ಹೆಸರಿಲ್ಲದವನಾದ ನಾನು...

ಹಗಲಿಗೊಂದು ಚಂದ್ರನ ಕನಸು
ರಾತ್ರಿ ದೀಪದ ಬೆಳಗಿನಲ್ಲಿ
ನನಸಾಗಿಸಿಕೊಂಡ ಹುರುಪು;
ನಾನಿಷ್ಟೇ, ಎಲ್ಲರಲ್ಲೊಬ್ಬ

ದಿಗಂತಕ್ಕೆ ಕೈ ಚಾಚಿ
ಗಾಳಿಯ ಅಪ್ಪುವ ಸಾಮಾನ್ಯ

ಎತ್ತರದ ಕಟ್ಟಡದ ನೆರಳನ್ನು
ಮೆಟ್ಟಿ ನಿಂತ ಪರಾಕ್ರಮಿ
ಎಲ್ಲವನ್ನೂ ಮೋಹಿಸುವ ಪ್ರೇಮಿ
ಇನ್ನೂ ಶೂನ್ಯ, ಬೇನಾಮಿ!!

ಹಕ್ಕಿಯ ಹಾರಾಟವನ್ನೂ
ಪುಟ್ಟ ಮಗುವಿನ ಅಂಬೆಗಾಲ ನಡಿಗೆಯನ್ನೂ
ಜೋಡಿಸಿ ನೋಡುವ ತಿಳಿಗೇಡಿ,
ಊರ ಗಡಿಯಲ್ಲಿ ನಿಂತು

ಎತ್ತಲಾಗಿಯೂ ವಾಲದ
ಸಿಕ್ಕ ಜೊತೆಗಾರರ ಬಾನಾಡಿ

ಒಬ್ಬಂಟಿತನ ಅಭ್ಯಾಸ ಬಲ,
ತುಂಬು ಸಂತೆಯಲ್ಲೂ ಹೊರತಾಗಿ ನಿಲ್ಲಬಲ್ಲ

ದೂರವಿದ್ದೇ ಎಲ್ಲರೊಳು ಬೆರೆಯಬಲ್ಲ
ನೀರಿನ ಆಕಾರದವನು

ನನ್ನ ಕುರಿತು ನಾಲ್ಕು ಮಾತಿಗೂ ಮೊದಲೇ
ಮೌನದ ಸಲ್ಲಾಪ,
ಒಮ್ಮೆಮ್ಮೆ ಪೂಜಿಪ ಕಲ್ಲಿನಂತೆ

ದೇವರ ಸ್ವರೂಪ

ಫಕೀರನ ಜೋಳಿಗೆ
ಹಾಲುದಂತದ ನುಡಿ
ಮೊಟ್ಟೆಯೊಳಗಿನ ಕಾವು
ಕಡಲ ಬೆರೆತ ಹನಿಯ ಹಾಡು
ಚಾಟಿಯ ನೋವು
ನೇಗಿಲ ಹಸಿವು
ಬಣ್ಣದ ಬಿಳುಪು
ಬೇವಿನ ಸಿಹಿಗನಸು

ಇವ್ಯಾವುದಕ್ಕೂ ಸಂಬಂಧಿಸದ ನಾನು
ಗಾಳಿಗೆ ಹಾರಿಸಿ ಬಿಟ್ಟ ಹಾಳೆ,
ಖಾಲಿತನವನ್ನು ತುಂಬಿಪ ಕಲೆಗಳೇ

ನನ್ನ ಜೀವನ ಪಾಠ ಶಾಲೆ!!

-- ರತ್ನಸುತ

Comments

 1. ಜೀವನ ಪಾಠ ಶಾಲೆಯನ್ನು ಕಟ್ಟಿಕೊಟ್ಟ ರೀತಿ ನೆಚ್ಚಿಗೆಯಾಯಿತು.

  Ultimate:
  'ಹಕ್ಕಿಯ ಹಾರಾಟವನ್ನೂ
  ಪುಟ್ಟ ಮಗುವಿನ ಅಂಬೆಗಾಲ ನಡಿಗೆಯನ್ನೂ
  ಜೋಡಿಸಿ ನೋಡುವ ತಿಳಿಗೇಡಿ'

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩