ನಿನ್ನ ಕುರಿತು ಬರೆದಷ್ಟೂ....

ಕಣ್ಣುಬ್ಬಿಗೆ ದೃಷ್ಟಿ ತೆಗಿ
ಇಣುಕಿಣುಕಿ ನೋಡಿದಾಗ
ಅಷ್ಟೇ ಕಾಣುವ ಅದಕೆ
ನನ್ನದೇ ದೃಷ್ಟಿ ತಾಕಿರಬಹುದು

ಇನ್ನು ಚೂರು ಕತ್ತೆತ್ತಿದರೆ
ಮಿಂಚುಗಣ್ಣುಗಳ ಬೆರಗು
ಆಬ್ಬಾ!! ಅದೇನು ಸೊಬಗು
ಕಣ್ಣು ಪಾವನವಾದವು

ನಿನ್ನ ಪಾಲಿಗೆ ನನ್ನೀ ಚೇಷ್ಟೆಗಳು
ಅಸಹನೀಯವೆನಿಸಬಹುದು
ನಿಸ್ಸಹಾಯಕ ನಾನು
ಆಗಂತುಕನಾಗಿ ಇಷ್ಟೇ ಕೈಲಾಗಿದ್ದು

ನಿನ್ನ ಆಗಮನದಲ್ಲಿ ಅದೇಕೋ
ಸೂಜಿಗಲ್ಲಿನಂತೆ ನಿನ್ನತ್ತ ಆಕರ್ಶಿತನಾಗುವಾಗ
ತಡೆದಿಟ್ಟ ಶಕ್ತಿಗೆ ಶಾಪವಿತ್ತು
ನಂತರ ಸಂತಾಪ ಸೂಚಿಸುತ್ತೇನೆ

ಮೊದಲು ಪರಿಚಯ
ನಂತರ ಸ್ನೇಹ, ಸಲುಗೆ
ಆನಂತರ ಪ್ರೇಮಾತಿಶಯದ ಗಳಿಗೆ;
ಇನ್ನೆಷ್ಟು ಕಾಯಲಿ
?
ಎಲ್ಲ ಹಂತಗಳನ್ನೂ ಒಮ್ಮೆಲೆ ದಾಟಿ ಬರುವೆ

ತಪ್ಪು ತಿಳಿಯದಿರು

ಹೆಸರ ಪತ್ತೆ ಹಚ್ಚಿದ ಮೇಲೆ
ಅಚ್ಚೆ ಹಾಕಿಸಿಕೊಂಡಂತೆ
ಎದೆಯೆಲ್ಲ ನಿನ್ನದೇ ಗುರುತು
ನಡುವೆ ಕವಿತೆಗಳೆಲ್ಲ
ನಿನ್ನದೇ ಕುರಿತು!!

ನಿವೇದನೆಯ ಕಾಲಕ್ಕೆ ಕಾದಿರುವೆ
ಚಾತಕ ಪಕ್ಷಿಯಂತೆ
ನಿನಗೂ ರೋಗ ಸೋಂಕಲಿ ಎಂಬ
ತುಂಟ ಹಂಬಲ ಹೊತ್ತು!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩