ಅಪರಿಮಿತ ರೂಪಸಿ

ನೀನಂತೂ ಸರಿಸಿ ಬಿಟ್ಟೆ
ಮುಖಕ್ಕೆ ಹರಡಿಕೊಂಡ ಕುರುಳ
ಆಗಲೇ ನನ್ನಲ್ಲೂ ತೆರೆದುಕೊಂಡದ್ದು
ಅಸಂಖ್ಯ ದ್ವಾರಗಳು;
ಒಂದೊಂದರ ಹೊಸ್ತಿಲ ದಾಟಿ

ಹೊಮ್ಮಿದ ಪದಗಳ ಸಾಲು
ಇನ್ನೂ ಮುಗಿಯುತ್ತಲಿಲ್ಲ
ಎಷ್ಟೇ ಗೀಚಿದ ಮೇಲೂ

ಚಿಟ್ಟೆಗಳ ಉಪವಾಸ ಕೆಡವಿದ
ಹತ್ತಿರಕೂ ಸುಳಿಯಲು ಬಿಡದ
ನಿನ್ನಧರದ ಸುತ್ತ ನನ್ನ ಮನಸು
ಸೋಬಾನೆ ಪದ ಹಾಡಿ
ಶುಭ ಕೋರುವ ವೇಳೆ
ನಾಚಿ ಇಷ್ಟೇ ಕಚ್ಚಿದರೂ ಸಾಕು
ಅಷ್ಟನ್ನೇ ದೋಚಿ
ಹೃದಯ ಶ್ರೀಮಂತವಾಗುತ್ತದೆ

ಆಲೆಯ ಜುಮುಕಿ ದುಮುದುಮುಕಿ
ಅಲ್ಲೇ ಉಳಿದು ಸಾರ್ಥಕವಾದಂತೆ
ಎದೆ ಬಡಿತದಲ್ಲೂ ಬದಲಾವಣೆ
ಜೋರಾಗಿ, ಏರು-ಪೇರಾಗಿ

ಇಷ್ಟಕ್ಕೂ ನಂಟಿಗೆ ಹೆಸರಿಟ್ಟು
ಏನ ಗಳಿಸುವುದ್ದಿದೆ?
ಒಂದು ಸಣ್ಣ ಮುಗುಳು

ಜೊತೆಗೆ ಚೂರು ದಿಗಿಲು ಹೊತ್ತು
ನಿನ್ನ ಅಕ್ಕ-ಪಕ್ಕ ಸುಳಿಯುತ್ತ
ಕರಗುವ ಸ್ವಾರ್ಥಗಳ
ಬೆವರಂತೆ ಪೋಳಾಗಿಸಲೆಂದೇ
ಸುಡು ಬಿಸಿಲಲ್ಲಿ ಕೊಡೆ ಹಿಡಿದು ಹಿಂದೆ ಬಿದ್ದೆ

ಕನಸಿನ ಮೇಲಾಣೆ
"
ಮನಸೆಲ್ಲಾ ನೀನೇ"
ವ್ಯಾಕರಣ ಹಳೆಯದಾದರೇನು

ಭಾವ ನವ-ನವೀನ;
ನಡುವೆ ಹೀಗೇ

ನಾಟಕೀಯ ಸಂಭಾಷಣೆಗಳು
ನಾಲಗೆಯ ತುತ್ತ ತುದಿಯಲ್ಲಿ
ಭರತನಾಟ್ಯವಾಡುತ್ತಿವೆ

ಮನದ ತೆರೆಯ ಮೇಲೆ
ಬಿಡುವುಗೊಡದ ನಿನ್ನ
ಸ್ತಬ್ಧ ಚಿತ್ರಗಳ ಸಂಕಲನವನ್ನ
ಚಿತ್ರ ಸಂತೆಯಲ್ಲಿ
ಮಾಗಿ ಉದುರಿದ ಹಣ್ಣೆಲೆಯಂತೆ
ನಾನು ವೀಕ್ಷಿಸುತ್ತೇನೆ
ಮತ್ತೆ-ಮತ್ತೆ ಚಿಗುರುವ
ಚೈತನ್ಯಭರಿತ ಸ್ಪೂರ್ತಿಗಾಗಿ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩