ಬಹಳ ಕಾಲವಾಯಿತು

ಕಣ್ತುದಿಯಲ್ಲೇ ಕದ್ದ
ಅದೆಷ್ಟೋ ಕನಸುಗಳ
ಮಾರಾಟವಾಗಿ ಸಂತೆ ಸಪ್ಪೆ ಹೊಡೆದಿದೆ,
ಸರಕಿನ ಕೊರತೆಯಿಲ್ಲಿ

ಗೀಚಿಕೊಂಡ ಲೆಕ್ಕಾಚಾರಗಳು
ಒಂದೊಂದಾಗಿ ವಿರಾಗಮಾನವಾಗಿ
ತಪ್ಪಾಗುವಾಗ
ಸರಿಪಡಿಸುವ ಯತ್ನಗಳೆಲ್ಲ ತಡವರಿಸಿದವು

ಗೆಳತಿ,
ದೂರವಿದ್ದು ಮರೆವುದು ಸುಲಭ ಅಂದುಕೊಂಡೆ
;
ನಿನ್ನ ಸಾಮಿಪ್ಯದ ಒದ್ದಾಟದ ಹಸಿವು

ಹೆಚ್ಚುವಾಗಲೆಲ್ಲ
ಕಣ್ಣೀರು ಜಾರಿ ಬೀಳುತ್ತದೆ,
ಕ್ಷಣಕೆ ಕಡಲೇ ಕಿರಿದು

ಇನ್ನು ಕಣ್ಣಿರು ಯಾವ ಲೆಕ್ಕ

ಹಗುರಾದ ಮನಸೇ ಭಾರ,
ಊಹೆಗೂ ನಿಲುಕದ ಭಾವವನ್ನ

ಪದಗಳಲಿ ಕಟ್ಟಿಟ್ಟು ಸೋಲದೆ
ಇಷ್ಟು ಕಾಲ ಸುಮ್ಮನಿದ್ದೆ,
ಬಾರದ ನಿದ್ದೆ ಕಾರಣ ಕೇಳುವಾಗ

ಬಾಯ್ಮುಚ್ಚಿ ಮಲಗಿಸಿದೆ
ಒಮ್ಮೊಮ್ಮೆ ಉಸಿರುಗಟ್ಟಿಸಿ

ತಿಳುವಳಿಕೆ ಬೇಡದ ಬುದ್ಧಿಗೆ
ನಿನ್ನ ನೆನೆಪಿನ ಹೊದಿಕೆಯ ನೆರವು
ನೀನೇ ಆಗಬೇಕು ಎಲ್ಲಕ್ಕೂ
ಅದು ಸಾವಿಗೆ ಅಪ್ಪಣೆ ನೀಡುವ ವಿಚಾರ
ಅಥವ

ಬದುಕಿನ ಬಂಡವಾಳಕ್ಕಾಗಿರಬಹುದು
ನೀನೇ ಬೇಕು

ನಡು ನಡುವೆ ಬಿಕ್ಕಳಿಸಿ
ಅರ್ಥ ಕಳೆದುಕೊಂಡ ಸಾಲುಗಳಿವೆ
ಅವು ನಿನಗೇ ಅರ್ಥವಾಗಬೇಕು
ಅಪಾರ್ಥಕ್ಕೆ ತಿರುಗುವ ಮುನ್ನ

ಸಂಜೆಗೆ ಬಾ
ಎಂದಿನ ಹಗಲುಗನಸನು ಹೊತ್ತು,
ಕಣ್ಣ ತೇವವಾಗಿಸಿಕೊಂಡು

ಸಾರಿಸಿ ಸಿಂಗರಿಸಿಕೊಳ್ಳುವೆ
ನಿನ್ನ ಆಗಮನಕ್ಕೆ ಎದುರು ನೋಡುತ್ತ!!

-- ರತ್ನಸುತ

Comments

  1. ಅಪಾರ್ಥಕ್ಕೆ ತಿರುಗುವ ಮುನ್ನ ಅರ್ಥವಾದೀತೇ ಕಡೆಗೇ? :-(

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩