Friday 20 February 2015

ನಲ್ಮೆಯ ಗೀಟುಗಳು

ವಾಕ್ಸ್ವಾತಂತ್ರಕ್ಕೆ ನಿನ್ನ ಸ್ವರ ತಡೆ ಗೋಡೆ;
ಏನೋ ಹೇಳಬೇಕೆಂದು ಬಂದವ

ನೀ ಹೇಳಿಸಿದಂತೆ ಕೊನೆಗೊಳ್ಳುತ್ತ
ಕಿಸುಕ್ಕನೆ ನಕ್ಕ ನಿನ್ನ
ದ್ವೇಷಿಸಿದಷ್ಟೂ ಪ್ರೀತಿಸುತ್ತ
ಒಂದು ಹಾಡು ಹಾಡುತ್ತೇನೆ
ಅದೇ ಹಳೆ ರಾಗವ ಹಿಡಿದು

ಕಣ್ಣೋಟವ ಹಿಡಿದಿಡಲಾಗದೆ
ತಲೆ ತಗ್ಗಿಸಿ ಶರಣಾಗತನಾದ ನಾನು
ನಿನ್ನ ನಾಚಿಕೆಯ ನೋಡಲಾಗದ ನತದೃಷ್ಟ
ನಿನ್ನ ಮಂದಹಾಸವ ತುಂಬಿಕೊಳ್ಳದ

ಬರಗೆಟ್ಟ ಬೇತಾಳನ ನೆಂಟ
ದೇವದಾಸನ ಬಲಗೈ ಬಂಟ

ನೀ ನೋಡಿ ಹೋದ ಕನ್ನಡಿಯಲ್ಲಿ
ನಿನ್ನದೇ ಅನುರೂಪದ ಹೊಳಪು,
ಪ್ರಶ್ನೆಗಳು ಸಾವಿರಾರು

ಇರಿದ ಉತ್ತರಗಳು ಚೂಪು;
ನಡೆಸಿಬಿಡು ತೊಗಲು ಗೊಂಬೆಯ

ನಿನ್ನಿಷ್ಟಕ್ಕನುಸಾರವಾಗಿ,
ನೋಡುಗರು ಏನಂದುಕೊಂಡರೂ ಲೆಕ್ಕಕ್ಕಿಲ್ಲ

ನೀ ನಡೆಸಿದಂತೆ ನಾ ತೃಪ್ತ!!

ಬೆರಳ ತುದಿಯ ನೆರಳಿನಾಟಕ್ಕೆ
ನಾ ಕತ್ತಲ ಕೊಣೆಯ ಹಣತೆಯಾಗುತ್ತೇನೆ
ಚೂರು ಥಳುಕು-ಬಳುಕು ನೀ ಸಮೀಪಿಸಿದಾಗ
ದೂರ ಸರಿದಾಗ ಸರಿ ಹೋಗುತ್ತೇನೆ

ಬದುಕಿನ ಬಿಟ್ಟ ಸ್ಥಳಗಳಿಗೆ
ನನ್ನ ತುಂಬಿಸಿಕೊಳ್ಳುವೆಯೆಂಬ
ಅಗಾಧ ನಂಬಿಕೆಯಲ್ಲಿ
ನಿನಗಾಗಿ ನನ್ನನ್ನೇ ಬರೆದು ಕೊಡುತ್ತೇನೆ,
ನಾ ನನ್ನ ಪ್ರೀತಿಸಿದಕ್ಕೂ ಹೆಚ್ಚು ಪ್ರೀತಿ ಕೊಟ್ಟು

ಋಣದ ಭಾರದಲ್ಲೇ ನನ್ನ ಕೊಲ್ಲು

ಇಂತಿ ನಿನ್ನ ಇನಿಯನ ಗೀಟು
ಬೇಕೆಂದರೆ ಕೇಳು ಮಾರ್ಪಾಟು
ಅದಕ್ಕೂ ನಿನ್ನದೇ ಸಲಹೆಯ ಬೇಡುವೆ,
ಒಪ್ಪುವೆ ದೂರಾಗುವ ಮಾತೊಂದ ಬಿಟ್ಟು!!


-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...