Friday, 20 February 2015

ಶೂನ್ಯ-ಶೂನ್ಯತೆ

ಸೊನ್ನೆ ಬೆಳೆಯುತ್ತಾ ಹೋಯಿತು
ಆದರೂ ಅದರ ಮುಖಬೆಲೆ ಇನ್ನೂ ಸೊನ್ನೆಯೇ

ಮೊನ್ನೆ-ಮೊನ್ನೆಯಷ್ಟೇ ಬೇಡವಾದ
ಲೆಕ್ಕಕ್ಕೆ ಸಿಗದಷ್ಟು ಸೊನ್ನೆಗಳನ್ನ ಅಳಿಸಿ ಹಾಕಿದ್ದೆ
ಇಂದು ಕಣ್ಣೆದುರು ನಿಂತವುಗಳ ನಿಟ್ಟಿಸಿ
ಬೆಳವಣಿಗೆಗಳ ಗಮನಿಸುತ್ತಿದ್ದೇನೆ,
ಸೊನ್ನೆಗಳು ನಿಜಕ್ಕೂ ನಿರಾವಲಂಬಿ


ಕಲಿತ ಮೊದಲ ಬರಹವೂ ಅದೇ,
ಕೈ ಹಿಡಿದು ನೇರ ರೇಖೆಗಳ ತಿದ್ದಿಸಿಯೂ

ಸ್ವತಂತ್ರ ಬೆರಳು ಸುತ್ತುತ್ತಿದುದು
ಅದೇ ಸೊನ್ನೆಯ ಸುತ್ತ

ಶೂನ್ಯತೆಗೂ ಶೂನ್ಯಕ್ಕೂ ಒಗಟಿನ ಸಂಬಂಧ,
ಶೂನ್ಯ ಇದ್ದೆಡೆ ಶೂನ್ಯತೆ ಕಾಣದು

ಶೂನ್ಯತೆ ಇದ್ದೆಡೆ ಶೂನ್ಯಗಳು ಕಾಣವು;
ಒಮ್ಮೊಮ್ಮೆ ಶೂನ್ಯಗಳೂ ಶೂನ್ಯತೆಯನ್ನು ಮರೆಸಿ

ಬದುಕಿನ ಗುರುತುಗಳಾಗಿ ನಿಲ್ಲುತ್ತವೆ

ಸೋತವನ ಆಸ್ತಿ ಶೂನ್ಯ
ಪ್ರಯತ್ನಿಸದವನ ಆಸ್ತಿ ಶೂನ್ಯತೆ;
ಹಾಗಾದರೆ ನಾನು ಸೋತವ

ಸಂಭ್ರಮಕ್ಕೆ ಪರರ ಗೆಲುವಿದೆ,
ಅದು ದಕ್ಕಿದ್ದು ನನ್ನ ಸೋಲಿನಿಂದಲೇ ಎಂದು

ನಾನೂ ಸಂಭ್ರಮಿಸುತ್ತೇನೆ;
ತಿಳಿಗೇಡಿತನದ ಪರಮಾವಧಿ ಅನ್ನದಿರಿ!!


ಅಕ್ಷರಕಂಟಿದ ಸೊನ್ನೆ ರೂಪಕೂ
ಚುಕ್ಕಿಯ ಆಚೆ ತುದಿಯ ಸೊನೆಗೂ
ಆಶೂನ್ಯ ಅಂಕಿಯ ಬಾಲದ ಸೊನ್ನೆಗೂ
ಎದೆಗೆ ಹೊರೆಯ ಹೊರೆಸಿದ ಶೂನ್ಯಕೂ
ಸಾಂದರ್ಭಿಕ ಮಹತ್ವ

ಸೊನ್ನೆಯನ್ನ ಸೊನ್ನೆಯಾಗಿ ಕಾಣದೆ
ಸೀಮೆಯಾಗಿ ಕಾಣುವ ಆಸೆಬುರುಕ ಕಣ್ಣೂ,
ಶೂನ್ಯ ಭಾವಕ್ಕೆ ಸಮನಾಗಿ ಹೊಂದಿಕೊಳ್ಳುವ

ಮುಕ್ತಿ ಮಾರ್ಗ ಮಣ್ಣೂ
ಕಲಿಸುವ ಪಾಠಗಳಿಗೆ ತೆರೆದುಕೊಂಡ ಬದುಕು
ಶೂನ್ಯ ಸಂಪಾದನೆಯಲ್ಲಿ ಸಿಲುಕಿದೆ
ಅದರರ್ಥ
ಬದುಕನ್ನಿನ್ನೂ ಬದುಕಬೇಕಿದೆ!!

-- ರತ್ನಸುತ

2 comments:

  1. ನಿಜ ನಾವೂ ಬದುಕನು ಬದುಕಬೇಕಿದೆ ಅಸಲು!
    ತಮ್ಮ ಸಾಲಿದು ಸಾವಿರ ಅರ್ಥಗಳ ಹೊಮ್ಮಿಸುವ ಭಾವ ಸಾರ:
    'ಶೂನ್ಯ ಇದ್ದೆಡೆ ಶೂನ್ಯತೆ ಕಾಣದು'

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...