ತು 
ದುಂಬಿಗಳ ಹಾವಳಿಗೆ 
ಬಿತ್ತು ಚಿಟ್ಟೆ ಸತ್ತು 

ಅಮಲೇರಿಸುವ  ಮಕರಂದವಿತ್ತು 
ದುಂಬಿಗೆ ಆಸೆ ಹೆಚ್ಚಿತ್ತು 
ಚಿಟ್ಟೆಗೆ ಚಟ್ಟ ಕಟ್ಟಿತ್ತು 

ರೆಕ್ಕೆಯ ಬಣ್ಣ ಮಾಸಿತ್ತು
ಯಾರದ್ದೋ ಹೊಸಕಿನ  ಕೈಗೆ ಅಂಟಿತ್ತು 
ಬಣ್ಣ ತೊರೆದ ಬೆತ್ತಲ ದೇಹ ಹೆಣವಾಗಿತ್ತು 

ಚಿಟ್ಟೆ ಮುದ್ದಾಗಿತ್ತು 
ನೀಡಬೇಕಿತ್ತು ನಾ ಒಂದು ಮುತ್ತು 
ಜೀವ ಮರಳಿಸೋ ಶಕ್ತಿ ಮುತ್ತಿನ ತುತ್ತಿಗಿರಬೇಕಿತ್ತು 

ಹೂವು ದುಂಬಿಗಳ ತಡೆಯಬೇಕಿತ್ತು 
ಚಿಟ್ಟೆಗಳು ಚಿರಕಾಲ ಉಳಿಯಬೇಕಿತ್ತು 
ಹೇಗಾದರೂ ನಾನು ಹೂವಾಗಿ ಚಿಟ್ಟೆಗಳ ಮಡಿಲಾಗಬೇಕಿತ್ತು............ 

                                                                  --ರತ್ನಸುತ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...