Friday 20 February 2015

ಸಾವಿನ ಸತ್ಯ

ಸಾವಿನ ಸತ್ಯ ಸತ್ತವನೇ ಬಲ್ಲ
ಅಂತೆ-ಕಂತೆ ಮಾತು ಮಿಕ್ಕೆಲ್ಲ
ಅರೆ ಮುಚ್ಚಿದ ಕಣ್ಣ ಮುಚ್ಚುವುದು ಮಣ್ಣು
ಹೆಣದ ಪಾಡು ಬಳಿಕ ಕೇಳುವವರಿಲ್ಲ

ಚೌಕಾಶಿ ಮಾಡಿ ಗೆದ್ದ ಹಾರವೊಂದು
ಎದೆ ಮೇಲೆ ಬಹುಕಾಲ ಉಳಿದಿಲ್ಲ ನೋಡಿ
ದೂರದ ನೆಂಟರು ಬಸ್ಸಿಳಿದು ಬಂದರು
ಚಿಲ್ಲರೆ ಕಾಸಿಗೆ ಜಗಳವಾಡಿ

ಹೊಗೆಯಾಡುತಿಲ್ಲ ಉರಿದ ಬೆರಣಿಯಲಿ
ಬೆಂದ ಅನ್ನಕೆ ಬಿದಿರುಗಡ್ಡಿಯಿಟ್ಟಾಡಿಸಿ
ಅಕ್ಕ ಪಕ್ಕದ ಹಳ್ಳಿಗಳಿಗೆ ಮುಟ್ಟಲಿ ಸುದ್ದಿ
ಹಲಗೆ ಏಟನು ಚೂರು ಗಟ್ಟಿ ಹೊಡೆಸಿ

ಅತ್ತವರ ಪಕ್ಕಕ್ಕೆ ಕೂತವರ ಕರೆಯಿರಿ
ಚಟ್ಟ ಕಟ್ಟಿದವರಿಗೆ ಕೊಟ್ಟು ಕಳಿಸಲಿ
ಜೋಪಾನವಾಗಿ ತಂದಿಳಿಸಿ ಹೆಣವನ್ನು
ಅಂತಿಮ ಪಯಣಕ್ಕೆ ಸಜ್ಜುಗೊಳಲಿ

ಕಲ್ಲ ಮೇಲೆ ಕೆತ್ತಿ ಬಿಡಿ ಹುಟ್ಟು, ಸಾವಿನ ದಿನಾಂಕ
ಗೊತ್ತಾಗಲಿ ನಾಳೆಗೆ ಬದುಕಿದ್ದ ಅವಧಿ
ಅಡ್ಡಗಟ್ಟದಿರಿ ದಾರಿಗೆ ಬಿಡಿ ದಾರಿ ಬಿಡಿ
ಬರಲಿ ಬಂದಷ್ಟೂ ಹೆಣಗಳ ಸಾಲು ಸರದಿ

ಸತ್ತವರ ಗತವಿನ್ನು ಮನೆಯ ಗೂಟಕ್ಕೆ
ಜೋತು ಬಿದ್ದ ಕಪ್ಪು ಬಿಳುಪು ಪಟದ ಒಳಗೆ
ಗುಟ್ಟು ಅವರವರೊಡನೆ ಸತ್ತಾಯ್ತು ಎಲ್ಲರೂ
ಗುಲಾಮರೇ ತಾನೇ ಕಾಲ ಚಕ್ರ ಕೆಳಗೆ?!!

-- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...