ಕಾವ್ಯ ಶೃಂಗಾರ

ಅಷ್ಟು ಚಂದದ ನಗುವನ್ನ
ತೂಗಲು ತಕ್ಕಡಿಯಿಲ್ಲ ಎದೆಯಲಿ,
ಗುಡಾಣವಾಗಿದೆ ಎದೆಯೀಗ

ಪ್ರತಿ ಬಾರಿ ದೋಚಿ ಕೂಡಿಟ್ಟು;
ಅಲ್ಲಿ ಕಳ್ಳ ಹೆಗ್ಗಣವಾಗಿ

ಚೂರು, ಚೂರಾಗಿ ನಿನ್ನ ಸವಿಯುತ್ತೇನೆ

ಮಿಠಾಯಿಗೆ ಅಂಟಿದ ಕೀಟದಂತೆ
ಅಲ್ಲೇ ಸಾಯುತ್ತೇನೆ!!

ಅನಾಮಧೇಯ ಬೆರಗನ್ನ
ಇಷ್ಟರ ಮಟ್ಟಿಗೆ ಹಚ್ಚಿಕೊಂಡದ್ದು

ಇದೇ ಮೊದಲಿರಬೇಕು;
ನಿನ್ನ ಹೆಸರು, ಕುಲ, ಗೋತ್ರವನ್ನೂ

ಅರಿಯದೆ ವಾಲಿದ ಹೃದಯ
ಚೂರು ಅತಿರೇಖದ ಒಲವನ್ನೇ ತೋರುತ್ತಿದೆ

ಕಡುಗೆಂಪು ಕೈ ಬೆರಳ ಗೋರಂಟಿ
ಮತ್ತದರ ಸುಶ್ರಾವ್ಯ ಸಂಚಲನ
ಮನವ ಕಲಕಿಬಿಟ್ಟದ್ದು
ರೋಮ ರೋಮಕ್ಕೂ ರವಾನೆಯಾಗಿ
ರೋಮಾಂಚಿತನಾಗಿದ್ದೇನೆ

ನಿನ್ನ ಹೆಜ್ಜೆಗಾಗಿ ಕಾಯುವ ನನ್ನ ಪ್ರತಿ ಹೆಜ್ಜೆ
ನಿನ್ನ ಹಿಂಬಾಲಿಸುವುದನ್ನೇ ರೂಢಿ ಮಾಡಿಕೊಂಡು
ಸ್ವಂತಿಕೆಯನ್ನೇ ಮರೆತಿದೆ;
ಈಗೀಗ ನಾ ಅಲೆಮಾರಿಯಾಗಿರುವೆ
,
ನಿನ್ನಗಲಿಕೆಯ ನಿಮಿಷವನ್ನೂ ಸಹಿಸಲಾಗದೆ

ನಿನ್ನ ಅಭಿಮಾನಿಯಾಗಿದ್ದೇನೆ!!

ಪದಗಳೇ ಇಲ್ಲದ ಕವಿತೆಯಲಿ
ನಿನ್ನ ಹುಡುಕುವ ದೆಸೆಯಿಂದ
ಮೂಡಿದವುಗಳೇ ಬಾಯಾರಿದ
ಬಸವಳಿದ ಪುಡಿ ಅಕ್ಷರಗಳ ಬಂಢಾರ;
ನೀ ಒಂದು ಸಾಲಲ್ಲಾದರೂ ಸುಳಿದು ಹೋಗು

ಕಾವ್ಯವೂ ಶೃಂಗಾರ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩