ನೆನಪಿನ ನೆಪದಲ್ಲಿ

ಹಣೆಯ ಒತ್ತಿ ತುಟಿಗಳು
ಬಿಚ್ಚಿಕೊಳ್ಳಲಾಗದಷ್ಟು ಬಿಗಿಯಾಗಿ
ನಾಲಗೆ ಒಳಗೊಳಗೇ ಹೊರಳಿ
ನುಂಗಿಕೊಂಡ ನೂರು ಮಾತಿಗೆ
ಕವಿತೆ ಎಂದು ಹೆಸರಿಟ್ಟೆ,
ಇನ್ನೂ ಓದಿಸಿಕೊಳ್ಳುತ್ತಿಲ್ಲ ಅದು
ನಿನ್ನ ಓದಿಗಾಗಿ ಮೀಸಲಿಟ್ಟು
ಹಿಡಿಗೆ ಸಿಗದಂತೆ ಕದ್ದೋಡಿ
ಆಸೆಗಳೆ ಸದೆಬಡಿದ ನಿನ್ನ
ಊಹೆಯಲಿ ಹೂವಂತೆ ತಡವಿ
ಎದೆಗಪ್ಪಿಕೊಂಡಾಗ
ಮಿಡಿತಗಳ ಏರಿಳಿತದ ಹಾಡು
ಇನ್ನೂ ಮೌನಾಚರಿಸುತಿದೆ
ನಿನ್ನಾಲಿಸುವಿಕೆಗೆ ಕಾದು
ಯಾವ ಗಳಿಗೆಯಲಿ ಕದಲಿದೆನೋ,
ಜೋಳಿಗೆ ಹೊತ್ತು ಜಂಗಮನಾದೆ
ದವಸ, ಧಾನ್ಯಗಳೆಲ್ಲ ಹಸಿವ ನೀಗಿಸುತಿಲ್ಲ
ಖಾಲಿ ಜೋಳಿಗೆ ತುಂಬ ಹಂಬಲದ ಕೂಗು
ಭಿಕ್ಷೆ ನೀಡುವ ನೆಪದಿ
ಮಿಂಚಿ ಮರೆಯಾಗು!!
ಸಂಜೆಗತ್ತಲ ಮುಗಿಲಿನತ್ತ ಮುಖ ಮಾಡಿ
ನಕ್ಷತ್ರಗಳ ವಿಂಗಡಿಸಿಡುವೆ ನಿನಗೆ,
ವಜ್ರ ಮೂಗುತಿ, ಬೆಂಡೋಲೆ ಸಹಿತ
ಪದಕ ಮಾಲೆಗೆ ಸೂಕ್ತವಾದವುಗಳಾರಿಸಿ
ಆಪ್ಪಣೆ ನೀಡುವೆ ಎಂದು ಭಾವಿಸುತ
ಕುಲುಮೆಯ ಕೆಂಡಕ್ಕೆ ಉಸಿರೆರೆದು ಕಾದೆ
ಹಿತ್ತಲ ಲತೆಗಳದು ಒಂದೊಂದು ಕಥೆಯಲ್ಲ
ಬಾಡದಂತೆ ನಿರ್ಬಂಧವ ಹೇರಿಹೆನು,
ನಿನ್ನ ಹೊರತಾಗಿ ಬಾಡಿದವು ಬಾಡಲಿ
ನನ್ನಂತೆ ಮೋಹಗೊಂಡವು ಮಾತ್ರ ಉಳಿಯಲಿ
ನಿನ್ನುಗುರು ಗಿಲ್ಲಿ ವಾರಗಳೇ ಕಳೆದಿವೆ
ಬಳ್ಳಿಯಷ್ಟೇ ಕಾತರ ಗಲ್ಲಕೂ ಉಂಟು!!
ತೋರ್ಬೆರಳು ಸೆಟೆದುಕೊಂಡಿದೆ
ನಿನ್ನ ಬೆರೆಳ ಕೊಂಡಿಯ ಅನುಪಸ್ಥಿತಿಯಲ್ಲಿ,
ಕೊರಳ ಉಲಿಯಲಿ ನಿನ್ನ ಹೆಸರ ಸಹಿ
ಮನದ ಮರೆಯಲಿ ದೂರಾದ ಕಹಿ.
ಇನ್ನೂ ಅದೆಷ್ಟೋ ಹೆಸರಿಸಲಾಗದಷ್ಟು
ವಿವರಿಸಲಾಗದಷ್ಟು ಬೇನಾಮಿ ಭಾವಗಳ
ನಿನಗೆ ತೋರ್ಪಡಿಸೋ ಬಯಕೆ;
ತುಸು ಹೆಚ್ಚೇ ಬಿಡುವಿಟ್ಟು ಬಾ
ಒಟ್ಟಿಗೆ ಸಾಯುವ ಅವಕಾಶವೂ ಉಂಟು!!

                                           -- ರತ್ನಸುತ

Comments

  1. ಸಹಸ್ರ ಬೇನಾಮಿ ಭಾವಗಳ ಸಂಚಯವು ಒಲವಿನ ಪಕ್ವತೆಗೆ ಮೊದಲ ಹೆಜ್ಜೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩