ನೆನ್ನೆ, ಇಂದು, ನಾಳೆ

ಒಂದೇ ನಾವೆಯಲಿ ನದಿ ದಾಟುತ್ತಿದ್ದ
ಹುಲಿ ಮತ್ತು ಕುರಿಗೆ ಬಗೆ ಬಗೆಯ ಚಿಂತೆ
ನಾವಿಕನಿಗಂತೂ ಅದರಾಚೆಗಿನ ಚಿಂತೆ

ಕುರಿಗೆ ಹುಲಿಯಿಂದ ತಪ್ಪಿಸಿಕೊಳ್ಳುವ
ಇಂದಿನ ಚಿಂತೆ
ಹುಲಿಗೆ ಕುರಿಯ ನುಂಗಿದರೆ
ನಾಳೆಗೇನೆಂಬ ಚಿಂತೆ

ನಾವಿಕನಿಗೆ ಕಳೆದ ನೆನ್ನೆಗಳ
ನೆನಪುಗಳ ಚಿಂತೆ

ಎಲ್ಲವನ್ನೂ ಗಮನಿಸುತ್ತ
ಸುಳಿಯೊಂದು ನಕ್ಕು ಸುರುಳುತ್ತದೆ
ನಾವೆ ಅದಕೆ ಸಿಲುಕಿದಾಗ
ಕ್ಷಣ ತಮ್ತಮ್ಮ ಚಿಂತೆ ಮರೆತು
ಮೂವರೂ ಕೂಡುತ್ತಾರೆ
ಒಬ್ಬರ ಕಣ್ಣ ಮತ್ತೊಬ್ಬರು ದಿಟ್ಟಿಸುತ್ತ

ಭಯವೊಂದು ಮೂವರನ್ನೂ ಆಕ್ರಮಿಸುತ್ತದೆ
ಕ್ಷಣದ ಉಳಿವಿನ ಬಗ್ಗೆ ಎಚ್ಚರಿಸುತ್ತ;
ನೋಡು ನೋಡುತ್ತಿದ್ದಂತೆ ನಾವೆ ಮುಳುಗಿ

ಮೂವರೂ ಜಲ ಸಮಾಧಿಯಾಗುತ್ತಾರೆ

ನೆನ್ನೆಗಳು ನಕ್ಷತ್ರಗಳಾಗಿ
ಇಂದು ತೀರದ ಮರಳಾಗಿ
ನಾಳೆಗಳು ಕಿನಾರೆಯ ಮೌನವಾಗಿ
ಗೋಚರಿಸತೊಡಗುತ್ತವೆ

ಹುಣ್ಣಿಮೆ ಬೆಳಕು
ನಸುಕನು ಸೀಳಿ ಮಿಸುಕುವ ವೇಳೆ
ತಳಮಳವಿಲ್ಲದ ತಳದಿಂದ ಹಗುರಾಗಿ
ಒಬ್ಬೊಬ್ಬರಾಗಿ ಮೇಲೆ ತೇಲುತ್ತ
ಅಲೆಯ ಹೊಡೆತಕ್ಕೆ ದಡ ಸೇರುತ್ತಾರೆ
ನೆನ್ನೆ, ಇಂದು, ನಾಳೆಗಳ ಸಾಕ್ಷಿಯಾಗಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩