ಕಣ್ಣಲ್ಲೆ ಪರಿಚಯವಾಗಿ

ಕಣ್ಣ ಸಾಗರಕ್ಕಿಳಿದು 
ಅಲೆ ಅಪ್ಪಳಿಸುವಾಗ ಎದೆಗೊಟ್ಟು
ಕೇಳುವಾಸೆ ನೊರೆಯ ಗುಳ್ಳೆ ಸದ್ದು
ಹುಚ್ಚು ಮನಸಿಗೆ ಇದುವೇ
ಸರಿ ಹೊಂದುವ ಮದ್ದು
ಹಾಗೊಂದು ವೇಳೆ ಕಾಡಿಗೆಯ ಮೆಟ್ಟಿ
ಹೆಬ್ಬೆರಳು ನಾಚಿದೊಡೆ
ರೆಪ್ಪೆಯ ದಡದಿಂದ ಹೊರ ಬಂದು
ದಟ್ಟ ಕಣ್ಣುಬ್ಬಿನ ಹಾಸಿನ ಮೇಲೆ
ಸೋತಂತೆ ಗೀರುವೆ ಖುಷಿಯಲ್ಲಿ
ನಿನ್ನ ಕಣ್ಣಿನ ಬಣ್ಣ
ನಿನಗಷ್ಟೇ ಮೀಸಲು
ಸಪ್ಪಳದ ಸದ್ದು ಎಚ್ಚರಿಸಿದೆ 
ಸಿಂಗಾರಗೊಂಡ ಅಸಂಖ್ಯ ಕನಸುಗಳ
ತದ್ರೂಪು ನಿನ್ನದೇ ಹಠ ಅವುಗಳಿಗೂ
ಬೇಡೆಂದರೂ ಬಿಟ್ಟು ಉಳಿಯಲಾರವು
ಮತ್ತೆ ಮತ್ತೆ ಸೋಕಿವೆ ಆದ ಹಳೆ ಗಾಯವ
ನೋವಿನ ಅನ್ವರ್ಥ ನಾಮ
ಹಿತಕಾರಿ ನಿಮ್ಮಳ ಪ್ರೇಮ
ಬಲೆ ಬೀಸಿ ಬಂದಿದ್ದೆ
ಕಣ್ಣ ವ್ಯಾಪ್ತಿಯ ಪೂರ
ಸಿಕ್ಕಷ್ಟೂ ಮುತ್ತುಗಳ ದೋಚಲೆಂದು,
ಅರಿವಿಲ್ಲದಂತೆ ನಾ ಸಿಲುಕಿಕೊಂಡಿದ್ದೆ
ಕಾಣದ ಬಲೆಯಲ್ಲಿ ಮೋಹಗೊಂಡು
ನನ್ನ ಪ್ರತಿಬಿಂಬದಲಿ ತಾನು
ಒಂದಿಷ್ಟು ಕಲೆಹೀನವಾದಂತೆ
ಜಾರಿಕೊಳ್ಳುವ ಯತ್ನ ನನದು,
ಕೆನ್ನೆ ತುಂಬೆಲ್ಲ ನನ್ನ ಹೆಜ್ಜೆ ಗುರುತು
ಕಾಣವು ಯಾರಿಗೂ ನಿನಗೆ ಹೊರತು
ಪರಿಚಯವಾದದ್ದು ಆಯಿತು
ಇನ್ನು ನಿನ್ನ ಕಣ್ಣಿಗೆ ನಾನಲ್ಲ ಆಗಂತುಕ
ನಗೆ ಬಾಷ್ಪಗಳೇ ತುಂಬಿಕೊಳಲಿ
ನೋವಿನವು ಸಾಯಲಿ ಮೂಲಕ
ಹನಿ ಹನಿಯ ಉಲಿಗೊಂದು
ಹಾಡನ್ನು ಕಲಿಸುವೆನು
ಸಂತೋಷಕೆ ಮೊಗವು ಮಿನುಗಲಿ 
ನನ್ನ ಅಂತಃಕರಣದ ಮೂಲೆ ಮೂಲೆಯಲಿ
ಪ್ರತಿಧ್ವನಿಸುತ ಹಾಡು ಗುನುಗಲಿ!!

                                          -- ರತ್ನಸುತ

Comments

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩