Friday 20 February 2015

ಕತ್ತಲ ಹಿಂದೆ ದೇವರು

ದೇವರು ಬಾಗಿಲ ಹಿಂದೆ ಅವಿತಿದ್ದಾನೆ,
ನಾಲ್ಕು ಚಿಲಕದ ಕೈ

ಊರಿನ ನಾಲ್ಕು ಮಹನೀಯರ ಬಳಿ;
ಒಬ್ಬ ಊರು ಬಿಟ್ಟವ

ಒಬ್ಬ ಮೂರೂ ಬಿಟ್ಟವ
ಒಬ್ಬ ಲೋಕ ಬಿಟ್ಟವ
ಒಬ್ಬ ಕಳೆದುಕೊಂಡವ;

ಅಗ್ರಹಾರದಲ್ಲಿ ಎಕ್ಕರೆ ಜಮೀನು,
ಅಲ್ಲಿ ಕೃಷಿ ಮಾಡಿ

ಜೀವನ ಸಾಗಿಸುತ್ತಿದ್ದ ಪೂಜಾರಿ
ಕಾಯಕವನ್ನೇ ಕೈಲಾಸವಾಗಿಸಿಕೊಂಡ

ದೇವರು ಪ್ರತಿಷ್ಟಾಪನೆಗೊಳ್ಳುವಾಗ
ಗೊಣಗುತ್ತಲೇ ಇದ್ದನಂತೆ,
ತಳವನ್ನು ಭದ್ರಗೊಳಿಸಿ

ಅಲುಗಾಡದಂತೆ ನಿಲ್ಲಿಸಿದಾಗ
ಹೆಜ್ಜೆ ಮುಂದಿಕ್ಕಲಾಗದೆ ಆತ
ಉಳಿಯಾಜ್ಞೆಯಂತೆ ನಗುತ್ತಲೇ ಇರಬೇಕಾಗಿ
ಎಷ್ಟು ಕುಪಿತನಾಗಿರಬಹುದು?!!

ನೈವೇದ್ಯದ ಅಂಟಿಗೆ ನೊಣಗಳು ಮುತ್ತಿ
ಕೈಲಿಡಿದ ಅಸ್ತ್ರ ಪ್ರಯೋಗ ಮಾಡಲಾಗದಷ್ಟು
ನಿಷ್ಪ್ರಯೋಜಕವಾಗಿದ್ದು ಶೋಚನೀಯ


ವರ್ಷಕ್ಕೊಮ್ಮೆ ತೆರೆಯುತ್ತಿದ್ದ ಬಾಗಿಲು
ದಶಕ ದಾಟಿಯೂ ಯೋಗವಿಲ್ಲ;
ಬಹುಶಃ ತೆರೆಯುವ ಹೊತ್ತಿಗೆ

ದೇವರು ಗೋಡೆ ಒಡೆದು ಪರಾರಿಯಾಗಿದ್ದರೂ
ಆಶ್ಚರ್ಯ ಪಡಬೇಕಾಗಿಲ್ಲ!!

ಭಿಕ್ಷುಕನದ್ದೇ ಬದುಕು,
ದೇವರ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ
;
ಒಳಗಿನ ಹಸಿವ ಪರಿವೇ ಇಲ್ಲದೆ

ತೇಗುತ್ತಾನೆ ಕರ್ಕಶವಾಗಿ

"ಬಾಗಿಲು ಒಡೆದರೆ ಕಂಟಕ"
ವಾಸ್ತು ಶಿಲ್ಪಿಯ ನುಡಿ

ಗಡಾರಿಯನ್ನೂ ಗಾಬರಿಗೊಳಿಸಿದೆ

ಇನ್ನೂ ಪಾಪದ ದೇವರಿಗೆ
ನರರ ದರುಶನವಿಲ್ಲ;
ಪಾಪದ ಪುಸ್ತಕದಲ್ಲಿ ತಪ್ಪು ಲೆಕ್ಕ
,
ಪ್ರಳಯವಾಗದಿದ್ದಕ್ಕೆ ಕಾರಣ

ಇದೇ ಇರಬಹುದೇನೋ?!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...