ಎಡವಟ್ಟಿಗೊಂದು ಕಾರಣ


ರಾತ್ರಿ ಬಿದ್ದ ಅರೆ-ಬರೆ ಕನಸಿನ
ಜಿಡ್ಡು ಬಿಡದ ಸೊಗಡು
ಕಣ್ಣುಗಳ ಉದ್ದಗಲಕ್ಕೂ ಹರಡಿದೆ,
ಬಿಟ್ಟ ಕಣ್ಣುಗಳಲ್ಲಿನ್ನೂ ಅದೇ ಮಂಪರು


ಅರ್ಧ ಲೀಟರ್ ನಂದಿನಿ ಹಾಲಿಗೆ
ಇನ್ನರ್ಧ ಲೀಟರ್ ನೀರು ಬೆರೆಸಿ
ಕಾಫಿ ಮಾಡಿಕೊಂಡು, ಮೆಲ್ಲಗೆ ಹೀರುತ್ತ
ಒಂದೊಂದನ್ನೇ ಪರಾಮರ್ಶಿಸಿಕೊಳ್ಳುತ್ತಿದ್ದೆ

ಅಲ್ಲಿ ನಾನು ರಾಜ
ರಾಣಿಯಿಲ್ಲದರಮನೆಯಲ್ಲಿ
ಮಂಕಾದ ಸಿರಿ ಸಂಪತ್ತು;
ರಾತ್ರಿಗಳು ವ್ಯರ್ಥ
,
ಹಗಲುಗಳು ಅಸಹನೀಯ!!


ಸ್ವಯಂವರಗಳಲ್ಲಿ
ಕರಗತವಾದ ಅವ್ಯಾವೂ ಕೆಲಸಕ್ಕೆ ಬಾರದೆ
ಪ್ರತಿ ಬಾರಿಯೂ ಗುರಿ ತಪ್ಪಿ
ಮದುವೆ ಊಟ ತಪ್ಪಿಸದೆ
ರಾಜ್ಯಕ್ಕೆ ಹಿಂದಿರುಗುವಾಗ
ಕುದುರೆಗಷ್ಟೇ ತಿಳಿದ ಕಾತರ
ಸಖಿಯರ ಕಣ್ಣಿಗಷ್ಟೇ ಕಂಡ ಕಂಬನಿ

ಇಷ್ಟಾಗಿಯೂ ಜೈಕಾರದಲ್ಲಿ ಕಿಚ್ಚಿಷ್ಟೂ
ಇಳಿಮುಖ ಕಾಣದೆ ಭಾವುಕಗೊಂಡೆ
"
ಕಾದಿದ್ದಾಳೆ ಋಣವುಳ್ಳವಳು
ನಿಮ್ಮಷ್ಟೇ ಉತ್ಸುಕತೆಯಿಂದ
ಚಿಂತಿಸಿ ಮನ ನೋಯಿಸದಿರಿ"
ಎಂಬ ಸಂತ್ವನದ ನುಡಿಗಳು


ವೈರಿ ಪಡೆಯ ಖುಷಿಗೆ
ಇನ್ನೂ ಜೇನು ಸುರಿದಷ್ಟು ತೃಪ್ತಿ
ಹೆತ್ತವರು ತೋರ್ಪಡಿಸದ ನೋವು
ಗೆಳೆಯರ ಮತ್ತೆರಡು ಹಿತವಚನ

ನನ್ನ ಗೋಳನ್ನು ಹೇಳಿಕೊಳ್ಳಲಾಗದೆ
ಒದ್ದಾಡಿ ಹೋಗಿದ್ದೆ
ಕಾರಣ ನಂತರ ತಿಳಿಯಿತು
ಬಿಸಿ ಕಾಫಿಯಿಂದ ನಾಲಗೆ ಸುಟ್ಟುಕೊಂಡಿದ್ದೆ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩