ಮೌನದೂರಿಗೆ ಪಯಣ

ಮೌನದೂರಿಗೆ ಪಯಣ ಬೆಳೆಸಬೇಕಿದೆ
ಖಾಲಿ ಕಿಸೆಯಲ್ಲಿ ಬಸ್ಸು ಹತ್ತಿದೆ
ಒಳಗೆ ಒಂದೇ ನೂಕು ನುಗ್ಗಲು
ಗದ್ದಲದ ಡಬ್ಬಿಯಲಿ ನಾನೂ ಒಂದು ಕಲ್ಲು

ಊರ ಮುಟ್ಟುವ ಅವಧಿಯ ಸುಳುವಿಲ್ಲ
ನಿರ್ವಾಹಕನ ಕಣ್ತಪ್ಪಿಸಿ ಕೂತೆ,
ತಿರುವುಗಳು ಬಂದದ್ದೂ ಗೊತ್ತಾಗಲಿಲ್ಲ

ದಾಟಿ ಹೊರಟದ್ದೂ ತಿಳಿಯಲಿಲ್ಲ

ಕಂಕಳಲ್ಲಿ ಮಕ್ಕಳ ಹೊತ್ತು
ಕಣ್ಣೀರಿಟ್ಟವರಲ್ಲಿ ನಗೆಯ ಭಿಕ್ಷೆ ಬೇಡುತ್ತ
ಆಗಾಗ ಒಬ್ಬ ಭಿಕ್ಷುಕನ ಪರದಾಟ,
ಅವನಲ್ಲೇ ಒಂದಿಷ್ಟು ಕದ್ದು ನಾನೂ ನಕ್ಕೆ


ಕಂಬಳಿಯೊಳಗೆ ಅವಿತವನಿಗೆ ಕತ್ತಲ ಬರವೇ?
ಅಲ್ಲಲ್ಲಿ ಚೂರು-ಪಾರು ಹರಿದಿದ್ದರದೂ ವರವೇ
;
ನಿಲ್ದಾಣಗಳು ಬರುತ್ತಿದ್ದಂತೆ ಪ್ರಯಾಣಿಕರೆಲ್ಲ ನಾಪತ್ತೆ

ಮೂರು ಮತ್ತೊಬ್ಬರಲ್ಲಿ ನಾನೂ ಒಬ್ಬ
ಎಲ್ಲಿ ಒಬ್ಬಂಟಿಯಾಗಿಬಿಡುವೆನೋ!! ಎಂಬ ಭಯ
ಚೀಟಿ ಕೊಂಡುಕೊಂಡಿಲ್ಲ, ಮೂಡಬಹುದು ಸಂಶಯ

ಕೊನೆ ನಿಲ್ದಾಣಕ್ಕೂ ಮುನ್ನ
ಬಸ್ಸಿಗೆ ನಾನೊಬ್ಬನೇ ಆಸರೆ;
ಅತ್ತ ನಿರ್ವಾಹಕನೂ, ಚಾಲಕನೂ

ಇಳಿದು ಹೊರಟು ಹೋಗಿದ್ದಾರೆ
ತನ್ತಾನೇ ಚಕ್ರಗಳು ಉರುಳಿವೆ

ಯಾವುದೋ ಆಳ ಕಣಿವೆಯ
ಉಬ್ಬು ತಗ್ಗುಗಳ ಸೀಳಿ ಹೊರಟಾಗ
ಮೈ ಮೂಳೆಗಳೆಲ್ಲ ದಿಕ್ಕಾಪಾಲಾಗಿ
ಉಸಿರು ಒಂದೇ ಬಾರಿಗೆ ಮೇಲಂಚ ತಾಕಿತು

ಕೊನೆ ಶಬ್ಧ, ಕೊನೆ ಮಾತು
ಅದ ಮೀರಿ ಯಾವೊಂದೂ ಹೆಜ್ಜೆ ಮುಂದಿಕ್ಕಲಿಲ್ಲ,
ಮೌನ ನನ್ನೊಳಗೆ ನೆಲೆಸಿತು

ನಾ ಅದರೊಳಗೆ ನೆಲೆಸಿದೆ
ಊರು, ಕೇರಿಯ ಹೆಸರು ತಿಳಿಯಲಿಲ್ಲ
ಅದೇ ನನ್ನೂರಾಯಿತು!!

-- ರತ್ನಸುತ

Comments

  1. ಬದುಕೆಂಬುದೇ ಹಾಗೆ, ಅದು ಅಂತ್ಯಕೆನಿತು ಮೌನ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩