ಕವಿತೆಯ ಕೊನೆಯಲ್ಲಿ

ಎಲ್ಲಿಗೆ ಬಂದು ತಲುಪಿಬಿಟ್ಟೆ?
ಸ್ವಲ್ಪ ಯಾರಾದರೂ ಕೈ ಹಿಡಿದು ನಡೆಸಿ

ದಂಡೆ ಸಿಗುವ ತನಕ;

ಬಿಡುವು ನೀಡದೆ ಪಿಸುಮಾತನಾಡಿ
ಅಲೆಗಳು ಕಿವಿಗೊಡಲು ಮೇಲೆದ್ದು
ಎಲ್ಲೋ ಒಂದು ಕಡೆ ದಬ್ಬಿಬಿಡಲಿ

ಮುತ್ತು ತೆಗೆಯಲೆಂದು ನೀರಿಗೆ ದುಮುಕಿದ್ದು,
ಉಸಿರಾಟದ ಹುಡುಕಾಟದಲ್ಲೇ

ಅರ್ಧಕ್ಕೂ ಮೀರಿ ಪ್ರಾಣ ಹಾರಿತು;
ಇನ್ನುಳಿದ ಚೂರು ಕೊನೆಯದಾಗಿ ನೆನಪಿಸಿಕೊಂಡದ್ದು

ಕಡೆ ಜಗಳವಾಡಿದ ಅವಳು ಮತ್ತು
ಸಾಲ ಹಿಂದಿರುಗಿಸದ ಅವನು

ಉಪ್ಪು ಎಷ್ಟು ಕಹಿಯಾಗಬಲ್ಲದೋ
ಅಷ್ಟೂ ಪ್ರಮಾಣ ನುಂಗಿಬಿಟ್ಟಿದ್ದೆ,
ಋಣ ತೀರಿಸುವ ಮಾತು ಬೇರೆ

ಅಲ್ಲೇ ಸತ್ತು ಕೊಳೆತರೆ
ಮರುಜನ್ಮವೂ ಬೆಚ್ಚಿ ಬೀಳಬಹುದು!!

ನಕ್ಷತ್ರಗಳ ಎಷ್ಟು ಹೊಗಳಿ, ಪಾಡಿ
ಬರೆದಿದ್ದೆ ಅದೆಷ್ಟೋ ಕವಿತೆಗಳಲ್ಲಿ;
ಯಾವೂ ಸಹಾಯಕ್ಕೆ ಬರಲಿಲ್ಲ

ದೂರ ದೂರ ನಿಂತು ಬಿಟ್ಟಿದ್ದವು,
ಚಂದ್ರನಂತೂ ಮುಗಿಲ ಮರೆಯ ಹೇಡಿ


ಇದೀಗ ಶಕ್ತಿಯ ಕೊರತೆ
ಅಲ್ಲಿಯೂ ಮೂಡಿತು ಕವಿತೆ
"
ನನ್ನ ಬಿಟ್ಟು ಸಾಯಿ ಮಾರಾಯ"
ಎಂದು ಅಂಗಲಾಚಿ ಬೇಡುತ್ತ

ಮೂಡಿತು ಕವಿತೆ, ಕೊನೆಯದಾಗಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩