Friday, 20 February 2015

ಗಾಯವಾಗಿಸಿದವಳೇ!!

ಬೆರಳಿನಡಿಗೆ ಸಿಬಿರು ಬಿಟ್ಟು
ನೋವು ಹೆಚ್ಚಿದೆ
ತೊಗಲು ಬಿಟ್ಟೂ ಬಿಡದೆ ಇದೇ ಮೊದಲು
ಸಾವ ಬಯಸಿದೆ

ಆದ ಗಾಯದೊಳಗೆ ರಕ್ತ
ಹೆಪ್ಪುಗಟ್ಟಿದೆ
ಮುಟ್ಟುವಾಗ ಆದ ನೋವು ತಾನು
ಒಪ್ಪುವಂತದೇ!!

ಹಿಂದೆ ಆದ ಗಾಯ ಅಲ್ಲೇ
ಬೀಡು ಬಿಟ್ಟಿದೆ
ಅದನು ಮರೆಸುವಷ್ಟು ವ್ಯಾಪ್ತಿಯಲ್ಲಿ
ಹೊಸತು ಹಬ್ಬಿದೆ

ಕೀವು ತುಂಬಿ ಗಾಯ ಮಾಗಿ
ಒಡೆವ ಹಾಗಿದೆ
ಇಲ್ಲ ಬೇರೆ ಮಾರ್ಗ ಅದಕೆ ತುಸು
ಮುಲಾಮು ಪೂಸಿದೆ


ಬೆರಳ ಕಿತ್ತು ಒಗೆವ ಹುಚ್ಚು
ನೋವ ತಾಳದೆ
ಆದರಿನ್ನೂ ಹೆಚ್ಚು ನೋವ ತಾ
ಹೃದಯ ತಾಳಿದೆ

ಹೀಗೇ ನಡುವೆ
ನಿನ್ನ ಸ್ಪರ್ಶವಿಲ್ಲದೆ
ನನ್ನ ಎದುರು ನನ್ನದೇ
ಸಂಘರ್ಷವಾಗಿದೆ

ಎಲ್ಲಿ ಅವಿತು ಕೂತೆ
ನನ್ನ ಮೊರೆಯ ಕೇಳದೆ
?
ಅಸಲು ಎಲ್ಲದಕ್ಕೂ ದೊಡ್ಡ ಗಾಯ

ನೀನೇ ಮಾಡಿದೆ!!

-- ರತ್ನಸುತ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...