ಚಂದಿರನೊಡನೆ

ಉದಯಿಸಿದವು ಒಂದೊಂದೇ ಚುಕ್ಕಿ
ಬಿಕ್ಕಿರಲು ಒಬ್ಬಂಟಿ ಚಂದ್ರ
ಕಣ್ಣಿನಲಿ ಪ್ರಜ್ವಲಿಸುತಿತ್ತು
ಹವಣಿಕೆಯ ಒಟ್ಟಾರೆ ಚಿತ್ರ

ಹಿತ್ತಲಿನ ಕಗ್ಗತ್ತಲೇಕೋ
ಬಿಳಿ ಸೀರೆ ಉಟ್ಟಂತೆ ಭಾಸ
ಬೇಕೆಂದು ತೆರೆ ಮರೆಗೆ ಸರಿದು
ಚಂದಿರ ಮಾಡುವನು ಮೋಸ

ಮುರಿದ ಚುಕ್ಕಿಗಳಿಗೆ ಪಾಪ
ಬಯಕೆಗಳ ಸೆರೆಹಿಡಿವ ಶೋಕಿ
ನಿಂತಲ್ಲೇ ಮಿನುಗಬೇಕು ತಾನು
ಪ್ರತಿಮೆಗಳ ಪ್ರಾಸಕ್ಕೆ ಸಿಕ್ಕಿ

ದೂರುತಿದೆ ಚಂದ್ರ ಸುರಿದ ಜೊನ್ನು
ಕಡಲ ಅಲೆ ತುಂಟಾಟವಾಡಿ
ಮರಳಿಗೂ ರೋಸೆದ್ದು ಹೋಯ್ತು
ಬಿಡಿಸಲಾಗದ ಜಗಳ ನೋಡಿ

ವಿರಹಿಯ ಕರೆಯೋಲೆಯೊಂದು
ಗಾಳಿಗೂ ಹುಚ್ಚಿಡಿಸಿದಂತೆ
ಮುದಿ ಮರದ ಕೊಂಬೆ ಕೊಂಬೆಗಳಿಗೆ
ಉದುರಿದ ಎಲೆಗಳದೇ ಚಿಂತೆ

ಕಂಬಳಿ ಹೊದಿಸಿಟ್ಟ ಕನಸು
ಎಚ್ಚರಗೊಳ್ಳುತ್ತ ಮುಂದೆ
ಇಟ್ಟಿತು ಹೆಜ್ಜೆ ಮೇಲೆಜ್ಜೆ
ತೂಕಡಿಕೆಯ ಹೊತ್ತು ಹಿಂದೆ

ಮಧ್ಯ ರಾತ್ರಿಯ ಎಚ್ಚರಕೆ
ಕಿಟಕಿಯಾಚೆ ಇಣುಕೋ ಚಡಪಡಿಕೆ
ಬಾನ ಜರಡಿಯ ಕೆಳಗೆ
ಬೆಳ್ಳಿ ತರಂಗಗಳ ಮನವರಿಕೆ

ಚಂದ್ರ ಹಗಲ ಸ್ವಪ್ನ
ಇರುಳು ಬೆಳಕ ಬೆನ್ನು
ಬದುಕು ಸೀಮೆರಹಿತ ಯಾನ
ಕನಸು ಅದರ ಕಣ್ಣು!!

-- ರತ್ನಸುತ

Comments

  1. ಸೋಸು ಜರಡಿಯಿಂದಳಿವ ತಾರೆಗಳ ಮೇಳವೇ ಇರುಳು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩