ಹೋಳಿ- ಕರಾಳ ನೆನಪು

ಎಲ್ಲೆಲ್ಲೂ ಬಣ್ಣ 
ಹೋಳಿ ಹಬ್ಬದ ಸಂಭ್ರಮ,
ಗುರುತಿಸಲಾಗದ ಚಹರೆಗಳು
ಹಿಡಿಯಲ್ಲಿ ಪುಡಿ ಹಿಡಿದು
ಬೀದಿ ಬೀದಿ ಅಲೆವಾಗ
ನಾ ಇದ್ದಲ್ಲೇ ಅವಿತುಕೊಳ್ಳುತ್ತಿದ್ದೆ
ದಶಕದ ಹಿಂದೆ ನಾನೂ
ಆಚರಿಸಿದ್ದೆ ಕೊನೆಯದಾಗಿ ಹೋಳಿ.
ಹಿಂದೆಂದಿಗಿಂತಲೂ ಹುರುಪಿನಲಿ
ಸಿಕ್ಕ ಸಿಕ್ಕವರನ್ನ ಅಡ್ಡಗಟ್ಟಿ 
ಬಣ್ಣ ತೂರಿದಾಗ ತಟ್ಟಿದ ಶಾಪ
ಸಂಜೆಯಾಗುತ್ತಿದ್ದಂತೆ ಪ್ರಬಲವಾಗಿ
ಅಟ್ಟಹಾಸ ಮೆರೆಯಿತು
ದಂಡೆತ್ತಿದ ಶತ್ರು ಪಡೆ 
ಶ್ವಾಸಕೋಶವನ್ನೇ ಆಕ್ರಮಿಸಿ
ನಿಸ್ಸಹಾಯ ಉಸಿರ ಸೆರೆ ಹಿಡಿದು
ಇಷ್ಟಿಷ್ಟೇ, ಇಷ್ಟಿಷ್ಟೇ ಬಿಟ್ಟು ಕೊಟ್ಟಾಗ
ಕಣ್ಣನು ರೆಪ್ಪೆ ನಿಧಾನಕ್ಕೆ ಹೊದ್ದು
ಮತ್ತೆ ತೆರೆಯುವ ಹೊತ್ತಿಗೆ
ಆಸ್ಪತ್ರೆಯ ಪಲ್ಲಂಗದ ಪಕ್ಕ
ಹಣ್ಣು, ಬ್ರೆಡ್ಡು, ಮಾತ್ರೆ ಚೀಟಿ
ವಾಕರಿಕೆಯಲ್ಲೂ ಬಣ್ಣದ ಚೆಲ್ಲಾಟ
ಕೆಂಪು, ನೀಲಿ, ಹಸಿರು
ಮೂತಿಗೆ ಕಟ್ಟಿದ ಮಾಸ್ಕಿನ ಮೂಲಕ
ಔಷಧ ಮಿಶ್ರಿತ ಉಸಿರು
ಕೈಗಂಟಿಡ ಕಲೆ ಬೇಕಾಯಿತು ಕಳೆಯಲು
ಹತ್ತತ್ತಿರ ವಾರದ ಅವಧಿ
ಅಲರ್ಜಿ ಅಂದಿಗೆ ಮೆಟ್ಟಿತು ಒಡಲನು
ಇಂದಿಗೂ ಕಾಡುವ ಭೂತವಾಗಿ
ಬಣ್ಣದ ಪಾಲಿಗೆ ಬೇಡವಾದೆ
ನನ್ನ ಪಾಲಿಗೆ ತಾ ಬೇಡವಾಗಿ
ಹೋಳಿಯೆಂದರೆ ಇಷ್ಟೇ ನೆನಪು
ನೆನೆದರೂ ಉಸಿರುಗಟ್ಟುವುದು
ಇನ್ಹೇಲರ್ ಗಂಟನು ಬಿಡಿಸುವುದು!!

                                     -- ರತ್ನಸುತ

Comments

  1. ಭಯಂಕರ ರಾಸಾಯನಿಕಗಳ ಗುಲಾಲ್, ಸಿಲ್ವರ್ ಪೈಂಟ್ ಮತ್ತು ಕೋಳಿ ಮೊಟ್ಟೆಗಳಿಂದ ಹೋಲಿಯ ಸಂತೋಷವನ್ನೇ ಅಳಸಿಬಿಡುತ್ತಾರೆ.
    ಮನಸು ಕಲುಕಿದ ವಾಸ್ತವ ಚಿತ್ರಣ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩