ಹೀಗೂ ಆಗಬಹುದೇ?!!

ಹೃದಯ ಜೋರಾಗಿ ಬಡಿದುಕೊಳ್ಳುತ್ತಿದೆ
ಅವಳು ಇಲ್ಲೇ ಎಲ್ಲೋ ಸುಳಿದು ಹೋಗಿರಬಹುದು
ಕಣ್ಣು ಕಾರಣಗಳ ಕೇಳುತ್ತಿವೆ
ಅವಳು ಇಲ್ಲೇ ದಾರಿ ತಪ್ಪಿರಬಹುದು

ಕನಸುಗಳು ಬಿದ್ದು ಗಾಯಗೊಂಡಿವೆ
ಅವಳು ಇಲ್ಲೇ ನಿದ್ದೆಗೆಟ್ಟಿರಬಹುದು
ಬಯಕೆಗಳು ಚಿಗುರೊಡೆಯುತ್ತಿವೆ
ಅವಳು ಇಲ್ಲೇ ಮೈನೆರೆದಿರಬಹುದು

ಪ್ರಾಣ ಪರಿತಪಿಸುತಲೇ ಬೇಯುತ್ತಿದೆ
ಅವಳು ಇಲ್ಲೇ ಏದುಸಿರು ಇಟ್ಟಿರಬಹುದು
ಮೌನ ಅನುಸರಿಸುತಲೇ ಸಾಗುತ್ತಿದೆ
ಅವಳು ಇಲ್ಲೇ ಬಿಕ್ಕಳಿಸಿರಬಹುದು

ಚುಕ್ಕಿ ಇಕ್ಕಟ್ಟಿಗೆ ಸಿಕ್ಕಿ ನರಳಿದಂತಿವೆ
ಅವಳ ಕಣ್ಣ ದಿಟ್ಟಿಸಿರಬಹುದು
ಹಕ್ಕಿ ಜೊತೆ ಬಯಸಿದಂತಿದೆ
ನನ್ನೊಂದಿಗೆ ಅವಳ ಕಲ್ಪಿಸಿಕೊಂಡಿರಬಹುದು

ಜೀವನ ಸವಕಲಾಗಿದೆ
ಅವಳು ವಿಸ್ತರಿಸಬಹುದು
ಪ್ರಣಯ ಮುರುಕಲಾಗಿದೆ
ಅವಳು ಜೊಡಿಸಿಡಬಹುದು!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩