ನಿಮಗೂ ಹೀಗನಿಸಿದ್ದುಂಟೇ?

ಗುಟ್ಟುಗಳಿಗೆಲ್ಲ ಬೀಗ ಜಡಿದು
ಮುಕ್ತವಾಗಿ ಬದುಕುತ್ತಿದ್ದೆ
ಮುಖಕ್ಕಿಂತ ಬೆನ್ನಿಗೇ ಕೇಳುವಂತೆ
ಹೆಚ್ಚು ಮಾತನಾಡುತ್ತಿದ್ದವರು
ಹಿಂದಿರುಗಿ ನೋಡಿದರೆ ಸುಗುಣರೇ;
ಅರೆ, ಇದು ಹೇಗೆ ಸಾಧ್ಯ?!


ಸಾಣೆ ಹಿಡಿದ ಚಾಕುವೊಂದು
ಜೇಬಲ್ಲಿ ಸದಾ ಚರ್ಮವ ನೂರುತ್ತಿತ್ತು
ಅವಶ್ಯಕತೆಯಿಲ್ಲವೆಂದು ಬಿಸಾಡಿದ ದಿನವೇ
ನನ್ನ ಕಗ್ಗೊಲೆಯಾಗಿಹೋಗಿತ್ತು
ನಂಬಿಕೆಯ ಅನ್ವರ್ಥನಾಮ ಮೋಸವೇ?!!

ಕಣ್ಣು ಮುಚ್ಚಿ ತಲುಪಿದಷ್ಟೂ ದೂರ
ಕಣ್ದೆರೆದು ನಡೆಯಲಾಗಲಿಲ್ಲ,
ಬಹುಶಃ ಎತ್ತಲೋ ಆಕರ್ಶಿತನಾದೆ

ಅಥವ ಭಯಭೀತನಾದೆನೇನೋ!!
ನೊಟಕ್ಕೆ ಪುಕ್ಕಲುತನವ ಬೆಸೆದವರಾರೋ?!!


ಬಟ್ಟೆ ಮೈ ಮುಚ್ಚಿದಂತೆಲ್ಲ
ನಾ ನಾನಲ್ಲವೆನಿಸತೊಡಗುತ್ತದೆ
ಅದೇಕೋ ಬೆತ್ತಲಾಗುವ ಇಚ್ಛೆ,
ನಗೆಪಾಟಲಾಗುವ ಭಯ
;
ಗೊಂದಲದಲ್ಲೇ ಬದುಗುವ ಶಾಪ!!


ಸಂತೆಗಳು ಶಾಂತವಾಗುವ ಮುನ್ನ
ನನ್ನಂಥ ಅದೆಷ್ಟು ಮಂದಿಯ
ಮನಃಶಾಂತಿಯನ್ನ ಕಿತ್ತು ತಿಂದವೋ!!
ಈಗ ಅದೇ ಶಾಂತಿಯ ಅರಸುತ್ತಿದ್ದೇನೆ

ಸಂತೆಯ ಸರಹದ್ದುಗಳಾಚೆ
ಎಲ್ಲೆಲ್ಲೂ ಗದ್ದಲದ ವೈಭವೀಕರಣ;

ನನ್ನಂತವರೂ ಆಗಾಗ ಸಿಗುತ್ತಾರೆ
ಲೋಟ ಚಹ ಹೀರುವ ತನಕವಷ್ಟೇ;
ಕಷ್ಟ ಹಂಚಿಕೊಂಡವರೇ ವಿನಹ

ಪರಿಹಾರ ಕಂಡುಕೊಳ್ಳುವ ಮುನ್ನ
ಆಕಳಿಕೆ ಬೇರ್ಪಡಿಸುತ್ತಿತ್ತು

ಹೇಳಿ, ನಿಮಗೂ ಹೀಗನಿಸಿದ್ದುಂಟೇ?

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩