Friday, 20 February 2015

ಸೋಲೇ ಗೆಲುವು

ನೇರ, ನೇರ ಕಣ್ಣಿಟ್ಟು
ಯಾರು ಸೋಲುವರೆಂಬ ಪಂದ್ಯದಲ್ಲಿ
ಮೊದಲು ಕಣ್ಣು ಮಿಟುಕಿಸಿದವ ನಾನೇ;
ನೀನು ಗೆದ್ದೆ, ನಾನು ಸೋತೆ!!


ನೀ ನಿನ್ನ ಗೆಲುವಿಗಿಂತ
ನನ್ನ ಸೋಲನ್ನೇ ಆಚರಿಸುವಾಗ
ಜೀವನ ಪೂರ್ತಿ ಸೋಲುವಾಸೆ
ಅದು ನೀ ಗೆದ್ದರಷ್ಟೇ!!

ನಿನ್ನ ಸೋಲಿಸಿದ ಗಳಿಗೆಯ
ದಾಖಲಿಸಿದ ಪುರಾತನ ಪುರಾವೆಯ
ಅದೆಷ್ಟು ಬಾರಿ ಹೊರಳಿ-ಹೊರಳಿ ನೋಡಿಹೆನೋ
ಲೆಕ್ಕವೇ ಇಲ್ಲ;
ಅದೊಂದು ಭಾವುಕ ಕ್ಷಣ!!


ಈಗಲೂ ನಿನ್ನ ಮುದ್ದು ಮುಖಕ್ಕೆ
ಕನ್ನಡಿ ಹಿಡಿಯುವಾಸೆ
ನಾ ಸೋತ ಪ್ರತಿ ಸಲವೂ;
ನಿನ್ನ ನೀ ನೋಡಿಕೊಂಡೇ ನಾಚುವೆ

ನಾ ಅದ ಸಂಪೂರ್ಣ ದೋಚುವೆ!!

ಗೆಳೆಯರು ದೂರುತ್ತಾರೆ
ಪ್ರಣಯ ಕಬ್ಬದ ಹಬ್ಬದಂದು
"
ನೀ ಈಚೆಗೆ ಬದಲಾದೆ" ಎಂದು;
ನಕ್ಕು ನುಡಿಯುತ್ತೇನೆ

"
ಉಳಿ ಸೋಕಿದ ಕಲ್ಲಿಗೆ ತಿಳಿಯದ್ದೇನಿದೆ
ಎಲ್ಲವೂ ಕಲಾವಿದೆಯ ಕೈಚಳಕ"
ಸೋತವನ ಗೆಲುವಿನ ಮಾತಿದು!!


-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...