ಖಾಲಿ ಲೆಕ್ಕಾಚಾರ

ಪ್ರಾಣ ತುಂಬಿದ ಬಳ್ಳ
ಈಗ ಖಾಲಿತನ ಅನುಭವಿಸುತ್ತಿದೆ,
ತುಂಬಿಸೋಣವೆಂದರೆ ಭಯ
ಮತ್ತಾರಿಗೋ ಎರೆಯಲು ಮುಂದಾಗಿ
ಅಸೂಯೆಯಲ್ಲೇ ಸಾಯುತ್ತೇನೆ
ಅದರ ಖಾಲಿತನವೇ ನನ್ನ ಪೂರ್ಣತೆ
ಇಷ್ಟು ಸ್ವಾರ್ಥಿಯಾಗಬಾರದಿತ್ತು ನಾನು
ಛೇ!! ನನ್ನ ಉಸಿರಾಟದ ಸದ್ದು
ಗುಡಾಣದಲಿ ಹೆಣವಾಗಿ ಧೂಳು ಹಿಡಿದ
ಸೇರು, ಪಾವು, ಅಚ್ಚೇರುಗಳ ಬದುಕಿಸಬಲ್ಲವು
ಅದಕ್ಕಾಗಿಯೇ ಏದುಸಿರು
ನನ್ನ ದಾಹಗಳ ನೀಗಿಸಲು
ಗಡಿಗೆ ಬತ್ತಿಹೋದದ್ದು ಲೆಕ್ಕಕ್ಕೇ ಇಲ್ಲ,
ಕೆರೆಯಲ್ಲಿ ಶುಚಿಗೊಂಡು
ಕೊಡವೊಂದು ಬಳುಕಿರಲು
ಮನೆ ಬಾಗಿಲ ಸದ್ದು ಕೇಳಿದೊಡನೆ
ನಿಚ್ಚಲವಾದ ಮೌನ ಸ್ಥಿರವಾಗುವುದು
ಭಾರದ ಹಸ್ತಾಂತರಗಳ ಸರದಿಯಲಿ
ಸೀಸೆಯ ಸೇಂದಿ
ಅಪ್ಪಟ ಬೂದಿಯಡಿಯ ಕೆಂಡ,
ನೋವಾಗದ ಚಾಟಿ ಬೀಸಿ
ಬಿಡದಂತೆ ಎದೆ ಬಡಿದು
ಹಿಂದೆಯೇ ಮುಲಾಮು ಹಚ್ಚುವ ಗೆಳೆಯ,
ಮತ್ತೇರುತ್ತಿದ್ದಂತೆಲ್ಲ ಸೀಸೆ ನಿರುಪಾಯ
ಹೃದಯ ತುಂಬಿ ಬಂದದ್ದು
ಖಾಲಿಯಾಗುವ ಖಯಾಲಿಯಲ್ಲಿ,
ಅದು ಬಳ್ಳವಾಗಿ ಬಳ್ಳಕ್ಕೇ ಸುರಿದರೆ
ಲೆಕ್ಕಕ್ಕೆ ಬಾರದಾದೀತು
ಹಿಡಿ ಚೀಲ ಮಾಡಿ
ಸೀರೆ ಸೆರಗನು ಹರಡಿ
ಕಣ್ಣಿಂದ ಕಣ್ಣಿಗೆ
ಎದೆಯಿಂದ ಎದೆಗೆ
ಉಸಿರಿಂದ ಉಸಿರಿಗೆ ಮೇಲಂಚು ತಾಕಲಿ
ನಾ ಖಾಲಿಯಾದಾಗ ನೀ ತುಂಬಿ ಬಾ
ನಾ ತುಂಬಿ ಹರಿದಾಗ ನೀ ಬತ್ತಿ ಬಾ!!

                                          -- ರತ್ನಸುತ

Comments

  1. ಬಳ್ಳವನ್ನೂ ನಿಯಂತ್ರಣದಲ್ಲಿಡುವ ಕವಿ ಬುದ್ಧಿವಂತಿಕೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩