ಹೇಳಲು ಮರೆತಿದ್ದೆ

ಹೇಳಲು ಮರೆತಿದ್ದೆ
ಗೂಡಿನಿಂದ ರೆಕ್ಕೆ ಬಡಿದು
ಮೊದಮೊದಲು ಹಾರಲು ಕಲಿತಾಗ
ಎದುರು ಗಾಳಿಯ ಸವಾಲಿನಂತೆ
ನೀ ನನ್ನ ಬಲಪಡಿಸಿದೆ

ಹೇಳಲು ಮರೆತಿದ್ದೆ
ಬಣ್ಣ ಬಣ್ಣದ ಹೂವ ನಡುವೆ
ಅಚ್ಚು ಮೆಚ್ಚಿನ ಪಾರಿಜಾತ
ಸಿಹಿ ಪರಾಗದ ರಾಶಿಯಲ್ಲಿ
ಜೇನ ಕುಂಭವ ಹಿಡಿದ ನೀನು
ಸುರರ ಪರ ವರ ದೇವತೆ

ಹೇಳಲು ಮರೆತಿದ್ದೆ
ಕಣ್ಣು ಮುಚ್ಚಲು ಕನಸಿನಲ್ಲೂ
ಹೃದಯ ಬೆಚ್ಚಗೆ ಬಯಕೆಯಲ್ಲೂ
ಮಧುರ ಮೌನದ ಗುನುಗಿನಲ್ಲೂ
ಸದ್ದು ಗದ್ದಲ ಇಂಪಿನಲ್ಲೂ
ನಿನ್ನ ಹೆಜ್ಜೆ ಗುರುತಿದೆ

ಹೇಳಲು ಮರೆತಿದ್ದೆ
ಅಪರ್ಣದೊಳಗಣ ಪತ್ರವನ್ನು
ಜಲದ ಪದರದ ಚಿತ್ರವನ್ನು
ನೀಲಿ ಗಗನದ ಚಪ್ಪರವನ್ನು
ಕಡಲ ಅಲೆಗಳ ಮೇಳವನ್ನು
ನಾ ನಿದ್ದೆಗೆಟ್ಟು ರಚಿಸಿದೆ

ಹೇಳಲು ಮರೆತಿದ್ದೆ
ನನ್ನ ನೋಡಿ ದಿನಗಳೇ ಕಳೆದವು
ನಿನ್ನ ಮನೆಯ ಕನ್ನಡಿಯನು
ನೀಡಿ ಹೋಗು ದಿನದ ಮಟ್ಟಿಗೆ
ತೃಪ್ತನಾಗುವೆ ಕಂಡು ಅದರಲಿ
ಮತ್ತೆ ನಿನ್ನದೇ ಬಿಂಬವ

ಹೇಳಲು ಮರೆತಿದ್ದೆ
ಇಂದು ಏನೂ ಹೇಳಲಾಗಿಲ್ಲ
ನಾಳೆ ವಿವರಿಸೋ ಹಂಬಲ

ಸಿಗುವೆ ತಾನೆ?
ಕಾದಿರುತ್ತೇನೆ!!


-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩