ಭಟ್ಟರೊಂದು ಹಾಡು ಗೀಚಿ
ಕೇಳ ಬಿಟ್ಟು ಸುಮ್ಮನಾದ್ರೆ
ಕೇಳಿದಂಥ ನಮ್ಮ ಪಾಡು
ಕೇಳೋರ್ಯಾರು ಸ್ವಾಮಿ
ಕಾಯ್ಕಿಣಿ ಬರೆದ ಸಾಲು
ಎದೆಗೆ ನಾಟಿಕೊಂಡ ಮೇಲೆ
ಗೆಳತಿಯ ಎಷ್ಟೇ ನೆನೆದರೂ
ನೆನೆದಷ್ಟೂ ಕಮ್ಮಿ
ಹೃದಯವನ್ನೇ ಹಿಂಡುವಂಥ
ಭಾವ ತೀವ್ರ ಪದ್ಯದಲ್ಲಿ
ಮುಳುಗಿಸೆಬ್ಬಿಸುತ್ತ ನಗುವ
ಶಿವನ ಸ್ಮರಿಸಬೇಕು
ಮತ್ತೆ ಮತ್ತೆ ಅದೇ ಪದದ
ಪುನರಾವರ್ತನೆ ಮಾಡುವ
ಕವಿಗಳಲ್ಲೇ ರಾಜನೆನಿಸಿದವರ
ಏನನಬೇಕು?
ಬರುತಲಿಲ್ಲ ನಾಗೇಂದ್ರರು
ಹೊಸತೇನನೂ ಹೊತ್ತು ಮತ್ತೆ
ಮತ್ತದೇ ಸಪ್ಪೆ ಸಾರು
ಹಳಸು ರಾಗಿ ಮುದ್ದೆ
ಹಂಸಲೇಖರಂತೂ
ಈಚೆಗೆಲ್ಲೂ ಕಾಣಸಿಗುತಲಿಲ್ಲ
ನಾದ ಬ್ರಹ್ಮ ಹೊಡೆಯಬಹುದೇ
ಈ ಪಾಟಿ ನಿದ್ದೆ
ಗೌಸು, ವಿಶ್ವ, ಬೋರಗಿ, ಅರಸು
ಅಂತಾರೆ ಆಗಾಗ
ತೀರ ಕಮ್ಮಿ ಆದ್ವು ಅವರ
ಪ್ರಯೋಗದ ಬಾಣ
ಹುಚ್ಚ, ಬಚ್ಚರೆಲ್ಲ ಈಗ
ಪೆನ್ನು ಹಿಡಿದು ಹೊರಟ ಮೇಲೆ
ಎಲ್ಲಿ ಉಳಿಯ ಬೇಕು ಹೇಳಿ
ಕೇಳುಗರ ಪ್ರಾಣ?
ಮರೆತೇ ಬಿಟ್ಟೆ ಕಲ್ಯಾಣರು
ಮಾಡುತಿಲ್ಲ ಯಾವ ಮೋಡಿ
ಮನೋಹರರ ಮೌನವಿನ್ನೂ
ಎಷ್ಟು ದೂರ ಕಾಣೆ
ಒಂದು ಎರಡು ಹಾಡು ಹೊಸೆದು
ಅವಕಾಶವಿಲ್ಲದವರು
ನೆನೆಯಲಿಕ್ಕೆ ನೆನಪಿನಲ್ಲಿ
ಉಳಿದಿದ್ದರೆ ತಾನೆ!!
ಹುಟ್ಟಿನಲ್ಲೇ ಹೊಸಕಿ ಬಿಟ್ಟು
ಇನ್ನು ಚಿಗುರುವಾಸೆ ಹೊತ್ತು
ಉಳಿದ ಹೊಸಬರಿಂದ ಬಂದ
ಹಾಡುಗಳೂ ಚಂದವೇ
ಕಂಡು ಜರಿವ ಬದಲು
ಕೊಂಡು ಸವಿದ ಮೇಲೆ ಹಣ್ಣ ರುಚಿಯು
ಕೊಂಚವಾದ್ರೂ ಇಷ್ಟವಾಗಿ
ಧನ್ಯವಾಗೋದಿಲ್ಲವೇ?!!
-- ರತ್ನಸುತ
No comments:
Post a Comment