ನನ್ನಿಂದ ದೂರಾಗಿ

ಇದ್ದ ಕೊಂಡಿ ಕಳಚಿ
ಬಿದ್ದ ಸುಮಾರು ಅಹಂಗಳ
ಮೇಲೆತ್ತಲಿಕ್ಕೂ ಮುಜುಗರ
ಮುಂದೆ ಸಾಗುತ್ತಿದ್ದಂತೆ
ಹಿಂದೆ ನೆರಳು ಅದೇನನ್ನೋ ಸೂಚಿಸಿ
ಸಂತೈಸಿದಂತೆ ಕಂಡು
ವಿಕಾರವಾಗಿ ರೇಗಿದೆ
ನೆರಳು ಎಂದೂ ನನದಾಗಿರಲಿಲ್ಲ
ಸದಾ ನನ್ನ ಬಿಟ್ಟೇ ನಿಲ್ಲುತ್ತಿತ್ತು
ಔಪಚಾರಿಕ ಸ್ಪರ್ಶಕೆ ಒದಗಿ
ಅಲ್ಲಲ್ಲಿ ಚಿಗುರಿಕೊಂಡ
ನನ್ನವೇ ಸಂತತಿಗಳ ಕತ್ತರಿಸಿದ್ದು
ವ್ಯಾಪಕವಾಗಬಹುದಾದ ಆತಂಕದಿಂದ
ಕಿರಿದಾದ ಆಕಾಶವ ತಲುಪಲಾರದೆ
ಅಂತರದ ನೆಪವೊಡ್ಡಿ ನಿಂತ
ನಿಸ್ಸಹಾಯಕ ಕೈಗಳ ಕತ್ತರಿಸಿಕೊಳುವೆ
ಸೋತಾಗಿನ ನೆಪಗಳು ನಿಜಕ್ಕು ಅಸಡ್ಡೆಕಾರಿ
ದಿಂಬಿಗೆ ಒಣಜಂಭದ ಕೊಂಬು
ಕನಸುಗಳ ರಾಯಭಾರಿ ತಾನೇ ಎಂದು,
ನಾ ಚಾಪೆಯಡಿ ನುಸುಳಿ
ಬರಿ ನೆಲವ ನಂಬಿದೆ
ಆಗಲೇ ಆಕಾಶ ನಕ್ಕದ್ದು
ಭೂಮಿ ಮುನಿಸಿಕೊಂಡದ್ದು
ನನ್ನ ನಿರ್ಲಿಪ್ತತೆ ನಿಮಿತ್ತವಲ್ಲ
ನಿತ್ರಾಣ ನೆನಪುಗಳೇ ಆಗಿರಬಹುದು,
ಬಿಟ್ಟು ಹೋದ ನೆನ್ನೆಗಳು
ನಾಳೆಗಳ ತಲೆ ಕೆಡಿಸಿ
ಮತ್ತೆ ನನ್ನ ನಾನಾಗಿಸಬಹುದು
ಯಾವುದಕ್ಕೂ ಎಚ್ಚರವಿರಬೇಕು
ನನ್ನಿಂದ ದೂರುಳಿದು!!

                                     -- ರತ್ನಸುತ

Comments

  1. 'ನೆರಳು ಎಂದೂ ನನದಾಗಿರಲಿಲ್ಲ
    ಸದಾ ನನ್ನ ಬಿಟ್ಟೇ ನಿಲ್ಲುತ್ತಿತ್ತು'
    ಮನಸೆಳೆಯಿತು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩