ಪ್ರಶ್ನೆ ಪತ್ರಿಕೆ

ಕಾಯಿಸಿ ಕವೇರಿದ ಎದೆ ಮೇಲೆ
ನೀರ ಅದ್ದಿ ಸಹಿ ಹಾಕಿದವಳೇ
ಹಿಂದೆಯೇ ಅಳಿಸಿಹೋದದ್ದು
ಕಣ್ಣಿಗೆ ಬೀಳದಷ್ಟು ಅಮಾಯಕಳಾದೆಯಾ?

ಉಸಿರು ಸೋಕುವಷ್ಟು ಸನಿಹ
ಇನ್ನೂ ಸನಿಹ ಬಂದಮೇಲೂ
ಅನುಮಾನಕೆ ಮಣೆಯ ಹಾಕಿ

ಒಂದೂ ಸುಳುವು ನೀಡದಂತೆ ದೂರ ಸರಿದೆಯಾ?

ಉಗುರು ಬೆಚ್ಚಗಿನ ಒಲವಲಿ
ಯಾವ ಬೇಳೆ ಬೇಯದು,
ಬೆಂದರದು ವಿರಹದಲ್ಲಿ

ಸತ್ಯವ ಅರಿವ ಮೊದಲೇ ಹಾರಿಹೋದೆಯಾ?

ಕಾಲು ದಾರಿಗಳಿಗಾವ ನೇಮ?
ಪಡೆದದ್ದೇ ಬದಿ, ನಡೆದಲ್ಲೆ ಗುರಿ

ಅಲ್ಲೂ ಗುರುತಿನ ಚಿನ್ಹೆ ಅಳಿಸಿ
ಕುರುಡಾಗಿಸಿ, ಕಡೆಗಣಿಸಿ ಜಾರಿಕೊಂಡೆಯಾ?

ಒಪ್ಪಿದ ಮನಸನು ಸೀಳಿ
ಇಣುಕಿ ನೋಡುವ ಚಾಳಿ
ಕಲಿತದ್ದಾದರೂ ಎಲ್ಲಿ?
ಮರು ಜೋಡಣೆ ಬೇಕನಿಸಿದೆ, ಕೇಳಲಾರೆಯಾ?


ಇಟ್ಟ ಪ್ರಶ್ನೆಗಳೆಲ್ಲ ಹಾಗೇ ಇವೆ
ಬಿಟ್ಟ ಖಾಲಿ ಸ್ಥಳಗಳನ್ನು
ಅನುಕಂಪದಿ ಸೋಕಿ ಹೊಗು
ಉತ್ತರಿಸುವ ಮನಸಾದರೆ ತಿರುಗಿ ನೋಡೆಯಾ?

ಮರಳ ಮೇಲೆ ಗೀಚಿ ಅಲೆಯು
ಅಳಿಸಿದಂಥ ಗುಟ್ಟುಗಳಿಗೆ
ಜೋಡಿ ಗುಟ್ಟುಗಳ ಹಂಬಲ
ಗುಟ್ಟಾಗಿಯಾದರು ನನ್ನ ಪ್ರೀತಿ ಮಾಡೆಯಾ?

-- ರತ್ನಸುತ

Comments

  1. ಅವರಿಗೋ ಪ್ರಶ್ನೆಗಳನು ಉತ್ತರಿಸಲೂ ಇಲ್ಲ ವ್ಯವಧಾನ
    ಅವರ ನೆನಪುಗಳಲೇ ಬದುಕನೆಳೆವ ನಮಗದೇ ಧ್ಯಾನ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩