ಕ್ಷಮೆಯಿರಲಿ ಎಂದಿನಂತೆ

ಅಷ್ಟು ಸುಲಭವಲ್ಲ
ಕವಿತೆಗಳನ್ನ ಮಾರುವುದು
ಸಾಧಾರಣ ಸರಕನ್ನ
ಯಾರೂ ಮೂಸುವುದಿಲ್ಲ

ಅಲ್ಲಿ ಒಂದಿಷ್ಟು ವಿವಾದದ ಕಿಚ್ಚು
ಅಸ್ಮಿತೆಗಳ ಅನಾವರಣ
ಮೌಢ್ಯಗಳ ಛೀಮಾರಿ
ಧರ್ಮದ ತಳಿತ
ದೇವರುಗಳ ತುಳಿತವಿರದಿದ್ದರೆ
ಅದು ಬಲು ಹಗುರ
ಸಪ್ಪೆ ಅನಿಸುವ ಸಂಕಲನ

ಪ್ರೇಮ, ನೋವು, ಏಕಾಂತ
ಹಳೆ ಗುಜರಿ ಮಾಲುಗಳು
ಸೇಲಾಗುವುದಿರಲಿ
ಸೋಂಕಿಸಿಕೊಳ್ಳಲೂ ಅನರ್ಹ

ಮೂಲೆಗುಂಪಾದವುಗಳ
ಒಂದಿಷ್ಟು ಪೇರಿಸಿ
ಹೊಸತೇನನ್ನೋ ಕಟ್ಟುವ ಆಸೆ,
ಹಿಂದೆಯೇ ಹತಾಶೆ


ನಡುವೆಯೂ ಒಂದು ಕವನ
ಕೊನೆಗೊಳ್ಳದೆ ಮುಗಿದು
ಮಣ್ಣ ಹಿಡಿಯಲ್ಲಿ ಶಪಿಸುವಾಗ
ಕಣ್ಣು ತೇವಗೊಳ್ಳುವುದು ಸಹಜ

ಹೀಗೂ ಹೊಮ್ಮಿದ ಕವನಕ್ಕೆ
ಕ್ಷಮೆ ಕೋರುತ್ತ ಚುಕ್ಕೆ ಇಟ್ಟೆ,
ನಮ್ಮಯ ಹಕ್ಕಿ ಇಗೋ

ಬಿಟ್ಟೇ ಬಿಟ್ಟೆ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩