ಲವ್ ದಿಗಂತ

ಸೊನ್ನೆ ಸುತ್ತುತ್ತಲೇ ಹಿಂಬಾಲಿಸಿ
ಒಂದು ಬೆಡಿಕೆ ಇಡುವೆ,
ಉತ್ತರ ಬರೆ ಉತ್ತರವಾಗದಿರಲಿ

ಅಲ್ಲಿ ಒಪ್ಪಿಗೆಯ ಜೊತೆಗೆ
ಒಗಟಿನ ಅಡ್ಡಗೋಡೆಯ
ದೀಪವೊಂದು ಉರಿಯಲಿ
ಎಷ್ಟು ಸಾಧ್ಯವೋ ಅಷ್ಟು
ಒದ್ದಾಡುತ್ತೇನೆ!!

ದೀಪ ದಣಿದು ನಂದುವ ಮುನ್ನ
ಜೋರಾಗಿ ಉರಿದಾಗ
ಗಟ್ಟಿಯಾಗಿ ಅಪ್ಪಿಕೊಂಡು
ಒಂದು ಸಣ್ಣ ಕಥೆ ಹೇಳುವೆ;
ಮುಂಬರುವ ಕತ್ತಲೂ ಆಲಿಸಲಿ

ನಮ್ಮಿಬ್ಬರ ಮೌನವನ್ನ

ಒಂದು ವೇಳೆ ಬೆಳಕು ಹರಿದರೂ
ನಿನ್ನೊಳ ನಾನು, ನನ್ನೊಳ ನೀನು
ಅವಿತುಕೊಂಡಿರಲು ಕಣ್ಣು ಮುಚ್ಚಿ
ಇರುಳನ್ನ ವಿಸ್ತರಿಸಬಹುದು
ತಾಮಸ ಹಸಿವು ನೀಗುವನಕ

ಅನುಮಾನಗಳೇನಾದರೂ ಸುಳಿದು
ಬಗೆಹರಿಯದಾದಾಗ
ನೆನಪಲ್ಲೇ ಒಂದು ಪ್ರಶ್ನೆ ರವಾನಿಸು
ಬಿಕ್ಕಳಿಕೆಯ ನನ್ನ ಸ್ಪಷ್ಟೀಕರಣ
ನಿನ್ನ ಬಿಕ್ಕಳಿಕೆಗೆ ಕಾರಣವಾಗಿ
ಎಲ್ಲಕ್ಕೂ ಇತಿಶ್ರೀ ಹಾಡಬಲ್ಲದು

ರುಪಾಯಿ ಬೆಲೆಯ ಗುಲಾಬಿಯ
ಮುಚ್ಚಿಟ್ಟ ಪಕಳೆಗಳ ಒಳಗೆ
ಗೌಪ್ಯವಾಗಿ ಉಳಿದು
ಹಂತ ಹಂತವಾಗಿ ಬಹಿರಂಗಗೊಳ್ಳಲಿ
ಇಷ್ಟಿಷ್ಟೇ ಒಲವು;

ಆಡಂಬರದ ಹಂಗಿಲ್ಲದೆ
ಅಚಾರಗಳ ಗುಂಗಿಲ್ಲದೆ
ಸಹಜವಾಗಿ ಬಾಡುವ;
ಬೋಳಾದ ಹೂವಿನ ನಡುವೆ

ಉಳಿದುಕೊಂಡ ಪರಾಗದಂತೆ
ಕೈ ಕೈ ಬೆಸೆದು
ದೂರ-ದೂರ ಹಾರಿ
ದಿಗಂತಗಳ ಮೀರುವ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩