ಬನ್ನಿರೆಲ್ಲ ಕೂಡುವ

"ನನ್ನ ಕೈ ಖಾಲಿ
ಇದನ್ನ ನೋಡಿ ನಗಬೇಡಿ
ನಾನೇನನ್ನೂ ನನ್ನದಾಗಿಸಿಕೊಂಡಿಲ್ಲ
ನನ್ನನ್ನೂ ಸಹಿತ ದಾನ ಮಾಡಿದ್ದೇನೆ
ಅದಕ್ಕಾಗಿಯೇ ನಾನು ಹೀಗೆ
ಫಕೀರನಂತೆ ಹರಕಲು ಬಟ್ಟೆಯಲ್ಲಿ
ಬೀದಿ-ಬೀದಿ ಸುತ್ತುತ್ತಿದ್ದೇನೆ
ಏನಾದರೂ ಗಳಿಸಿ ಹಂಚಿಬಿಡಲು;

ಅನಿವಾರ್ಯವಾದರೆ ದೋಚಲೂ ಸಿದ್ಧ
ಭದ್ರವಾಗಿ ಕೂಡಿಟ್ಟ ಕಜಾನೆಗೆ
ಯಾವ ದಿಗ್ಬಂಧನ ಹಾಕಿದರೂ
ಮುರಿಯುವ ನಿಸ್ವಾರ್ಥ ಅಸ್ತ್ರ ನನ್ನಲ್ಲಿದೆ!!

ಹುಟ್ಟಿದಾಗ ಬೆತ್ತಲಾಗಿದ್ದುದಕೆ
ಬೇಸರ ಮಾಡಿಕೊಂಡವರಾರು ಹೇಳಿ?
ಮತ್ತೆ ಎಲ್ಲರೂ ಮರಳುವ ಬನ್ನಿ

ಪ್ರಸವ ಬೇನೆ ದಾಟಿ ನೆಲೆಸಿದ
ಕ್ಷಣದ ಊರಿಗೆ

ನಂತರ ತೊಡಿಸಿದ ಬಳೆ, ಓಲೆ
ಕಾಲ್ಗೆಜ್ಜೆ, ಮೂಗುತ್ತಿ, ಬೆಳ್ಳಿ ಉಡದಾರ
ಎಲ್ಲವನ್ನೂ ಕಿತ್ತು
ಇಲ್ಲದವರ ಹೊಟ್ಟೆ ತುಂಬೋಣ

ಸಮಾನರಾಗೋಣ ಹಸಿವಲ್ಲಾದರೂ
ಕಣ್ಣೀರ ಜೊತೆಗೊಂದು ಬೆರಳ ನೀಡಿ"

ಬನ್ನಿ ಫಕೀರನಂತೆ
ಹೆಸರು, ಗುರುತು, ಪರಿಚಯವಿಲ್ಲದಂತೆ
ಎಲ್ಲರಲ್ಲೂ ಸಾತ್ವಿಕ ರೂಪಿಗಳಾಗೋಣ;
ನಾನೆಂಬುದು ಒಂದೇ ಆಗಲಿ

ಅದು ನಿಮಿತ್ತವಾಗಲಿ
ಅಲ್ಲಿಯವರೆಗೂ ಸವೆಯೋಣ!!

-- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩