ಒರಟನ ಪದ್ಯ

ಹೋದ ಕಡೆಯಲ್ಲೆಲ್ಲ ಜೊತೆಗೊಂದು ಆಕಾಶ
ಮೋಡ ಎಲ್ಲೋ ದಣಿದು ಸುಮ್ಮನಾಯ್ತು
ಶೂನ್ಯಗಳ ಶುರುವಿಟ್ಟು ಅಲ್ಲೆಲ್ಲೋ ಒಂದಂಕಿ
ನಂತರಕೆ ಶೂನ್ಯವೂ ಕೊನೆಗೊಂಡಿತು

ಬೆನ್ನಿಗಾನಿಸಿಕೊಂಡ ತೇಪೆ ಚೀಲದ ತುಂಬ
ಪಡಪೋಸಿ ನೆನಪುಗಳ ಹೆಪ್ಪು ಗಡ್ಡೆ
ದೂರಕ್ಕೆ ತುದಿಗಂಡು ಚಲಿಸುವಂತಲ್ಲೆಲ್ಲ
ಮೋಸಕ್ಕೆ ಬಲಿಯಾಯ್ತು ಕಣ್ಣ ಗುಡ್ಡೆ

ಚುಚ್ಚಿದ ಮುಳ್ಳಿಗೂ ತುಸು ದೂರ ಪಯಣ
ಬಿಡಿಸಿಕೊಳ್ಳುವ ಮನಸು ಇಲ್ಲವಾಗಿ
ಒಂದಿಷ್ಟು ಅಂಡೂರಿ ಮರಳ ಬೆಚ್ಚಗೆ ಇರಿಸಿ
ಮುಟ್ಟಿಕೊಂಡೆ ಕೆನ್ನೆ ತುಂಬು ಮಾಗಿ

ಒಡೆದ ತುಟಿಯ ಒಂದು ಬಿರುಕಿನಿಂದ ಸ್ರಾವ
ಸವರಿದ ನಾಲಗೆಗೆ ತೀರ ಹಸಿವು
ಸೋತ ಕಿವಿಯಲಿ ಮತ್ತೆ-ಮತ್ತೆ ಕೇಳುವುದೊಂದೇ
ಸೋತವರ ಒಕ್ಕೊರಳ ಜೈಕಾರವು

ಕತ್ತಲಾಯಿತು ಆದರಿಲ್ಲ ನಿದ್ದೆಗೆ ಸಮಯ
ಕನಸುಗಳು ಕಣ್ಮುಚ್ಚಿ ಹೆಣವಾಗಿರೆ
ಎತ್ತ ಸಾಗಲಿ? ಅದುವೇ ಸ್ಪಷ್ಟವಿಲ್ಲದೆ ಹೋಗಿ
ಉಸಿರಾಟ ಮುಂದುವರಿಯಿತು ಆದರೆ

ನಿಂತರೆ ಕೊಳೆಯುವೆ, ನಡೆದರೆ ಸವೆಯುವೆ
ಮಾಡಲೆಂತೋ ಕಾಣೆ ಬದುಕು ಒಗಟು
ನಾಜೂಕು ಜನರೊಡನೆ ಒಡನಾಟದ ಬಯಕೆ
ಏನು ಮಾಡಲಿ ಸ್ವಾಮಿ ನಾನು ಒರಟು!!


-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩