ಅಂದಕ್ಕೆ ಶರಣಾಗಿ

ಮುದ್ದಾದ ಮುಖದಲ್ಲಿ
ಸುಕ್ಕು ಚಿಂತೆಗಳನ್ನು
ಮರೆಸುವ ಔಷಧವ ನೀಡಲೇನು?
ಸುಡು ಬಿಸಿಲ ತಡೆವಂಥ

ಸಣ್ಣ ಮುಗಿಲಿಗೆ ಒಂದು
ಮನವಿ ಪತ್ರವ ಬೇಗ ಬರೆಯಲೇನು?

ಆದದ್ದು ಆಗಲಿ
ನಕ್ಷತ್ರಗಳ ಹೊಸೆದು
ಬಾನಂಗಳದಿ ಹೆಸರ ಬಿಡಿಸಲೇನು?
ಹೆಚ್ಚು ಹೊಳೆಯುವ ತಾರೆ

ಅಕ್ಕ ಪಕ್ಕ ಮಿನುಗಿ
ಒಂದು ನೀನಾಗು ಮತ್ತೊಂದು ನಾನು

ತೂಕಡಿಕೆಯ ತಡೆದು
ಏನ ಜಯಿಸುವೆ ಹೇಳು?
ಕನವರಿಸು ವರಿಸಿಕೊಂಡಂತೆ ನನ್ನ

ಉಸಿರ ಬಿಗಿಹಿಡಿಟ್ಟೆ
ಮನಸನ್ನು ತೆರೆದಿಟ್ಟೆ
ನನ್ನ ನೆರಳಾವರಿಸಿಕೊಳಲು ನಿನ್ನ

ಬಿಡುವಲ್ಲಿ ನೆನೆ ನನ್ನ
ಬಿಕ್ಕಳಿಸಿ ಸಾಯುವೆ
ಬಿಡಿಸಿಕೊಳ್ಳಲು ಆಗದಂತೆ ಕಾಡು
ನಿನ್ನ ಹಿಡಿದಿಡುವಲ್ಲಿ
ಸೋತವೆಲ್ಲ ಸಾಲು
ನಿನ್ನ ಕುರಿತು ಹೇಗೆ ಬರೆವೆ ಹಾಡು?

ಕಣ್ಣಾಚೆ ನೀ ದೂರ
ಕಣ್ಣೊಳಗೆ ಹತ್ತಿರ
ಹೆಣ್ಣಾಗಿ ವರ ಪಡೆದ ಶಿಲ್ಪ ಕನ್ಯೆ
ಸೋಲುವುದೇ ಪರಿಪಾಠ
ಅದರಲ್ಲೂ ಮಜವುಂಟು
ಆಸಕ್ತಿ ಮೂಡಿಸಿದೆ ಪ್ರೇಮ ವಿದ್ಯೆ

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩