ಸಾವೇ ಇಲ್ಲದ ದೇವರು
ಏದುಸಿರು ಬಿಡುತ್ತಿದ್ದಾನೆ
ಸಾವ ಕಂಡು
ಬಹುಶಃ ಆತನಿಗೂ
ಪ್ರಾಣ ಬೆಲೆ ಅರಿವಾಗಿರಬೇಕು
ಆ ಕ್ಷಣಕೆ;
ಹಣೆಗಂಟಿದ ಬೆವರ ಸಾಲ
ಮರೆಸಲಾರದಷ್ಟು ಮುಗ್ಧ,
ಲೋಕ ತಲ್ಲಣಗಳೆಲ್ಲ ಅವನೊಳಗೆ
ಅರೆ ಗಳಿಗೆ ಸ್ತಬ್ಧ!!
ಅವನ ಗದ್ದುಗೆ ಅಲುಗಾಡುತ್ತಿದೆ
ಅವನದ್ದೇ ಕಂಪನಕ್ಕೆ,
ಹೃದಯ ಈಗಷ್ಟೇ ವೃದ್ಧಿಗೊಳ್ಳುತ್ತಿದೆ
ಮಿಡಿತಗಳು ಕಿವಿ ಕದವ ತಟ್ಟುವಷ್ಟು
ವಿಪರೀತವಾಗ ತೊಡಗಿವೆ
ಚಿತೆ ಮೇಲೆ ಉರಿದ ಹೆಣ
ಜಲಾಗ್ನಿ ರಾಗದಲ್ಲಿ ಇಂಪಾಗಿ ಹಾಡುತ್ತ
ಬೇಯಲು ಕಾರಣ
ಮೇಲೆಲ್ಲೋ ಆ ದೇವರ ಹತೋಟಿಗೆ ಸಿಗದೆ
ಕೆಳ ಜಾರಿದ ಕಣ್ಣೀರೇ ಇರಬೇಕು
ತಲೆಗೊಂದು ಕೊಡೆ ಹಿಡಿದವರು
ಚಿತೆಯ ಹತ್ತಿರಕ್ಕೂ ಸುಳಿಯದೆ
ದೂರುಳಿದಾಗ
ದೇವರು ಇನ್ನಷ್ಟು ಬಿಕ್ಕುತ್ತಾನೆ
ಮಳೆ ಜೋರಾಗುತ್ತದೆ!!
-- ರತ್ನಸುತ
No comments:
Post a Comment