Saturday, 28 February 2015

ಮನದ ಮಳೆ

ಕುಲುಮೆಯಲಿ ಜಾರಿ ಬಿದ್ದ
ನಿನ್ನ ಕಾಲ್ಗೆಜ್ಜೆ ನಾದಕ್ಕೆ
ಜ್ವಾಲೆಯೂ ನಾಚಿ ನೀರಾದ ಸಂಗತಿ
ತಿಳಿಗಾಳಿಗೆ ತಲುಪಿ
ಮೈ ಸೋಕಿ ಹೊರಟಿದೆ,
ತಂಪೆರೆದ ಊರೆಲ್ಲ ನಿನ್ನದೇ ಸುದ್ದಿ
ಅದರಲ್ಲಿ ನನ್ನುಪಸ್ಥಿತಿಯಂತೂ ರದ್ದಿ
ಚಿಮಣಿಯ ಹೊಗೆಯಲ್ಲಿ
ಬಿಡಿಸಿಕೊಂಡ ಭಾವಗಳ ಚಿತ್ತಾರ
ಕ್ಷಣಕೊಂದು ರೂಪ ತಾಳಿ
ಕರಗಿ ಹೋದದ್ದೇ ಹೋದದ್ದು
ಮುಗಿಲುಗಳು ಒಗ್ಗೂಡಿ ಕೈಪಿಡಿದು
ತಟ್ಟಿಸಿಕೊಂಡಂತೆ ಬೇಗೆ
ಕರಗಿ ಹನಿ ಜಾರಬಹುದೇ?
ಆಗ ನವಿಲೊಂದು ಕುಣಿಯಬಹುದೇ?
ಬೋಳು ಬಾಲದ ಹಕ್ಕಿ
ನಿದ್ದೆಗೆಟ್ಟು ತಾನು ನವಿಲಾಗ ಬಯಸಿ
ಪುಕ್ಕಗಳ ಕದ್ದು ತಂದು
ಅಂಟಿಸಿಕೊಳ್ಳುತಿದೆ ಮನ-
-
ದಿ ಮತ್ತೊಂದು ಮಳೆಗಾಲಕೆ
ಕಾಮನ ಬಿಲ್ಲಿನ ಶಿಫಾರಸ್ಸು
ಮಲ್ಲಿಗೆ ಮೊಗ್ಗುಗಳ ಜನನ
ಸ್ವಗತಗಳು ಇದ್ದಲಿನ ಚೂರುಗಳಂತೆ
ಕೆಂಪು ಬಣ್ಣ ಬಳಿದ ನಾಟಕೀಯ ಪಾತ್ರಗಳು,
ಕಾಯದ ಕಬ್ಬಿಣಕೆ ಹಿಡಿಯಿಲ್ಲದ ಸುತ್ತಿಗೆ
ತಟ್ಟಿಕೊಂಡರೆ ಮಾತ್ರ ಜೋರು ಶಬ್ಧ
ಅದು ಅವಳ ನಗೆಯ ಮಾರ್ದನಿ
ಬರಗೆಟ್ಟ ಹಾದಿಯಲಿ
ನಿಕ್ಷೇಪ ಸಿಕ್ಕಿದೊಡೆ
ಫಕೀರನಿಗೂ ಕೂಡ ರಾಜ ಯೋಗ
ಅಂತೆಯೇ ನನಗೆ ನೀ ಸಿಕ್ಕಿದಾಗ
ಈಗಷ್ಟೇ ಹಸಿಯಾದ ನೆಲದಲ್ಲಿ
ನಿನ್ನ ಹೆಜ್ಜೆ ಗುರುತನು ಕಂಡು
ಬಿಲ್ಲೆಗೂ ಆಸೆ ಕುಂಟಲಿಕ್ಕೆ
ಅಷ್ಟರಲ್ಲೇ ಜಾರಿ ಬೀಳುವ ವೇಳೆಗೆ
ತೆಳು ರೆಂಬೆ ಕೈ ಚಾಚಿ ನೀನೇ ಸಿಕ್ಕೆ
ಹೊಣೆಯಲ್ಲ ನಾ ಇದಕೆ
ಇಷ್ಟಕ್ಕೇ ನಿಲ್ಲಿಸುವೆ ಚುಕ್ಕಿಯಿಟ್ಟು
ಅಪೂರ್ಣ ಸಾಲುಗಳ ದೃಷ್ಟಿ ಬೊಟ್ಟು....

                                    -- ರತ್ನಸುತ

1 comment:

  1. ಅವಳನು ಹೊಗಳುವ ಕವಿಗೆ ಒಂದು ಕವಿತೆಯು ಸಾಲದು ಎಂಬುದನ್ನು ನಾವೂ ಒಪ್ಪುತ್ತೇವೆ.
    ಫಕೀರನಿಗೆ ರಾಜ ಯೋಗ ವ್ಹಾವ್...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...