ನಿನ್ನ ಕಾಲ್ಬೆರಳುಗುರು ಅಲ್ಲಲ್ಲಿ
ಬಣ್ಣ ಕಳೆದುಕೊಂಡದ್ದ ಕಂಡು
ಮನಸಾಯಿತು ನಲ್ಲೆ
ಅಲ್ಲೆ ಗೋರಂಟಿ ತಂದು ಪೂಸಲು
ನಿದ್ದೆಗಣ್ಣಲಿ ನನ್ನ
ನಿದ್ದೆಗೆಡಿಸಿದ ನಿನ್ನ
ಮುದ್ದಾಟಕೆಳೆಯುವ ಬದಲು
ಚಾಚಿ ಒದಗಿಸಲೇ ಒರಗಿಕೊಳ್ಳಲು
ಈ ನನ್ನ ಹೆಗಲ?
ತಂಬೂರಿ ತಂತಿಯನು
ಮೆಲ್ಲಗೆ ಮೀಟುವಾಗಿನ ಇಂಪು
ಸದ್ದು ಗದ್ದಲವ ಮೆಟ್ಟಿ
ಮನವನಾವರಿಸಿಕೊಂಡದ್ದು
ನಿನ್ನ ಕಣ್ಣಂಚಿಗೆ ಗೊತ್ತಾಗದಿರಲಿ
ಇದೀಗ ತಾನೇ ಹೊರಡಿಸುತಿದೆ
ಹೃದಯ ಒಂದು ಸುತ್ತೋಲೆಯ;
ಮೈಯ್ಯ ಕಣ ಕಣಕ್ಕೂ ನೀ
ಚಿರ ಪರಿಚಿತಳು
ಅನ್ಯರ ಪೈಕಿ ಅನನ್ಯಳು
ಹೇಳುತ್ತಾ ಹೋದರೆ ಪುಟಗಳು
ಹೊರಳೊರಳಿ ಕೊನೆಗೊಳ್ಳಬಹುದು
ಅದಕ್ಕಾಗೇ ನಿನ್ನ ನಗುವಿನ
ಹೊಸ ಸಂಪುಟ ತೆರೆಯಲೆಂದು
ಇಲ್ಲಿ ಬಣ್ಣಿಸದೆ ಬಿಟ್ಟಿದ್ದೇನೆ,
ಕ್ಷಮೆಯಿರಲಿ ಅಸಹಾಯಕನ ಮೇಲೆ
ಹಾ!! ಕೊನೆಯಲ್ಲದ ಕೊನೆಯ ಮಾತು
ನಿನ್ನೊಲವು ದಕ್ಕುವುದೋ ಇಲ್ಲವೋ
ಆ ವಿಚಾರ ಬೇರೆ
ನನ್ನನ್ನು ದಕ್ಕಿಸಿಕೊಂಡಿದ್ದೀಯ,
ಹಿಂದಿರುಗಿಸುವ ಮನಸು ನಿನ್ನದೇ ಆಗಲಿ
ಅಲ್ಲಿ ತನಕ ನಾ ನಾನಲ್ಲದವನು!!
-- ರತ್ನಸುತ
No comments:
Post a Comment