ಅಪರಿಚಿತ ಪ್ರೇಮ

ಆಕೆ ಯಾರೋ ಅಂದುಕೊಂಡು
ನನ್ನ ತಡೆದು ಕೈ ಹಿಡಿದಳು
ಜೀವವೇ ಅವಳ ಕೈವಶವಾಯಿತು
ಸ್ಪರ್ಶ ಸುಖವೇ ಅಪ್ರತಿಮವೆನಿಸಿತು

ಆಕೆ ಹೆದರಿದಳು ನಿಜ
ಎಷ್ಟೇ ಆದರೂ ಹೆಣ್ಣು
ಅಂಜಿಕೆಯ ತೋರ್ಪಡಿಕೆ ಸಹಜ;
ನಾನೋ ಒಳಗೊಳಗೇ ಕಂಪಿಸುತ್ತಿದ್ದೆ

ಹೊರಗೆ ಸಹಜವಾಗಿ ನಟಿಸಿ
ಸೋತು ಹೋದೆ ಕೊನೆಗೆ
ಆಕೆಯ ತೊದಲು ನುಡಿ "Sorry"ಗೆ

ಇನ್ನೂ ರಿಂಗಣಿಸಿದೆ ಅವಳ ದನಿ
ಶಂಖದೊಳಗಿನ ನಿನಾದದಂತೆ;
ಅವಳ ಹಿಡಿಯ ಜಾಗದ ರೋಮಗಳು

ಎದ್ದೆದ್ದು ಕುಣಿದಂತೆ
ಈಗಷ್ಟೇ ದಣಿದಂತೆ
ಮನಸೆಲ್ಲ ಅವಳಂತೆ!!

ಕಣ್ಣು ಮುಚ್ಚಿದರೆ
ಅವಳ ಅಧರವೇ ಕಾಣುವಾಗ
ತುಟಿ ಚಿಲಕ ಮೆಲ್ಲಗೆ ತೆರೆದು
ಹಾಡೊಂದ ಹಾಡುತ್ತೇನೆ
ಅವಳ ಓರೆಗಣ್ಣನು ತಾಕಿ ಬರಲು,
ಪರಿಚಯಕ್ಕೊಂದು ನೆಪವ ಕೊಡಲು


ಇರುಳುಗಳು ಒಂದಿಷ್ಟು ಪೋಲಿಯಾಗಿ
ಬರೆದ ಹಾಳೆಗಳೆಲ್ಲ ಖಾಲಿಯಾಗಿ
ಸ್ಥಿತಿ ತಲುಪಿದಾಗ
ಹಾಗೇ ಒಮ್ಮೆ ಎದುರಾಗಿ ಕೇಳುತ್ತಾಳೆ
"Hey, How are you?"


-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩