ಬಿದಿರ ಸಿಬಿರೊಂದು ತುಟಿಗೆ ಚುಚ್ಚಿ
ಕೊಳಲ ಮೇಲೆ ಕುಪಿತಗೊಂಡಾಗ
ಸತ್ತ ಸ್ವರವೊಂದು ಬಿದಿರುಗಾಡಿನಲ್ಲಿ
ಹಾವಿಯಂತೆ ಅಲೆದಾಡುತ್ತಿದೆ
ತಂತಿ ಮುರಿದು ಬೆರಳ ಕೊಯ್ದು
ಕೊನೆಯ ಬಾರಿ ಕಂಪಿಸಿದಾಗ
ಬಿಗಿದ ತುದಿಯ ದಡದ ಮೌನ
ಅನಾಥ ಭಾವದಲಿ ಬದುಕಿದೆ
ತೊಗಲು ಹರಿದ ಮೃದಂಗದಲ್ಲಿ
ತುಮುಲಗಳ ತಡಿಕಿತವು ತೊರೆದು
ತೂತು ಬಿದ್ದ ಘಟವು ತಾನು
ಬಿಕ್ಕಿ ಬಿರಿದು ಒಡೆದಿದೆ
ರಾಗ ಹೊರಡದ ಕೊರಳು ಒಂದೆಡೆ
ಶಾರದೆಯ ಜಪಗೈಯ್ಯುತಿರಲು
ತೂಕಡಿಸಿದ ಭಕ್ತಿಯಲ್ಲಿ
ಪದ್ಮ ಪುಷ್ಪವು ಬಾಡಿದೆ
ರಂಗು ಮಾಸಿದ ಇಂಥ ಸಂಜೆಯ
ಶಾಪವಿತ್ತ ನಿನ್ನ ಕಣ್ಣಿನ
ಕಾಡಿಗೆಯ ಕರಗುವಿಕೆಯಲ್ಲಿ
ನನ್ನ ಪ್ರಾಣ ಮರುಗಿದೆ!!
-- ರತ್ನಸುತ
No comments:
Post a Comment